ವೆಲೆನ್ಸಿಯಾ: ಸ್ಪೇನ್‌ನಲ್ಲಿ ಮಳೆರಾಯ ಅಬ್ಬರಿಸಿ ಬೊಬ್ಬಿರಿದಿದ್ದು, ಭೀಕರ ಪ್ರವಾಹದಲ್ಲಿ ಕನಿಷ್ಠ 158 ಮಂದಿ ಮೃತಪಟ್ಟಿದ್ದಾರೆ ಮತ್ತು ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಧಾರಾಕಾರ ಮಳೆ ಮತ್ತು ಪ್ರವಾಹದಿಂದ ತತ್ತರಿಸಿರುವ ಪೂರ್ವ ಸ್ಪೇನ್‍ನ ವಲೆನ್ಸಿಯಾ ಪ್ರಾಂತದಲ್ಲಿ ಹಲವು ಕಟ್ಟಡಗಳು, ಸೇತುವೆಗಳು ಮತ್ತು ಕಾರುಗಳು ನೆರೆನೀರಲ್ಲಿ ಕೊಚ್ಚಿಹೋಗಿವೆ.
ಮಣ್ಣಿನ ಕಟ್ಟಡಗಳ ಅವಶೇಷಗಳಡಿ ಸಿಲುಕಿರುವವರ ಶೋಧಕ್ಕಾಗಿ ರಕ್ಷಣ ಸಿಬ್ಬಂದಿ ಶೋಧ ನಡೆಸುತ್ತಿದ್ದಾರೆ.
ಸ್ಪೇನ್‌ನಲ್ಲಿ ಈ ಶತಮಾನದಲ್ಲಿ ಸಂಭವಿಸಿದ ಭೀಕರ ದುರಂತ ಇದಾಗಿದ್ದು, ವ್ಯಾಪಕ ಹಾನಿಯು ಚಂಡಮಾರುತ ಅಥವಾ ಸುನಾಮಿಯಂತಹ ಪರಿಣಾಮವನ್ನು ನೆನಪಿಸುತ್ತದೆ.
ನೂರಾರು ಕಾರುಗಳು ಮಣ್ಣಿನಡಿ ಸಿಲುಕಿದ್ದು, ಅದರೊಳಗೆ ಸಿಲುಕಿರುವ ಮೃತದೇಹಗಳನ್ನು ಹೊರತೆಗೆಯಲಾಗುತ್ತಿದೆ. ನೂರಾರು ವಾಹನಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದು, ದೊಡ್ಡ ದೊಡ್ಡ ಮರಗಳು ಸಹ ಬೇರು ಸಹಿತ ಬುಡಮೇಲಾಗಿವೆ ಮತ್ತು ವಿದ್ಯುತ್ ಕಂಬಗಳು ಧರೆಗುರುಳಿವೆ.
"ದುರದೃಷ್ಟವಶಾತ್, ಕೆಲವು ವಾಹನಗಳಲ್ಲಿ ಮೃತದೇಹಗಳಿವೆ" ಎಂದು ಸ್ಪೇನ್‌ನ ಸಾರಿಗೆ ಸಚಿವ ಆಸ್ಕರ್ ಪುಯೆಂಟೆ ಅವರು ಹೇಳಿದ್ದಾರೆ.
ಭಾರಿ ಮಳೆ ಮತ್ತು ಪ್ರವಾಹದ ಹಿನ್ನೆಲೆಯಲ್ಲಿ ಮ್ಯಾಡ್ರಿಡ್ ಮತ್ತು ಬಾರ್ಸೆಲೋನಾ ನಗರಗಳಲ್ಲಿ ರೈಲು ಸಂಚಾರ ರದ್ದುಗೊಂಡಿದ್ದು ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಮತ್ತು ಇತರ ಅಗತ್ಯ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ವರದಿಯಾಗಿದೆ
Advertisement