ಪಾಕಿಸ್ತಾನದಲ್ಲಿ SCO ಶೃಂಗಸಭೆ: ಭಯೋತ್ಪಾದನೆ, ಉಗ್ರವಾದ ವಿರುದ್ಧ ಜೈಶಂಕರ್ ಕಿಡಿ; UNSC ಸುಧಾರಣೆಗೆ ಸಲಹೆ

ಸಹಕಾರಕ್ಕೆ ವಿಶ್ವಾಸವು ಪ್ರಮುಖವಾಗಿದೆ. ಸಾಮೂಹಿಕವಾಗಿ ಮುಂದುವರೆದರೆ ಶಾಂಘೈ ಸದಸ್ಯ ರಾಷ್ಟ್ರಗಳು ಅಪಾರ ಪ್ರಯೋಜನವನ್ನು ಪಡೆಯಬಹುದು.
ಜೈಶಂಕರ್
ಜೈಶಂಕರ್
Updated on

ಇಸ್ಲಾಮಾಬಾದ್: ಗಡಿಯಾಚೆಗಿನ ಭಯೋತ್ಪಾದನಾ ಚಟುವಟಿಕೆ,ಉಗ್ರವಾದ ಮತ್ತು ಪ್ರತ್ಯೇಕತಾವಾದದಿಂದ ವ್ಯಾಪಾರ, ಇಂಧನ ಮತ್ತು ಸಂಪರ್ಕದಂತಹ ಕ್ಷೇತ್ರಗಳಲ್ಲಿ ಸಹಕಾರ ಹೊಂದುವುದು ಅಸಂಭವವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ (ಇಎಎಂ) ಎಸ್ ಜೈಶಂಕರ್ ಬುಧವಾರ ಹೇಳುವ ಮೂಲಕ ಪಾಕಿಸ್ತಾನಕ್ಕೆ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ.

ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರ ಅಧ್ಯಕ್ಷತೆಯಲ್ಲಿ ಇಸ್ಲಾಮಾಬಾದ್‌ನಲ್ಲಿ ನಡೆದ ಶಾಂಘೈ- ಸಹಕಾರ ಸಂಘಟನೆಯ ಸಭೆಯಲ್ಲಿ ಮಾತನಾಡಿದ ಎಸ್. ಜೈಶಂಕರ್, ಸದಸ್ಯ ರಾಷ್ಟ್ರಗಳ ನಡುವೆ ಸಹಕಾರವನ್ನು ಬೆಳೆಸುವಲ್ಲಿ ವಿಶ್ವಾಸದ ಮಹತ್ವವನ್ನು ಒತ್ತಿ ಹೇಳಿದರು. ಸಹಕಾರಕ್ಕೆ ವಿಶ್ವಾಸವು ಪ್ರಮುಖವಾಗಿದೆ. ಸಾಮೂಹಿಕವಾಗಿ ಮುಂದುವರೆದರೆ ಶಾಂಘೈ ಸದಸ್ಯ ರಾಷ್ಟ್ರಗಳು ಅಪಾರ ಪ್ರಯೋಜನವನ್ನು ಪಡೆಯಬಹುದು ಎಂದರು.

ಪರಸ್ಪರ ಗೌರವ ಮತ್ತು ಸಾರ್ವಭೌಮ ಸಮಾನತೆ ಆಧಾರದ ಮೇಲೆ ಸಹಕಾರ ಇರಬೇಕು, ರಾಷ್ಟ್ರಗಳ ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತ್ವವನ್ನು ಗುರುತಿಸಬೇಕು ಎಂದು ಹೇಳಿದ ಜೈ ಶಂಕರ್, ಶಾಂಘೈ ಸಹಕಾರ ಸಂಘಟನೆಯ ಮಹತ್ವವನ್ನು ವಿವರಿಸಿದರು. ಇದು ಪರಸ್ಪರ ನಂಬಿಕೆ, ಸ್ನೇಹ ಮತ್ತು ಉತ್ತಮ ನೆರೆಹೊರೆಯನ್ನು ಬಲಪಡಿಸುವ ಗುರಿಯನ್ನು ಹೊಂದಿದೆ. ಒಂದು ವೇಳೆ ನಂಬಿಕೆಯ ಕೊರತೆಯಿದ್ದರೆ ಅಥವಾ ಸಹಕಾರ ಅಸಮರ್ಪಕವಾಗಿದ್ದರೆ, ಸ್ನೇಹ ಕಡಿಮೆಯಾಗಿದ್ದರೆ ಮತ್ತು ಎಲ್ಲೋ ಉತ್ತಮ ನೆರೆಹೊರೆ ಇಲ್ಲದಿದ್ದರೆ, ಆತ್ಮಾವಲೋಕನ ಮಾಡಿಕೊಳ್ಳಲು ಮತ್ತು ಪರಿಹಾರಕ್ಕೆ ಖಂಡಿತವಾಗಿಯೂ ಕಾರಣಗಳಿವೆ ಎಂದು ಅವರು ತಿಳಿಸಿದರು.

ಸಾರ್ವಭೌಮತ್ವಕ್ಕೆ ನಮ್ಮ ಬದ್ಧತೆಯನ್ನು ಅತ್ಯಂತ ಪ್ರಾಮಾಣಿಕವಾಗಿ ಪುನರುಚ್ಚರಿಸಿದಾಗ ಮಾತ್ರ ಸಹಕಾರದ ಪ್ರಯೋಜನಗಳನ್ನು ಸಂಪೂರ್ಣವಾಗಿ ಅರಿತುಕೊಳ್ಳಬಹುದು ಎಂದು ಹೇಳಿದ ಜೈಶಂಕರ್ ಅವರು ಏಕಪಕ್ಷೀಯ ಅಜೆಂಡಾಗಳ ವಿರುದ್ಧ ಎಚ್ಚರಿಕೆ ನೀಡಿದರು. ವ್ಯಾಪಾರ ಮತ್ತು ಸಾಗಣೆಯಲ್ಲಿ ಗುಂಪಿನ ರಾಷ್ಟ್ರವೊಂದರ ಜೊತೆಗೆ ವ್ಯವಹಾರ ನಡೆಸುವ 'ಚೆರ್ರಿ-ಪಿಕ್' ಅಭ್ಯಾಸಗಳಿಂದ ಪ್ರಗತಿ ಹೊಂದಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಪರೋಕ್ಷವಾಗಿ ಚೀನಾದ ನಡವಳಿಕೆ ವಿರುದ್ಧ ಟೀಕಾ ಪ್ರಹಾರ ನಡೆಸಿದರು. ನಿಜವಾದ ಪಾಲುದಾರಿಕೆಯಲ್ಲಿ ಸಹಕಾರವನ್ನು ನಿರ್ಮಿಸಬೇಕು ಎಂದು ಅವರು ಪುನರುಚ್ಚರಿಸಿದರು.

ವಿಶ್ವಸಂಸ್ಥೆ ಭದ್ರತಾ ಮಂಡಳಿ (UNSC) ಸುಧಾರಣೆಯ ಅಗತ್ಯ ಕುರಿತು ಮಾತನಾಡಿದ ಜೈಶಂಕರ್, ಶಾಶ್ವತ ಮತ್ತು ಶಾಶ್ವತವಲ್ಲದ ವಿಭಾಗಗಳಲ್ಲಿ ಯುಎನ್ ಭದ್ರತಾ ಮಂಡಳಿಯ ಸಮಗ್ರ ಸುಧಾರಣೆ ಅತ್ಯಗತ್ಯವಾಗಿದೆ. ವಿಶ್ವಸಂಸ್ಥೆಯ ವಿಶ್ವಾಸಾರ್ಹತೆ ಮತ್ತು ಪರಿಣಾಮಕಾರಿತ್ವವು ಸಮಗ್ರ ಸುಧಾರಣೆಯ ಮೂಲಕ ಅಭಿವೃದ್ಧಿಶೀಲ ರಾಷ್ಟ್ರಗಳನ್ನು ಪ್ರತಿನಿಧಿಸುವುದರ ಮೇಲೆ ಅವಲಂಬಿತವಾಗಿದೆ ಎಂದು ಜುಲೈ 2024 ರಲ್ಲಿ ಅಸ್ತಾನಾದಲ್ಲಿ ಮಾಡಿಕೊಂಡ ಒಪ್ಪಂದದ ಸಭೆಯನ್ನು ಅವರು ನೆನಪಿಸಿದರು.

ಜೈಶಂಕರ್
ಪಾಕಿಸ್ತಾನದಲ್ಲಿ ಇಂದಿನಿಂದ SCO summit: ಎಸ್ ಜೈಶಂಕರ್ ಭೇಟಿಯಿಂದ ಏನು ನಿರೀಕ್ಷಿಸಬಹುದು?

ಇತ್ತೀಚಿನ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಅಂಗೀಕರಿಸಲಾದ ನಿರ್ಣಯದಲ್ಲಿ ಭದ್ರತಾ ಮಂಡಳಿಯನ್ನು ಹೆಚ್ಚು ಪ್ರಾತಿನಿಧ್ಯ, ಅಂತರ್ಗತ, ಪಾರದರ್ಶಕ, ದಕ್ಷ, ಪರಿಣಾಮಕಾರಿ, ಪ್ರಜಾಸತ್ತಾತ್ಮಕ ಮತ್ತು ಜವಾಬ್ದಾರಿಯುತವಾಗಿಸುವ ಮೂಲಕ ಮತ್ತಷ್ಟು ಸುಧಾರಣೆಗೆ ನಮ್ಮ ನಾಯಕರು ಒಪ್ಪಿಕೊಂಡಿದ್ದಾರೆ. ಅಂತಹ ಬದಲಾವಣೆಯನ್ನು ಪ್ರತಿಪಾದಿಸುವಲ್ಲಿ SCO ಮುನ್ನಡೆಯಬೇಕು, ಅಂತಹ ಪ್ರಾಮುಖ್ಯತೆಯ ವಿಷಯವನ್ನು ತಡೆಹಿಡಿಯಬಾರದು ಎಂದು ಜೈಶಂಕರ್ ಹೇಳಿದರು.

ವಿವಿಧ ಜಾಗತಿಕ ಸವಾಲುಗಳನ್ನು ಉಲ್ಲೇಖಿಸಿದ ಜೈಶಂಕರ್, ಜಗತ್ತಿನ ವ್ಯವಹಾರಗಳಲ್ಲಿ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದೇವೆ. ಪ್ರಸ್ತುತ ಎರಡು ಪ್ರಮುಖ ಸಂಘರ್ಷಗಳು ನಡೆಯುತ್ತಿವೆ, ಪ್ರತಿಯೊಂದೂ ತನ್ನದೇ ಆದ ಜಾಗತಿಕ ಪರಿಣಾಮಗಳನ್ನು ಹೊಂದಿದೆ. ಕೋವಿಡ್ ಸಾಂಕ್ರಾಮಿಕ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಅನೇಕರನ್ನು ವಿನಾಶಕ್ಕೆ ತಳ್ಳಿದೆ ಎಂದು ಹೇಳಿದ ಅವರು ಜಾಗತಿಕ ಸಾಲದ ಬಿಕ್ಕಟ್ಟಿನ ಬಗ್ಗೆ ಕಳವಳ ವ್ಯಕ್ತಪಡಿಸಿದರು, ಅಭಿವೃದ್ಧಿ ಮತ್ತು ಬೆಳವಣಿಗೆಗೆ ಶಾಂತಿ ಮತ್ತು ಸ್ಥಿರತೆಯ ಅವಶ್ಯಕತೆಯಿದೆ. ಭಯೋತ್ಪಾದನೆ ಮತ್ತು ಉಗ್ರವಾದದಿಂದ ಕೂಡಿದ ಗಡಿಯಾಚೆಗಿನ ಚಟುವಟಿಕೆಗಳು, ವ್ಯಾಪಾರ, ಶಕ್ತಿಯ ಹರಿವು ಮತ್ತು ಸಂಪರ್ಕಕ್ಕೆ ಹಾನಿಕಾರಕವಾಗಿದೆ ಎಂದು ಒತ್ತಿ ಹೇಳಿದರು.

ಚೀನಾ, ಭಾರತ, ರಷ್ಯಾ, ಪಾಕಿಸ್ತಾನ, ಇರಾನ್, ಕಝಾಕಿಸ್ತಾನ್, ಕಿರ್ಗಿಸ್ತಾನ್, ತಜಕಿಸ್ತಾನ್, ಉಜ್ಬೇಕಿಸ್ತಾನ್ ಮತ್ತು ಬೆಲಾರಸ್ ಶಾಂಘೈ ಸಹಕಾರ ಸಂಘಟನೆ (SCO) ಸದಸ್ಯ ರಾಷ್ಟ್ರಗಳಿವೆ. ಇನ್ನೂ 16 ದೇಶಗಳು ವೀಕ್ಷಕರು ಅಥವಾ ಸಂವಾದ ಪಾಲುದಾರರಾಗಿ ಕೂಡಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com