
ಮಾಸ್ಕೋ: ಯುಕ್ರೇನ್ ವಿರುದ್ಧದ ಯುದ್ಧ ಯಾವಾಗ ಅಂತ್ಯವಾಗುತ್ತದೆ ಎಂಬುದನ್ನು ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ ಎಂದು ಹೇಳಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಯುದ್ಧದ ಪರಿಸ್ಥಿತಿಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಕಾಳಜಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮಾಸ್ಕೋದಲ್ಲಿ ಮಾಧ್ಯಮ ಸಂವಾದದಲ್ಲಿ ಮಾತನಾಡಿರುವ ಪುಟಿನ್, ತಮ್ಮ ದೇಶ ಮಾತುಕತೆಗೆ ಸಿದ್ಧವಿದೆ ಎಂದು ಹೇಳಿದರು ಆದರೆ ಈ ನಿಟ್ಟಿನಲ್ಲಿ ರಷ್ಯಾ ಈ ಹಿಂದೆ ಮಾಡಿದ ಪ್ರಯತ್ನಗಳನ್ನು ಉಕ್ರೇನ್ ಕಸದ ಬುಟ್ಟಿಗೆ ಹಾಕಿದೆ ಎಂದು ಆರೋಪಿಸಿದರು.
ರಷ್ಯಾ ಮತ್ತು ಉಕ್ರೇನ್ ನಡುವೆ ಶಾಂತಿ ಮಾತುಕತೆಯಲ್ಲಿ ಭಾರತದ ಪಾತ್ರವನ್ನು ನೀವು ಗಮನಿಸಿದ್ದೀರಾ? ಎಂಬ ಪಿಟಿಐ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು "ಸ್ನೇಹಿತ" ಮೋದಿ ಅವರು ವ್ಯಕ್ತಪಡಿಸಿದ ಕಾಳಜಿಯನ್ನು ಉಲ್ಲೇಖಿಸಿದ್ದು, ಮೋದಿ ಕಾಳಜಿಗೆ ರಷ್ಯಾ "ಕೃತಜ್ಞತೆ ಸಲ್ಲಿಸುತ್ತದೆ" ಎಂದು ಅವರು ಹೇಳಿದ್ದಾರೆ.
ಯುದ್ಧವನ್ನು ಕೊನೆಗೊಳಿಸಲು ನಿರ್ದಿಷ್ಟ ದಿನಾಂಕವನ್ನು ನಿಗದಿ ಮಾಡುವುದು ಕಷ್ಟಕರ ಮತ್ತು ಪ್ರತಿಕೂಲವಾಗಿದೆ ಎಂದು ಪುಟಿನ್ ಇದೇ ವೇಳೆ ಹೇಳಿದರು.
ರಷ್ಯಾವನ್ನು ಯುದ್ಧಕ್ಕೆ ತಳ್ಳಿದ್ದಕ್ಕಾಗಿ ಪುಟಿನ್, ಯುಎಸ್ ಮತ್ತು ನ್ಯಾಟೋವನ್ನು ದೂಷಿಸಿದರು ಮತ್ತು ಇದರ ವಿರುದ್ಧ ರಷ್ಯಾ ಮೇಲುಗೈ ಸಾಧಿಸುತ್ತದೆ ಎಂದು ಹೇಳಿದ್ದಾರೆ.
Advertisement