
ಬ್ರೆಜಿಲ್: ದಕ್ಷಿಣ ಬ್ರೆಜಿಲ್‌ನ ಪ್ರವಾಸಿ ನಗರವಾದ ಗ್ರಾಮಡೊದಲ್ಲಿ 10 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಸಣ್ಣ ವಿಮಾನವು ಅಂಗಡಿಗಳಿಗೆ ಅಪ್ಪಳಿಸಿದ್ದು, ಎಲ್ಲಾ 10 ಪ್ರಯಾಣಿಕರು ಮೃತಪಟ್ಟಿದ್ದಾರೆ. ವಿಮಾನ ಪತನದ ಬಳಿಕ ಹೊತ್ತಿಕೊಂಡ ಬೆಂಕಿಯಲ್ಲಿ ಅನೇಕರು ಗಾಯಗೊಂಡಿದ್ದಾರೆ.
ನಿಯಂತ್ರಣ ಕಳೆದುಕೊಂಡ ವಿಮಾನವು ಹಲವಾರು ಕಟ್ಟಡಗಳಿಗೆ ಡಿಕ್ಕಿ ಹೊಡೆದು ವ್ಯಾಪಕ ಹಾನಿಯನ್ನುಂಟು ಮಾಡಿದೆ. ಈ ಘಟನೆಯಲ್ಲಿ 12 ಜನರು ಗಾಯಗೊಂಡಿದ್ದಾರೆ ಎಂದು ಬ್ರೆಜಿಲಿಯನ್ ಅಧಿಕಾರಿಗಳು ತಿಳಿಸಿದ್ದಾರೆ. ಘರ್ಷಣೆಯಿಂದ ಉಂಟಾದ ಬೆಂಕಿಯಿಂದಾಗಿ ಅನೇಕರು ಉಸಿರಾಟದ ಸಮಸ್ಯೆಯಿಂದ ಬಳಲಿದರು ಎಂದು ವರದಿಯಾಗಿದೆ. ವಿಮಾನ ಕಟ್ಟಡಗಳಿಗೆ ಅಪ್ಪಳಿಸಿದ್ದರಿಂದ ಬೆಂಕಿ ಹೊತ್ತಿಕೊಂಡಿದೆ, ತೀವ್ರ ಸುಟ್ಟಗಾಯಗಳಿಂದ ಬಳಲುತ್ತಿರುವ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ವರದಿಗಳು ತಿಳಿಸಿವೆ.
ವಿಮಾನವು ಸ್ಥಳೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಅಪಘಾತ ಸಂಭವಿಸಿದೆ ಎಂದು ರಾಷ್ಟ್ರೀಯ ಸಿವಿಲ್ ಡಿಫೆನ್ಸ್ ಹೇಳಿದೆ. ವಿಮಾನವು ವಸತಿ ಗೃಹಕ್ಕೆ ಅಪ್ಪಳಿಸುವ ಮೊದಲು ಕಟ್ಟಡದ ಚಿಮಣಿಗೆ ಡಿಕ್ಕಿ ಹೊಡೆದು ನಂತರ ಪೀಠೋಪಕರಣ ಅಂಗಡಿಗೆ ಅಪ್ಪಳಿಸಿತು. ಅಪಘಾತದ ಅವಶೇಷಗಳು ಸಹ ಹೋಟೆಲ್ ಅಪ್ಪಳಿಸಿವೆ ಎಂದು ಮಾಧ್ಯಮ ವರದಿ ಮಾಡಿದೆ.
ವಿಮಾನದಲ್ಲಿ ಯಾರೂ ಬದುಕುಳಿದಿರುವ ಸಾಧ್ಯತೆಗಳಿಲ್ಲ ಎಂದು ಸ್ಥಳೀಯ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ರಿಯೊ ಗ್ರಾಂಡೆ ಡೊ ಸುಲ್ ಗವರ್ನರ್ ಎಡ್ವರ್ಡೊ ಲೈಟ್ ಅವರು ವಿಮಾನದಲ್ಲಿದ್ದವರು ಯಾರು ಬದುಕಿ ಉಳಿದಿಲ್ಲ ಎಂದು ಹೇಳಿದ್ದಾರೆ. ಇನ್ನು ವಿಮಾನ 10 ಜನರನ್ನು ಹೊತ್ತೊಯ್ದಿದೆ ಎಂದು ಪ್ರಾಥಮಿಕ ಮಾಹಿತಿಗಳು ಹೇಳುತ್ತಿವೆ. ಮೃತಪಟ್ಟವರೆಲ್ಲ ವಿಮಾನದಲ್ಲಿದ್ದವರಾ, ಅಥವಾ ನೆಲದ ಮೇಲಿದ್ದವರಾ ಎಂಬುದು ಸ್ಪಷ್ಟವಾಗಿಲ್ಲ ಎಂದು ಅಂತಾರಾಷ್ಟ್ರೀಯ ಮಾಧ್ಯಮ ವರದಿಗಳು ಹೇಳುತ್ತಿವೆ.
Advertisement