
ಟೊಕಿಯೊ: ವಿದೇಶಾಂಗ ಸಚಿವ ಎಸ್ ಜೈಶಂಕರ್ ಜಪಾನ್ ಪ್ರವಾಸದ ವೇಳೆ ಸಚಿವರಿಗೆ ಪತ್ರಕರ್ತನೋರ್ವ ಅಮೇರಿಕಾ ರಾಜಕಾರಣದ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಕೇಳಿ ಪೆಚ್ಚಾದ ಘಟನೆ ನಡೆದಿದೆ.
ಟೋಕಿಯೋದಲ್ಲಿ ಜಪಾನ್ ನ್ಯಾಷನಲ್ ಪ್ರೆಸ್ ಕ್ಲಬ್ ನಲ್ಲಿ ಮಾತನಾಡುತ್ತಿದ್ದ ಜೈಶಂಕರ್ ಗೆ ಅಮೇರಿಕಾ ಚುನಾವಣೆ ಹಿನ್ನೆಲೆಯಲ್ಲಿ ಅಲ್ಲಿನ ರಾಜಕಾರಣದ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಪತ್ರಕರ್ತನೋರ್ವ ಕೇಳಿದ್ದಾನೆ. ತಮ್ಮದೇ ಸ್ಟೈಲ್ ನಲ್ಲಿ ಪತ್ರಕರ್ತನಿಗೆ ಪಾಠ ಮಾಡಿದ ಜೈಶಂಕರ್, ಒಂದು ಪ್ರಜಾಪ್ರಭುತ್ವದ ರಾಷ್ಟ್ರ, ನಿರ್ದಿಷ್ಟ ಅಜೆಂಡಾ ಇಟ್ಟುಕೊಂಡು ಮತ್ತೊಂದು ಪ್ರಜಾಪ್ರಭುತ್ವದ ಕಾರ್ಯಚಟುವಟಿಕೆಗಳ ಬಗ್ಗೆ ಪ್ರತಿಕ್ರಿಯೆ ನೀಡುವುದು ಮಾತನಾಡುವುದು ಸೂಕ್ತವಲ್ಲ ಎಂದು ನಾನು ಹೇಳಿದ್ದೇನೆಂದರೆ, ನೀವು ನನ್ನಿಂದ ಕೆಟ್ಟ ನಡವಳಿಕೆಯನ್ನು ನಿರೀಕ್ಷಿಸುವುದಿಲ್ಲ"
"ಇತರರು ಸರಿಯಾದ ಶಿಷ್ಟಾಚಾರವನ್ನು ಅನುಸರಿಸುವುದಿಲ್ಲ ಎಂದು ನಾನು ದೂರಿದರೆ, ಕನಿಷ್ಠ ನಾನು ಒಂದು ಉದಾಹರಣೆಯಾಗಿ ಮೇಲ್ಪಂಕ್ತಿ ಹಾಕಿಕೊಡುವುದು ಮುಖ್ಯ ಎಂದು ನಾನು ಭಾವಿಸುತ್ತೇನೆ. ನಾನು ನಿಮಗೆ ನೀಡಬಹುದಾದ ಅತ್ಯುತ್ತಮ ಉತ್ತರವೆಂದರೆ ಪ್ರಶ್ನೆಗೆ ಉತ್ತರಿಸದಿರುವುದು,” ಎಂದು ಸಚಿವರು ಪತ್ರಕರ್ತನಿಗೆ ಪಾಠ ಮಾಡಿದ್ದಾರೆ.
ಈ ಮೂಲಕ ಸುಖಾ ಸುಮ್ಮನೆ ಎಲ್ಲಾ ದೇಶಗಳ ವಿಚಾರಗಳಲ್ಲೂ ಮೂಗು ತೂರಿಸುವ ಚಾಳಿ ಒಳ್ಳೆಯ ನಡವಳಿಕೆಯಲ್ಲ ಎಂಬ ಪರೋಕ್ಷ ಸಂದೇಶವನ್ನೂ ಜೈಶಂಕರ್ ಪಶ್ಚಿಮದ ರಾಷ್ಟ್ರಗಳಿಗೆ ರವಾನಿಸಿದ್ದಾರೆ.
ಜೈಶಂಕರ್ ಅವರ ಹೇಳಿಕೆಗಳು ಅಮೇರಿಕಾ ಆಡಳಿತವನ್ನು ಗುರಿಯಾಗಿರಿಸಿಕೊಂಡಿದ್ದು ಸ್ಪಷ್ಟವಾಗಿದೆ. ಅಮೇರಿಕಾ ವಿದೇಶಾಂಗ ಇಲಾಖೆ ಭಾರತದ ಆಂತರಿಕ ವಿಷಯಗಳ ಕುರಿತು ಹೇಳಿಕೆ, ಆರೋಪ ಮಾಡಿದಾಗಲೆಲ್ಲಾ ಈ ನಡವಳಿಕೆಯನ್ನು ವಿರೋಧಿಸಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ ಹಲವಾರು ಸಂದರ್ಭಗಳಲ್ಲಿ ಛೀಮಾರಿ ಹಾಕಲಾಗಿದೆ.
ಅಮೇರಿಕಾ, ಭಾರತ, ಜಪಾನ್ ಮತ್ತು ಆಸ್ಟ್ರೇಲಿಯಾವನ್ನು ಒಳಗೊಂಡ ಕ್ವಾಡ್ ಬ್ಲಾಕ್‌ನ ವಿದೇಶಾಂಗ ಸಚಿವರ ಸಭೆಯಲ್ಲಿ ಭಾಗವಹಿಸಿದ ನಂತರ ಜೈಶಂಕರ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಎಲ್ಲಾ ಪ್ರಮುಖ ಸಭೆಯಲ್ಲಿ ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್, ಜಪಾನ್ ವಿದೇಶಾಂಗ ಸಚಿವ ಯೊಕೊ ಕಾಮಿಕಾವಾ ಮತ್ತು ಆಸ್ಟ್ರೇಲಿಯಾದ ವಿದೇಶಾಂಗ ಸಚಿವ ಪೆನ್ನಿ ವಾಂಗ್ ಭಾಗವಹಿಸಿದ್ದರು.
Advertisement