ಇಸ್ಲಾಮಾಬಾದ್: ದೇಶ ರಕ್ಷಣೆಗಾಗಿ ಪ್ರಾಣ ತ್ಯಾಗ ಮಾಡಿದ ಯೋಧರಿಗೆ ದೇಶ ಗೌರವಪೂರ್ವಕವಾಗಿ ಅಂತಿಮ ವಿದಾಯ ಹೇಳುತ್ತದೆ. ಆದರೆ ಈ ವಿಷಯದಲ್ಲೂ ಪಾಕಿಸ್ತಾನ ಎಂತಹ ಅಸಹ್ಯಕರ ಕೃತ್ಯ ಎಸಗಿದೆ ಎಂದರೆ ಅದರ ವಿಡಿಯೋ ನೋಡಿದ ಜನರು ಪಾಕಿಸ್ತಾನವನ್ನು ತೀವ್ರವಾಗಿ ಟೀಕಿಸುತ್ತಿದ್ದಾರೆ.
ಭಯೋತ್ಪಾದಕರ ವಿರುದ್ಧದ ಹೋರಾಟದಲ್ಲಿ ಮೃತಪಟ್ಟ ಯೋಧರಿಗೆ ಗೌರವಯುತ ಬೀಳ್ಕೊಡುಗೆ ನೀಡುವುದನ್ನು ಮರೆತು, ಅವರ ಮೃತದೇಹಗಳನ್ನು ಸರಿಯಾಗಿ ತೆಗೆದುಕೊಂಡು ಹೋಗಲು ಪಾಕಿಸ್ತಾನಕ್ಕೆ ಸಾಧ್ಯವಾಗುತ್ತಿಲ್ಲ. ಪಾಕಿಸ್ತಾನದ ಆಡಳಿತವು ಖೈಬರ್ ಪಖ್ತುಂಖ್ವಾದಲ್ಲಿ ಸೈನಿಕರ ದೇಹಗಳನ್ನು ಕತ್ತೆಗಳ ಮೇಲೆ ಸಾಗಿಸಿದ್ದು ಈ ವಿಡಿಯೋ ವೈರಲ್ ಆಗಿದೆ.
ಪಾಕಿಸ್ತಾನದ ಬಲೂಚಿಸ್ತಾನ ಮತ್ತು ಖೈಬರ್ ಪಖ್ತುಂಖ್ವಾ ಪ್ರದೇಶಗಳಲ್ಲಿ ಕಳೆದ ಒಂದು ತಿಂಗಳಲ್ಲಿ ಪಾಕಿಸ್ತಾನ ಸೇನೆಯ 100ಕ್ಕೂ ಹೆಚ್ಚು ಸೈನಿಕರು ಹತರಾಗಿದ್ದಾರೆ. ಭಯೋತ್ಪಾದಕರ ವಿರುದ್ಧ ಹೋರಾಡುವಾಗ ಈ ಸೈನಿಕರು ಸಾವನ್ನಪ್ಪಿದ್ದು ಪಾಕಿಸ್ತಾನಿ ಸೇನೆಯು ಈ ಎಲ್ಲಾ ಅಂಕಿಅಂಶಗಳನ್ನು ಮರೆಮಾಡಲು ಪ್ರಯತ್ನಿಸುತ್ತಿದೆ. ಈ ಬಾರಿಯೂ ಪಾಕಿಸ್ತಾನಿ ಸೇನೆ ಅದನ್ನೆ ಮಾಡಲು ಮುಂದಾಗಿತ್ತು. ಆದರೆ ವಿಡಿಯೋ ವೈರಲ್ ನಿಂದಾಗಿ ವಿಷಯ ಬಹಿರಂಗಗೊಂಡಿದೆ.
ಇತ್ತೀಚಿನ ಘಟನೆಯೊಂದರಲ್ಲಿ ಭಯೋತ್ಪಾದಕರು ಪಾಕಿಸ್ತಾನ ಸೇನೆಯ 2 ಡಜನ್‌ಗಿಂತಲೂ ಹೆಚ್ಚು ಸೈನಿಕರನ್ನು ಹತ್ಯೆ ಮಾಡಿದ್ದರು. ಪೊಲೀಸ್ ಠಾಣೆಗೆ ನುಗ್ಗಿ 7 ಪೊಲೀಸರನ್ನು ಅಪಹರಿಸಿದ್ದರು. ಈ ದಾಳಿಯಲ್ಲಿ ಸೈನಿಕರ ಸಾವನ್ನು ಮರೆಮಾಡಲು, ಪಾಕಿಸ್ತಾನಿ ಆಡಳಿತವು ಮೃತ ಸೈನಿಕರ ಶವಗಳನ್ನು ಘಟನೆಯ ಸ್ಥಳದಿಂದ ಆದಷ್ಟು ಬೇಗ ತೆರವುಗೊಳಿಸಲು ಪ್ರಯತ್ನಿಸಿತು. ತರಾತುರಿಯಲ್ಲಿ, ಆಡಳಿತವು ಸೈನಿಕರ ಮೃತ ದೇಹಗಳನ್ನು ಕತ್ತೆಗಳ ಮೇಲೆ ಹೇರಿ ಕಾಡಿನ ಮೂಲಕ ಸಾಗಿಸಲು ಪ್ರಾರಂಭಿಸಿತು. ಆದರೆ ಪಾಕ್ ಆಡಳಿತದ ಈ ಕೃತ್ಯ ಮತ್ತೊಂದು ಸೇನಾ ತುಕಡಿಯ ಕೈಗೆ ಸಿಕ್ಕಿಬಿದ್ದಿದ್ದು, ಸೈನಿಕರು ಇದನ್ನು ವಿಡಿಯೋ ಕೂಡ ಮಾಡಿದ್ದಾರೆ. ಅಷ್ಟೇ ಅಲ್ಲ, ಅವರ ನಡುವೆ ವಾಗ್ವಾದವೂ ನಡೆದಿದ್ದು, ಮಾತುಕತೆ ವೇಳೆ ಸೇನಾ ಕಮಾಂಡರ್‌ಗಳನ್ನು ತೀವ್ರವಾಗಿ ನಿಂದಿಸಿದ್ದಾರೆ.
ಈ ವೀಡಿಯೋವನ್ನು ಸೇನೆಯೇ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದು ಈ ವಿಡಿಯೋ ವೈರಲ್ ಆಗಿದೆ. ಇದು ಸೇನಾಧಿಕಾರಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಪಾಕಿಸ್ತಾನದ ಪ್ರಧಾನಿಯನ್ನು ಈ ವಿಷಯದಲ್ಲಿ ತಕ್ಷಣ ಕ್ರಮ ಕೈಗೊಳ್ಳುವಂತೆ ಕೇಳಿಕೊಂಡಿದ್ದು ಉನ್ನತ ಮಟ್ಟದ ಸಭೆಯನ್ನೂ ಕರೆಯಲಾಗಿದೆ.
ಪಾಕಿಸ್ತಾನದ ಸೇನೆಯ ಪ್ರಮುಖ ಕಮಾಂಡರ್‌ಗಳನ್ನು ಕತ್ತೆಗಳ ಮೇಲೆ ಹೊತ್ತೊಯ್ಯುವ ವೀಡಿಯೊಗಳು ಹೊರಬಿದ್ದ ನಂತರ ಸೇನೆಯ ಆಕ್ರೋಶವನ್ನು ಗಮನದಲ್ಲಿಟ್ಟುಕೊಂಡು, ಪಾಕಿಸ್ತಾನದ ಫೆಡರಲ್ ಅಪೆಕ್ಸ್ ಸಮಿತಿಯು ಬಲೂಚಿಸ್ತಾನದ ಎಲ್ಲಾ ಸಕ್ರಿಯ ಭಯೋತ್ಪಾದಕ ಗುಂಪುಗಳ ವಿರುದ್ಧ ಮಿಲಿಟರಿ ಕಾರ್ಯಾಚರಣೆಗೆ ಅನುಮೋದನೆ ನೀಡಿದೆ.
Advertisement