
ಮಾಸ್ಕೋ: ಮಾಸ್ಕೋದಲ್ಲಿ ಅಪರೂಪದ ಮತ್ತು ಅತ್ಯಂತ ಅಪಾಯಕಾರಿ ಫುಡ್ ಪಾಯಿಸನ್ ನಿಂದ ಏಕಾಏಕಿ 120ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದು, ಕನಿಷ್ಠ 30 ಜನ ತೀವ್ರ ನಿಗಾ ಘಟಕದಲ್ಲಿದ್ದಾರೆ ಎಂದು ಆರೋಗ್ಯ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ರೋಗಿಗಳನ್ನು ಶಂಕಿತ ಆಹಾರದಿಂದ ಹರಡುವ ಬೊಟುಲಿಸಮ್‌ನೊಂದಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದು ನರಮಂಡಲದ ಮೇಲೆ ದಾಳಿ ಮಾಡುವ ಮತ್ತು ಉಸಿರಾಟದ ವೈಫಲ್ಯ ಮತ್ತು ಪಾರ್ಶ್ವವಾಯುವಿಗೆ ಕಾರಣವಾಗಬಹುದಾಗಿದೆ.
ಜನಪ್ರಿಯ ಆನ್‌ಲೈನ್ ಆಹಾರ ವಿತರಣಾ ಸೇವೆಯಿಂದ ಸಲಾಡ್ ಆರ್ಡರ್ ಮಾಡಿ ತಿಂದ ನಂತರ ಏಕಾಏಕಿ ಅಸ್ವಸ್ಥಗೊಂಡಿದ್ದಾರೆ ಎಂದು ರಷ್ಯಾದ ಅಧಿಕಾರಿಗಳು ಹೇಳಿದ್ದಾರೆ.
ಈ ಘಟನೆಯ ನಂತರ ಪ್ರಕರಣದ ತನಿಖೆಯ ಮಧ್ಯೆ ಭಾನುವಾರ ಆನ್‌ಲೈನ್ ಆಹಾರ ವಿತರಣಾ ಸಂಸ್ಥೆ ತನ್ನ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
"ಒಟ್ಟು 121 ಜನರು ಅಸ್ವಸ್ಥಗೊಂಡಿದ್ದಾರೆ" ಎಂದು ಮಾಸ್ಕೋದ ಉಪ ಮೇಯರ್ ಅನಸ್ತಾಸಿಯಾ ರಾಕೋವಾ ಅವರು ಸೋಮವಾರ ಹೇಳಿದ್ದಾರೆ ಎಂದು ರಾಜ್ಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
"ಅಸ್ವಸ್ಥಗೊಂಡವರಲ್ಲಿ 55 ಜನರು ಗಂಭೀರ ಸ್ಥಿತಿಯಲ್ಲಿದ್ದಾರೆ. ಅವರಲ್ಲಿ 30 ಜನ ತೀವ್ರ ನಿಗಾದಲ್ಲಿದ್ದಾರೆ". ಮಾಸ್ಕೋ ಪ್ರಾಸಿಕ್ಯೂಟರ್ ಕಚೇರಿಯು ಗ್ರಾಹಕರ ಸುರಕ್ಷತಾ ಮಾನದಂಡಗಳ ಉಲ್ಲಂಘನೆಯ ಬಗ್ಗೆ ಕ್ರಿಮಿನಲ್ ತನಿಖೆಯನ್ನು ಪ್ರಾರಂಭಿಸಿದೆ ಎಂದು ಅವರು ತಿಳಿಸಿದ್ದಾರೆ.
Advertisement