
ಚಿತ್ತಗಾಂಗ್: ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ವ್ಯವಹಾರ ಸಚಿವಾಲಯ ತೆರೆಯುವುದು ಸೇರಿದಂತೆ ಪ್ರಮುಖ 8 ಬೇಡಿಕೆಗಳನ್ನು ಮಧ್ಯಂತರ ಸರ್ಕಾರ ಈಡೇರಿಸುವಂತೆ ಒತ್ತಾಯಿಸಿ ಸಹಸ್ರಾರು ಹಿಂದೂಗಳು ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಿದರು.
ಚಿತ್ತಗಾಂಗ್ ನ ಐತಿಹಾಸಿಕ ಲಾಲ್ಡಿಘಿ ಮೈದಾನದಲ್ಲಿ ಜಮಾಯಿಸಿದ್ದ ಪ್ರತಿಭಟನಾಕಾರರು ತಮ್ಮ ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ಮುಂದುವರೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಬಾಂಗ್ಲಾದೇಶ ಸನಾತನ ಜಾಗರಣ್ ಮಂಚ್ ಆಯೋಜಿಸಿದ ಪ್ರತಿಭಟನೆ ಇತ್ತೀಚಿಗಿನ ಅತಿದೊಡ್ಡ ಪ್ರತಿಭಟನೆಯಾಗಿದೆ.
ತಮ್ಮ ಬೇಡಿಕೆ ಈಡೇರಿಸದಿದ್ದರೆ ಢಾಕಾಕ್ಕೆ ಮೆರವಣಿಗೆ ನಡೆಸುವುದಾಗಿ ಪ್ರತಿಭಟನಾಕಾಕರು ಎಚ್ಚರಿಕೆ ನೀಡಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಗುರುವಾರ ಬಾಂಗ್ಲಾದೇಶದ ಪರಿಸರ ಸಚಿವ ಸೈಯದಾ ರಿಜ್ವಾನಾ ಹಸನ್ , ಹಿಂದೂ ಸಮುದಾಯದ ಬೇಡಿಕೆ ಈಡೇರಿಸುವ ಹೇಳಿಕೆ ನೀಡಿದ್ದರು. ದುರ್ಗಾ ಪೂಜೆಗಾಗಿ ಎರಡು ದಿನಗಳ ರಜೆಯನ್ನು ಜಾರಿಗೊಳಿಸುವುದಾಗಿ ಘೋಷಿಸಿದೆ.
ಪ್ರತಿಭಟನಾಕಾರರ ಪ್ರಮುಖ ಬೇಡಿಕೆಗಳು:
ಅಲ್ಪಸಂಖ್ಯಾತರ ದೌರ್ಜನ್ಯಗಳಲ್ಲಿ ಭಾಗಿಯಾಗಿರುವವರ ವಿಚಾರಣೆಯನ್ನು ತ್ವರಿತಗೊಳಿಸಲು ನ್ಯಾಯಮಂಡಳಿ ರಚನೆ
ಸಂತ್ರಸ್ತರಿಗೆ ಸೂಕ್ತ ಪರಿಹಾರ ಮತ್ತು ಪುನರ್ವಸತಿ
ವಿಳಂಬವಿಲ್ಲದೆ ಅಲ್ಪಸಂಖ್ಯಾತರ ರಕ್ಷಣೆಯ ಕಾನೂನು ಜಾರಿಗೊಳಿಸುವುದು
ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ರಚನೆ
ಪ್ರತಿ ಶಿಕ್ಷಣ ಸಂಸ್ಥೆಗಳಲ್ಲಿ ಅಲ್ಪಸಂಖ್ಯಾತರ ಪ್ರಾರ್ಥನಾ ಸ್ಥಳಗಳ ನಿರ್ಮಾಣ
ಪ್ರತಿ ಹಾಸ್ಟೆಲ್‌ನಲ್ಲಿ ಪ್ರಾರ್ಥನಾ ಕೊಠಡಿಗಳ ಸ್ಥಾಪನೆ
ಸಂಸ್ಕೃತ ಮತ್ತು ಪಾಲಿ ಶಿಕ್ಷಣ ಮಂಡಳಿಯ ಆಧುನೀಕರಣ.
ದುರ್ಗಾ ಪೂಜೆಗೆ ಐದು ದಿನ ರಜೆ
ಈ ಪ್ರತಿಭಟನೆ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಸುರಕ್ಷತೆಯ ಬಗ್ಗೆ ಎಚ್ಚರಿಕೆಯನ್ನು ನೀಡಿತು. ಆಗಸ್ಟ್ 5 ರಂದು ಶೇಖ್ ಹಸೀನಾ ಅವರನ್ನು ಪದಚ್ಯುತಗೊಳಿಸಿದ ನಂತರ ಹಿಂದೂ ಸಮುದಾಯದ ಅತಿದೊಡ್ಡ ಸಭೆಗಳಲ್ಲಿ ಇದು ಒಂದಾಗಿದೆ.
ಆಗಸ್ಟ್ 7 ರಿಂದ ನೊಬೆಲ್ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರದಿಂದ ಸುರಕ್ಷತೆಯ ಭರವಸೆ ಹೊರತಾಗಿಯೂ, ವಿಧ್ವಂಸಕತೆ, ಲೂಟಿ ಮತ್ತು ದೈಹಿಕ ಅಪರಾಧಗಳು ಸೇರಿದಂತೆ ಅಲ್ಪಸಂಖ್ಯಾತರ ವಿರುದ್ಧದ ಅಪರಾಧ, ಹಾನಿ-ಹೆಚ್ಚಾಗಿದೆ ಎಂದು ವರದಿಯಾಗಿದೆ. ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯ ದುರ್ಗಾ ಪೂಜೆಯ ಮಂಟಪಗಳ ಮೇಲಿನ ದಾಳಿ ಮತ್ತು ಹಿಂದೂ ದೇವಾಲಯಗಳಿಂದ ಕಳ್ಳತನವನ್ನು ಖಂಡಿಸಿದೆ.
Advertisement