ಲಂಡನ್: ಬ್ರಿಟನ್ ನಲ್ಲಿ ಜುಲೈ 4 ರಂದು ಸಾರ್ವತ್ರಿಕ ಚುನಾವಣೆ ಘೋಷಣೆಯಾಗಿದ್ದು, ಚುನಾವಣೆಗೂ ಮುನ್ನ ಪ್ರಧಾನಿ ರಿಷಿ ಸುನಕ್ ಗೆ ಸಂಸದರ ರಾಜೀನಾಮೆ ತಲೆ ಬಿಸಿ ಎದುರಾಗಿದೆ. ಸಾರ್ವತ್ರಿಕ ಚುನಾವಣೆಗೂ ಮುನ್ನ 78 ಸಂಸದರು ರಾಜೀನಾಮೆ ನೀಡಿದ್ದು, ರಿಷಿ ಸುನಕ್ ಚುನಾವಣೆ ಪ್ರಚಾರದ ಮೊದಲ ವಾರಾಂತ್ಯದಲ್ಲಿ ಸಾರ್ವಜನಿಕ ಕಾರ್ಯಕ್ರಮಗಳಿಂದ ದೂರವುಳಿದು, ಶನಿವಾರದಂದು ತಮ್ಮ ಆಪ್ತ ಸಲಹೆಗಾರರೊಂದಿಗೆ ಹೆಚ್ಚು ಸಮಾಲೋಚನೆಯಲ್ಲಿ ತೊಡಗಿದ್ದರು ಎಂದು ತಿಳಿದುಬಂದಿದೆ.
ಕನ್ಸರ್ವೇಟೀವ್ ಪಕ್ಷದ ಹಿರಿಯ ಸದಸ್ಯರು ಹಾಗೂ ಸಂಸದರು ಸಾಮೂಹಿಕ ರಾಜೀನಾಮೆ ನೀಡಿದ ಬಳಿಕ ರಿಷಿ ಸುನಕ್ ತಮ್ಮ ಆಪ್ತರು ಹಾಗೂ ಕುಟುಂಬದವರೊಂದಿಗೆ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ.
ಕ್ಯಾಬಿನೆಟ್ ಮಂತ್ರಿಗಳಾದ ಮೈಕೆಲ್ ಗೋವ್ ಮತ್ತು ಆಂಡ್ರಿಯಾ ಲೀಡ್ಸಮ್ ಅವರು ಈ ಚುನಾವಣೆಗೆ ಸ್ಪರ್ಧಿಸದಿರಲು ತಮ್ಮ ನಿರ್ಧಾರವನ್ನು ಘೋಷಿಸಿದ್ದಾರೆ. ಈ ಮೂಲಕ ಚುನಾವಣಾ ರೇಸ್‌ನಿಂದ ನಿರ್ಗಮಿಸಿದ ಪಕ್ಷದ ಸದಸ್ಯರ ಸಂಖ್ಯೆ 78 ಕ್ಕೆ ಏರಿಕೆಯಾಗಿದೆ. ಸುನಕ್‌ಗೆ ಪತ್ರ ಬರೆದಿದ್ದ ಲೀಡ್ಸಮ್ "ಎಚ್ಚರಿಕೆಯಿಂದ ಆಲೋಚಿಸಿದ ನಂತರ, ಮುಂಬರುವ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ನಿಲ್ಲದಿರಲು ನಾನು ನಿರ್ಧರಿಸಿದ್ದೇನೆ ಹೊಸ ಪೀಳಿಗೆ ಮುನ್ನಡೆಸಬೇಕು ಎಂಬುದು ತಿಳಿದಾಗ ಅವರಿಗೆ ದಾರಿ ಮಾಡಿಕೊಡಬೇಕೆಂದು ಅವರು ಹೇಳಿದ್ದರು. ಇದಷ್ಟೇ ಅಲ್ಲದೇ ಮಾಜಿ ಪ್ರಧಾನಿ ಥೆರೆಸಾ ಮೇ ಕೂಡ ಚುನಾವಣೆಯಿಂದ ಹಿಂದೆ ಸರಿದ ಹಿರಿಯ ಸಂಸದರಲ್ಲಿ ಒಬ್ಬರಾಗಿದ್ದಾರೆ. ಮಾಜಿ ರಕ್ಷಣಾ ಸಚಿವ ಬೆನ್ ವ್ಯಾಲೇಸ್ ಈಗಾಗಲೇ ಸಕ್ರಿಯ ರಾಜಕೀಯಕ್ಕೆ ಗುಡ್ ಬೈ ಹೇಳುವ ನಿರ್ಧಾರವನ್ನು ಘೋಷಿಸಿದ್ದಾರೆ.
ಸುನಕ್ ಅವರು ಚುನಾವಣಾ ಪ್ರಚಾರದ ಮೊದಲ ವಾರಾಂತ್ಯದಲ್ಲಿ ಒಂದು ದಿನ ಸಾರ್ವಜನಿಕ ಕಾರ್ಯಕ್ರಮಗಳಿಂದ ದೂರವಿರುವ "ಅಸಾಮಾನ್ಯ ಹೆಜ್ಜೆ" ತೆಗೆದುಕೊಳ್ಳುತ್ತಿದ್ದಾರೆ ಮತ್ತು ತಮ್ಮ ಹತ್ತಿರದ ಸಲಹೆಗಾರರೊಂದಿಗೆ ಚುನಾವಣಾ ಕಾರ್ಯತಂತ್ರದ ಕುರಿತು ಚರ್ಚೆಯಲ್ಲಿ ಕಳೆಯುತ್ತಾರೆ ಎಂದು ಗಾರ್ಡಿಯನ್ ಹೇಳಿದೆ.
Advertisement