ಬ್ಯಾಂಕಾಕ್: ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್‌ನ ಹೊರವಲಯದಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ಬಸ್‌ಗೆ ಮಂಗಳವಾರ ಬೆಂಕಿ ಹೊತ್ತಿಕೊಂಡಿದ್ದು, ಅದರಲ್ಲಿದ್ದ 25 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಧ್ಯ ಉತೈ ಥಾನಿ ಪ್ರಾಂತ್ಯದಿಂದ ಬ್ಯಾಂಕಾಕ್‌ಗೆ ಶೈಕ್ಷಣಿಕ ಪ್ರವಾಸಕ್ಕೆ ಬಂದಿದ್ದ ಈ ಬಸ್ ನಲ್ಲಿ ಶಿಕ್ಷಕರು ಸೇರಿದಂತೆ 44 ಜನರಿದ್ದರು. ಇಂದು ಮಧ್ಯಾಹ್ನ 12.30 ರ ಸುಮಾರಿಗೆ ಬ್ಯಾಂಕಾಕ್‌ನ ರಂಗ್‌ಸಿಟ್ ಶಾಪಿಂಗ್ ಮಾಲ್ ಬಳಿಯ ಫಾಹೋನ್ ಯೋಥಿನ್ ರಸ್ತೆಯಲ್ಲಿ ಬಸ್ ಹೊತ್ತಿ ಉರಿದಿದೆ.
ಘಟನಾ ಸ್ಥಳದ ತನಿಖೆಯನ್ನು ಪೂರ್ಣಗೊಳಿಸದ ಕಾರಣ ಅಧಿಕಾರಿಗಳು ಇನ್ನೂ ಸಾವಿನ ಸಂಖ್ಯೆಯನ್ನು ಖಚಿತಪಡಿಸಲು ಸಾಧ್ಯವಾಗಿಲ್ಲ ಎಂದು ಆಂತರಿಕ ಸಚಿವ ಅನುಟಿನ್ ಚಾರ್ನ್‌ವಿರಾಕುಲ್ ಹೇಳಿದ್ದಾರೆ. ಆದರೆ ಬದುಕುಳಿದವರ ಸಂಖ್ಯೆಯನ್ನು ಆಧರಿಸಿ, 25 ಜನರು ಸಾವನ್ನಪ್ಪಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಒಂದು ಟೈರ್ ಸ್ಫೋಟಗೊಂಡ ನಂತರ ಬಸ್ ರಸ್ತೆಯ ತಡೆಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಕಾಣಿಸಿಕೊಂಡಿದೆ ಎಂದು ಘಟನಾಸ್ಥಳದಲ್ಲಿದ್ದ ರಕ್ಷಣಾ ಸಿಬ್ಬಂದಿ ಹೇಳಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಇಡೀ ಬಸ್ ಬೆಂಕಿಗೆ ಆಹುತಿಯಾಗಿರುವುದು ಕಂಡು ಬಂದಿದೆ. ರಸ್ತೆಯಲ್ಲಿ ನಿಲ್ಲಿಸಿದ ಬಸ್ಸಿನ ಹೊರಗೆ ಕಪ್ಪು ಹೊಗೆಯು ಕಾಣಿಸಿಕೊಂಡಿತ್ತು. ವಿದ್ಯಾರ್ಥಿಗಳ ವಯಸ್ಸು ಇನ್ನೂ ತಿಳಿದುಬಂದಿಲ್ಲ.
Advertisement