ಜಗತ್ತಿನಲ್ಲಿ ವಿಮಾನ ದುರಂತಗಳು ಪ್ರತಿ ವರ್ಷ ಮರುಕಳಿಸುತ್ತಿರುತ್ತದೆ. ಅದೇ ರೀತಿ 2024ರಲ್ಲಿ ಜಗತ್ತಿನಲ್ಲಿ ನಡೆದ ಭಯಾನಕ ವಿಮಾನ ಪತನದ ವಿವರ ಇಂತಿದೆ.
ಜಪಾನ್ ನ ಟೋಕಿಯೊದಲ್ಲಿ ಜನವರಿ 2ರಂದು ಎರಡು ವಿಮಾನಗಳ ನಡುವೆ ಡಿಕ್ಕಿ ಸಂಭವಿಸಿ ವಿಮಾನವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಒಂದು ವಿಮಾನದಲ್ಲಿ ಕನಿಷ್ಠ 379 ಪ್ರಯಾಣಿಕರು ಮತ್ತು ಸಿಬ್ಬಂದಿ ಸೇರಿ ಸುಮಾರು 400 ಜನರಿದ್ದರು. ಮತ್ತೊಂದು ವಿಮಾನದಲ್ಲಿದ್ದ ಐವರು ಸಿಬ್ಬಂದಿ ಮೃತಪಟ್ಟಿದ್ದರೆ, ಉಳಿದಂತೆ ಎಲ್ಲರನ್ನೂ ಸುರಕ್ಷಿತವಾಗಿ ರಕ್ಷಿಸಲಾಗಿತ್ತು.
ರಷ್ಯಾದ ವಾಯುಪಡೆಯ ಇಲ್ಯುಶಿನ್ ಇಲ್ -76 ಮಿಲಿಟರಿ ಸಾರಿಗೆ ವಿಮಾನವು ರಷ್ಯಾದ ಬೆಲ್ಗೊರೊಡ್ ಒಬ್ಲಾಸ್ಟ್‌ನ ಕೊರೊಚಾನ್ಸ್ಕಿ ಅಪಘಾತಕ್ಕೀಡಾಯಿತು. ಉಕ್ರೇನ್ ಗಡಿಯ ಬಳಿ ನಡೆದ ಈ ಅಪಘಾತದಲ್ಲಿ ವಿಮಾನದಲ್ಲಿದ್ದ 65 ಉಕ್ರೇನಿಯನ್ ಯುದ್ಧ ಕೈದಿಗಳು ಮತ್ತು ಆರು ಸಿಬ್ಬಂದಿ ಮತ್ತು ಮೂವರು ಗಾರ್ಡ್‌ಗಳು ಸಾವನ್ನಪ್ಪಿದ್ದರು.
ಇರಾನ್‌ನ ಪೂರ್ವ ಅಜರ್‌ಬೈಜಾನ್‌ನ ಉಜಿ ಗ್ರಾಮದ ಬಳಿ ಇರಾನ್ ವಾಯುಪಡೆಯ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿ ಆಗಿನ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಸೇರಿದಂತೆ ವಿದೇಶಾಂಗ ಸಚಿವ ಹೊಸೈನ್ ಅಮೀರ್-ಅಬ್ದುಲ್ಲಾಹಿಯಾನ್, ಪೂರ್ವ ಅಜೆರ್ಬೈಜಾನ್ ಗವರ್ನರ್-ಜನರಲ್ ಮಾಲೆಕ್ ರಹಮತಿ, ಪೂರ್ವ ಅಜೆರ್ಬೈಜಾನ್‌ನಲ್ಲಿನ ಸುಪ್ರೀಂ ಲೀಡರ್ನ ಪ್ರತಿನಿಧಿ ಮೊಹಮ್ಮದ್ ಅಲಿ ಅಲೆ-ಹಶೆಮ್, ಅಧ್ಯಕ್ಷೀಯ ಭದ್ರತಾ ತಂಡದ ಮುಖ್ಯಸ್ಥ ಮೊಹಮ್ಮದ್ ಅಲಿ-ಹಶೆಮ್ ಮತ್ತು ಮೂವರು ವಿಮಾನ ಸಿಬ್ಬಂದಿ ಮೃತಪಟ್ಟಿದ್ದರು.
ಮಲಾವಿಯ ಉಪಾಧ್ಯಕ್ಷ ಸೌಲೋಸ್ ಚಿಲಿಮಾ, ಮಾಜಿ ಪ್ರಥಮ ಮಹಿಳೆ ಪೆಟ್ರೀಷಿಯಾ ಶಾನಿಲ್ಲೆ ಮುಲುಜಿ ಮತ್ತು ಇತರ ಏಳು ಮಂದಿಯನ್ನು ಹೊತ್ತೊಯ್ಯುತ್ತಿದ್ದ ಮಲಾವಿ ರಕ್ಷಣಾ ಪಡೆ 'ಡೋರ್ನಿಯರ್ 228' ವಿಮಾನವು ನ್ಖಾಟಾ ಬೇ ಜಿಲ್ಲೆಯ ಚಿಕಂಗಾವಾ ಅರಣ್ಯ ಮೀಸಲು ಪ್ರದೇಶದಲ್ಲಿ ಪತನಗೊಂಡಿತು. ವಿಮಾನದಲ್ಲಿದ್ದ ಎಲ್ಲರೂ ಸಾವನ್ನಪ್ಪಿದ್ದರು.
ನೇಪಾಳದ ಕಠ್ಮಂಡುವಿನ ತ್ರಿಭುವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕಾಫ್ ಆದ ಕೆಲವೇ ಸಮಯದಲ್ಲಿ ಸೌರ್ಯ ಏರ್‌ಲೈನ್ಸ್ ವಿಮಾನ ಪತನಗೊಂಡಿತು. ವಿಮಾನದಲ್ಲಿದ್ದ 19 ಜನರಲ್ಲಿ 18 ಮಂದಿ ಸಾವನ್ನಪ್ಪಿದ್ದರು.
Voipas ಫ್ಲೈಟ್ 2283 ಕ್ಯಾಸ್ಕಾವೆಲ್‌ನಿಂದ ಗೌರುಲ್ಹೋಸ್‌ಗೆ ನಿಗದಿತ ದೇಶೀಯ ಬ್ರೆಜಿಲಿಯನ್ ಪ್ರಯಾಣಿಕ ವಿಮಾನ ಆಗಸ್ಟ್ 9ರಂದು ಸಾವೊ ಪಾಲೊ ರಾಜ್ಯದ ವಿನ್ಹೆಡೊದಲ್ಲಿ ಪತನಗೊಂಡಿತು. ವಿಮಾನದಲ್ಲಿದ್ದ ಎಲ್ಲಾ 62 ಜನರು ಸಾವನ್ನಪ್ಪಿದರು. ಜುಲೈ 2007ರಲ್ಲಿ TAM ಏರ್‌ಲೈನ್ಸ್ ಫ್ಲೈಟ್ 3054 ದುರಂತದ ನಂತರ ಬ್ರೆಜಿಲ್‌ನಲ್ಲಿ ಈ ಅಪಘಾತವು ಅತ್ಯಂತ ಭೀಕರವಾದ ವಾಯುಯಾನ ಅಪಘಾತವಾಗಿದೆ.
ಕಜಕಿಸ್ತಾನದಲ್ಲಿ ಭೀಕರ ವಿಮಾನ ಅಪಘಾತವಾಗಿ 42ಕ್ಕೂ ಹೆಚ್ಚು ಪ್ರಯಾಣಿಕರು ಮೃತಪಟ್ಟಿದ್ದಾರೆ. ಸುಮಾರು 70ಕ್ಕೂ ಹೆಚ್ಚು ಪ್ರಯಾಣಿಕರಿದ್ದ ವಿಮಾನ ಪತನವಾಗಿದ್ದು, 29 ಮಂದಿ ಬದುಕುಳಿದಿದ್ದಾರೆ ಎಂದು ತಿಳಿದುಬಂದಿದೆ. ಅಜರ್‌ಬೈಜಾನ್ ಏರ್‌ಲೈನ್ಸ್ ವಿಮಾನ ಬಕು ನಗರದಿಂದ ರಷ್ಯಾದ ಗ್ರೋಜ್ನಿ ನಗರಕ್ಕೆ ಪ್ರಯಾಣ ಬೆಳೆಸಿತ್ತು. ಆದರೆ ಕಜಕಿಸ್ತಾನದ ಅಕ್ತಾವು ಬಳಿ ವಿಮಾನ ಏಕಾಏಕಿ ಪತನಗೊಂಡಿದೆ.
Advertisement