
ಢಾಕಾ: ಬಾಂಗ್ಲಾದೇಶದ ನಾಗರಿಕ ಸೇವಾ ಉದ್ಯೋಗಗಳ ಹಂಚಿಕೆಗೆ ಸಂಬಂಧಿಸಿದಂತೆ ನಡೆದ ಘರ್ಷಣೆಯಲ್ಲಿ ಇದುವರೆಗೆ ನೂರಾರು ಜನರು ಮೃತಪಟ್ಟಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ. ಇಂದು ರಾಜಧಾನಿ ಢಾಕಾದ ಕೆಲವು ಭಾಗಗಳಲ್ಲಿ ಮಿಲಿಟರಿ ಪಡೆಗಳು ಗಸ್ತು ತಿರುಗುತ್ತಿದ್ದಂತೆ ಬಾಂಗ್ಲಾದೇಶದಾದ್ಯಂತ ಪರಿಸ್ಥಿತಿ ನಿಯಂತ್ರಿಸಲು ಕಂಡಲ್ಲಿ ಗುಂಡು ಆದೇಶ ಹೊರಡಿಸಿದ್ದು, ಪೊಲೀಸರು ಕಟ್ಟುನಿಟ್ಟಾದ ಕರ್ಫ್ಯೂ ವಿಧಿಸಿದ್ದಾರೆ.
ಇಲ್ಲಿಯವರೆಗೆ ಹಿಂಸಾಚಾರಕ್ಕೆ ಕನಿಷ್ಠ 115 ನಾಗರಿಕರು ಮೃತಪಟ್ಟಿದ್ದಾರೆ. 15 ವರ್ಷಗಳ ಅಧಿಕಾರದ ನಂತರ ಪ್ರಧಾನಿ ಶೇಖ್ ಹಸೀನಾ ಅವರ ನಿರಂಕುಶ ಸರ್ಕಾರಕ್ಕೆ ಈ ಘಟನೆ ಭಾರೀ ಸವಾಲನ್ನು ಒಡ್ಡಿದೆ.
ಕಳೆದ ಮಧ್ಯರಾತ್ರಿಯಿಂದ ಕರ್ಫ್ಯೂ ಆರಂಭವಾಗಿದ್ದು, ಇಂದು ಮಧ್ಯಾಹ್ನದಿಂದ 2 ಗಂಟೆವರೆಗೆ ಸಡಿಲಿಸಲಾಗಿತ್ತು. ಜನರು ಅಗತ್ಯ ಕೆಲಸಗಳನ್ನು ನಡೆಸಲು ನಾಳೆ ಬೆಳಗ್ಗೆ 10 ಗಂಟೆಯವರೆಗೆ ಅಗತ್ಯ ಸೇವೆಗಳನ್ನು ಪಡೆಯಲು ನಾಗರಿಕರಿಗೆ ವಿನಾಯಿತಿ ನೀಡಲಾಗಿದೆ. ವಿಷಮ ಪರಿಸ್ಥಿತಿಯಲ್ಲಿ ಕಂಡಲ್ಲಿ ಗುಂಡು ಹಾರಿಸಲು ಅಧಿಕಾರಿಗಳಿಗೆ ಅವಕಾಶ ನೀಡಲಾಗಿದೆ ಎಂದು ಆಡಳಿತಾರೂಢ ಅವಾಮಿ ಲೀಗ್ ಪಕ್ಷದ ಪ್ರಧಾನ ಕಾರ್ಯದರ್ಶಿ ಶಾಸಕ ಒಬೈದುಲ್ ಕ್ವಾಡರ್ ಹೇಳಿದ್ದಾರೆ.
ಇಂದು ಬೆಳಗ್ಗೆ ಢಾಕಾದ ಬೀದಿಗಳು ಬಹುತೇಕ ನಿರ್ಜನವಾಗಿದ್ದವು, ಮಿಲಿಟರಿ ಪಡೆಗಳು ಕಾಲ್ನಡಿಗೆಯಲ್ಲಿ ಮತ್ತು ಶಸ್ತ್ರಸಜ್ಜಿತ ಸಿಬ್ಬಂದಿ ವಾಹನಗಳಲ್ಲಿ 20 ಮಿಲಿಯನ್ ವಿಸ್ತಾರವಾದ ಮೆಗಾಸಿಟಿಯಲ್ಲಿ ಗಸ್ತು ತಿರುಗುತ್ತಿದ್ದವು.
ಏನಿದು ಪ್ರತಿಭಟನೆ: 1971 ರಲ್ಲಿ ಬಾಂಗ್ಲಾದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದ ಹಿರಿಯರ ಸಂಬಂಧಿಕರಿಗೆ ಶೇಕಡಾ 30ರಷ್ಟು ಸರ್ಕಾರಿ ಉದ್ಯೋಗಗಳನ್ನು ಕಾಯ್ದಿರಿಸುವ ಕೋಟಾ ವ್ಯವಸ್ಥೆಯನ್ನು ಪ್ರತಿಭಟಿಸಿ ವಿದ್ಯಾರ್ಥಿ ಗುಂಪುಗಳು ಕರೆ ನೀಡಿದ್ದ ಪ್ರತಿಭಟನೆ ವಾರಗಳ ಹಿಂದೆ ಪ್ರಾರಂಭವಾಗಿತ್ತು. ಪ್ರತಿಭಟನೆ ಕಳೆದ ಮಂಗಳವಾರ ಹಿಂಸಾರೂಪಕ್ಕೆ ತಿರುಗಿತು. ಬಾಂಗ್ಲಾದೇಶದ ಪ್ರಮುಖ ದಿನಪತ್ರಿಕೆ ಡೈಲಿ ಪ್ರೋಥೋಮ್ ಅಲೋ ವರದಿ ಮಾಡಿರುವ ಪ್ರಕಾರ ಕನಿಷ್ಠ 103 ಜನರು ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ.
ನಿನ್ನೆ ಶುಕ್ರವಾರ ಇದುವರೆಗಿನ ಮಾರಣಾಂತಿಕ ದಿನವಾಗಿರಬಹುದು; Somoy TV 43 ಮಂದಿ ಒಂದೇ ದಿನ ಮೃತಪಟ್ಟಿದ್ದಾರೆ ಎಂದು ವರದಿ ಮಾಡಿದೆ, ಅಸೋಸಿಯೇಟೆಡ್ ಪ್ರೆಸ್ ವರದಿಗಾರ ಢಾಕಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 23 ಶವಗಳನ್ನು ನೋಡಿದ್ದೇನೆ ಎಂದು ವರದಿ ಮಾಡಿದ್ದಾರೆ, ಮೊನ್ನೆ ಗುರುವಾರ, ಪ್ರತಿಭಟನಾ ನಿರತ ವಿದ್ಯಾರ್ಥಿಗಳು ದೇಶವನ್ನು ಸಂಪೂರ್ಣವಾಗಿ ಮುಚ್ಚಲು ಪ್ರಯತ್ನಿಸಿದ್ದರಿಂದ ಇತರ 22 ಮಂದಿ ಮೃತಪಟ್ಟರು ಎಂದು ವರದಿಯಾಗಿದೆ.
ಬಾಂಗ್ಲಾದೇಶದಾದ್ಯಂತ ನೂರಾರು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಗಳು ಸೂಚಿಸಿವೆ ಎಂದು ಢಾಕಾದಲ್ಲಿರುವ ಯುನೈಟೆಡ್ ಸ್ಟೇಟ್ಸ್ ರಾಯಭಾರ ಕಚೇರಿ ತಿಳಿಸಿದೆ. ಪರಿಸ್ಥಿತಿಯು ಅತ್ಯಂತ ಅಸ್ಥಿರವಾಗಿದೆ ಎಂದು ಅದು ಹೇಳಿದೆ.
2018 ರಲ್ಲಿ, ಸಾಮೂಹಿಕ ವಿದ್ಯಾರ್ಥಿಗಳ ಪ್ರತಿಭಟನೆಯ ನಂತರ ಸರ್ಕಾರವು ಉದ್ಯೋಗ ಕೋಟಾಗಳನ್ನು ಸ್ಥಗಿತಗೊಳಿಸಿತ್ತು. ಆದರೆ ಕಳೆದ ತಿಂಗಳು ಜೂನ್‌ನಲ್ಲಿ, ಬಾಂಗ್ಲಾದೇಶದ ಹೈಕೋರ್ಟ್ ಆ ನಿರ್ಧಾರವನ್ನು ರದ್ದುಗೊಳಿಸಿತು. 1971 ರ ಸ್ವಾತಂತ್ರ್ಯ ಹೋರಾಟಗಾರರ ಸಂಬಂಧಿಕರು ಅರ್ಜಿಗಳನ್ನು ಸಲ್ಲಿಸಿದ ನಂತರ ಕೋಟಾಗಳನ್ನು ಮರುಜಾರಿಗೊಳಿಸಲಾಗಿತ್ತು.
ಮೇಲ್ಮನವಿ ವಿಚಾರಣೆಗೆ ಬಾಕಿ ಇರುವ ತೀರ್ಪನ್ನು ಸುಪ್ರೀಂ ಕೋರ್ಟ್ ನಾಳೆ ಕೈಗೆತ್ತಿಕೊಳ್ಳುವುದಾಗಿ ಹೇಳಿದೆ. ಈ ಮಧ್ಯೆ ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ ನ್ಯಾಯಾಲಯದ ತೀರ್ಪಿಗಾಗಿ ಕಾಯೋಣ ಎಂದು ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಕರೆ ನೀಡಿದ್ದಾರೆ.
Advertisement