ಢಾಕಾ: ಬಾಂಗ್ಲಾದೇಶದಲ್ಲಿ ಇಸ್ಕಾನ್ ಚಟುವಟಿಕೆಗಳನ್ನು ನಿಷೇಧಿಸಲು ಹೈಕೋರ್ಟ್ ಗುರುವಾರ ನಿರಾಕರಿಸಿದೆ ಎಂದು ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿದೆ.
ದೇಶದ್ರೋಹದ ಆರೋಪದ ಮೇಲೆ ಬಾಂಗ್ಲಾದೇಶದಲ್ಲಿ ಇಸ್ಕಾನ್ ಮುಖಂಡ ಚಿನ್ಮೋಯ್ ಕೃಷ್ಣ ದಾಸ್ ಬಂಧನ ಖಂಡಿಸಿ ನಡೆದ ಪ್ರತಿಭಟನೆ ವೇಳೆ ಭದ್ರತಾ ಸಿಬ್ಬಂದಿ ಮತ್ತು ಹಿಂದೂ ನಾಯಕನ ಬೆಂಬಲಿಗರ ನಡುವಿನ ಘರ್ಷಣೆಯಲ್ಲಿ ವಕೀಲರೊಬ್ಬರು ಸಾವನ್ನಪ್ಪಿದ್ದಾರೆ.
ಬುಧವಾರ ವಕೀಲರೊಬ್ಬರು ಬಾಂಗ್ಲಾದೇಶದಲ್ಲಿ ಇಸ್ಕಾನ್ ಚಟುವಟಿಕೆಗಳನ್ನು ನಿಷೇಧಿಸಬೇಕು ಎಂದು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ದಿ ಡೈಲಿ ಸ್ಟಾರ್ ಪ್ರಕಾರ, ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಇಸ್ಕಾನ್‌ನ ಇತ್ತೀಚಿನ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಸರ್ಕಾರ ತೆಗೆದುಕೊಂಡ ಕ್ರಮಗಳ ಬಗ್ಗೆ ತಿಳಿಸುವಂತೆ ಅಟಾರ್ನಿ ಜನರಲ್ ಅವರಿಗೆ ಸೂಚಿಸಿದೆ. ಅಲ್ಲದೆ ಹಿಂದೂಗಳ ಮೇಲೆ ದಾಳಿಯಾಗದಂತೆ, ಶಾಂತಿ ಸುವ್ಯವಸ್ಥೆ ಕಾಪಾಡಿಕೊಳ್ಳುವಂತೆ ಕೋರ್ಟ್ ಸೂಚನೆ ನೀಡಿದೆ.
ಈ ವಾರ ಬಂಧನಕ್ಕೊಳಗಾದ ಹಿಂದೂ ಮುಖಂಡ ಚಿನ್ಮೋಯ್ ಕೃಷ್ಣ ದಾಸ್ ಅವರನ್ನು ಈ ಹಿಂದೆ ಇಸ್ಕಾನ್‌ನಿಂದ ಹೊರಹಾಕಲಾಗಿತ್ತು. ಅವರ ಬಂಧನವು ಮಂಗಳವಾರ ತೀವ್ರ ಘರ್ಷಣೆಗೆ ಕಾರಣವಾಗಿದ್ದು, ಈ ವೇಳೆ ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್ ಅಡ್ವೊಕೇಟ್ ಸೈಫುಲ್ ಇಸ್ಲಾಂ ಮೃತಪಟ್ಟಿದ್ದಾರೆ.
ಇಂದು ವಿಚಾರಣೆ ವೇಳೆ ಹೆಚ್ಚುವರಿ ಅಟಾರ್ನಿ ಜನರಲ್ ಅನೀಕ್ ಆರ್ ಹಕ್ ಮತ್ತು ಡೆಪ್ಯುಟಿ ಅಟಾರ್ನಿ ಜನರಲ್ ಅಸಾದ್ ಉದ್ದೀನ್ ಅವರು ವಕೀಲ ಸೈಫುಲ್ ಇಸ್ಲಾಂ ಅಲಿಫ್ ಹತ್ಯೆ ಮತ್ತು ಇಸ್ಕಾನ್ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಮೂರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ 33 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹೈಕೋರ್ಟ್ ಪೀಠಕ್ಕೆ ತಿಳಿಸಿದರು.
ನವೆಂಬರ್ 25 ರಂದು ಬಾಂಗ್ಲಾದೇಶ, ದೇಶದ್ರೋಹದ ಆರೋಪದ ಮೇಲೆ ಚಿನ್ಮೋಯ್ ಕೃಷ್ಣ ದಾಸ್ ಅವರನ್ನು ಬಂಧಿಸಿದೆ. ಕೋರ್ಟ್ನಲ್ಲಿ ಜಾಮೀನು ನೀಡದೇ ನೇರವಾಗಿ ಜೈಲಿಗೆ ಕಳುಹಿಸಲಾಗಿದೆ. ಇದನ್ನು ಖಂಡಿಸಿ ಚಿನ್ಮೋಯ್ ಬ್ರಹ್ಮಚಾರಿ ಅವರ ಭಕ್ತರು, ಬಾಂಗ್ಲಾದೇಶದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
Advertisement