ಗಡಿ ಪಾರಿಗೆ ಬಾಂಗ್ಲಾ ಮನವಿ ಸಲ್ಲಿಸುವವರೆಗೂ ಹಸೀನಾ ಭಾರತದಲ್ಲಿ ಸುಮ್ಮನಿರಬೇಕು: ಮೊಹಮ್ಮದ್ ಯೂನಸ್
ಢಾಕಾ: ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿರುವ ಮೊಹಮ್ಮದ್ ಯೂನಸ್, ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ ಬಗ್ಗೆ ಮಾತನಾಡಿದ್ದಾರೆ.
ಭಾರತದಲ್ಲಿರುವ ಶೇಖ್ ಹಸೀನಾ ಅಲ್ಲಿ ಕುಳಿತುಕೊಂಡು ರಾಜಕೀಯ ಹೇಳಿಕೆಗಳನ್ನು ನೀಡುವುದು ಉಭಯ ದೇಶಗಳಿಗೂ ಅನಾನುಕೂಲತೆ ಉಂಟು ಮಾಡುತ್ತದೆ. ಇದು ಉಭಯ ದೇಶಗಳ ನಡುವಿನ ಮೈತ್ರಿಗೆ ವಿರುದ್ಧವಾದ ಲಕ್ಷಣವಾಗಿದೆ, ಆದ್ದರಿಂದ ಬಾಂಗ್ಲಾದೇಶ ಅವರ ಗಡಿಪಾರಿಗೆ ಮನವಿ ಸಲ್ಲಿಸುವವರೆಗೂ ಶೇಖ್ ಹಸೀನಾ ಭಾರತದಲ್ಲಿ ಸುಮ್ಮನಿರಬೇಕು ಎಂದು ಹೇಳಿದ್ದಾರೆ.
"ಬಾಂಗ್ಲಾದೇಶ (ಸರ್ಕಾರ) ಆಕೆಯನ್ನು ಹಿಂತಿರುಗಿಸುವುದಕ್ಕೆ ಮನವಿ ಸಲ್ಲಿಸುವವರೆಗೂ ಭಾರತವು ಆಕೆಯನ್ನು ತನ್ನಲ್ಲಿಯೇ ಉಳಿಸಿಕೊಳ್ಳಲು ಬಯಸಿದರೆ, ಆಕೆ ಮೌನವಾಗಿರಬೇಕಾಗುತ್ತದೆ" ಎಂದು ಅವರು ಹೇಳಿದ್ದಾರೆ.
ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಮೊಹಮ್ಮದ್ ಯೂನಸ್, ಬಾಂಗ್ಲಾ, ಭಾರತದೊಂದಿಗಿನ ಭಾರತದೊಂದಿಗೆ ಬಲವಾದ ಬಾಂಧವ್ಯ ಮೌಲ್ಯಯುತವಾದದ್ದು ಎಂದು ಗೌರವಿಸುತ್ತದೆ. ಭಾರತ ಅವಾಮಿ ಲೀಗ್ ಹೊರತುಪಡಿಸಿ ಉಳಿದೆಲ್ಲ ರಾಜಕೀಯ ಪಕ್ಷಗಳನ್ನು ಇಸ್ಲಾಮಿಸ್ಟ್ ಎಂದು ಬಿಂಬಿಸುವ ಮತ್ತು ಶೇಖ್ ಹಸೀನಾ ಇಲ್ಲದೆ ದೇಶವು ಅಫ್ಘಾನಿಸ್ತಾನವಾಗಿ ಬದಲಾಗುತ್ತದೆ ಎಂಬ ನಿರೂಪಣೆಯನ್ನು ಮೀರಿ ನಡೆಯಬೇಕಾಗಿದೆ ಎಂದು ಹೇಳಿದ್ದಾರೆ.
"ಭಾರತದಲ್ಲಿ ಆಕೆಯ ನಿಲುವುಗಳು ಯಾರಿಗೂ ಹಿತಕರವಾಗಿಲ್ಲ. ಏಕೆಂದರೆ, ಆಕೆ ಭಾರತದಲ್ಲಿದ್ದಾರೆ ಮತ್ತು ಕೆಲವೊಮ್ಮೆ ಮಾತನಾಡುತ್ತಾರೆ. ಇದು ಸಮಸ್ಯಾತ್ಮಕವಾಗಿದೆ. ಆಕೆ ಸುಮ್ಮನಿದ್ದರೆ, ನಾವು ಅದನ್ನು ಮರೆತುಬಿಡುತ್ತಿದ್ದೆವು; ಶೇಖ್ ಹಸೀನಾ ತಮ್ಮದೇ ಆದ ಪ್ರಪಂಚದಲ್ಲಿ ಇರುತ್ತಿದ್ದ ಹಿನ್ನೆಲೆಯಲ್ಲಿ ಜನರೂ ಆಕೆಯನ್ನು ಮರೆತುಬಿಡುತ್ತಿದ್ದರು. ಆದರೆ ಆಕೆ ಮಾತನಾಡುತ್ತಾರೆ ಅದು ಯಾರಿಗೂ ಇಷ್ಟವಾಗುವುದಿಲ್ಲ ಎಂದು ಹೇಳಿದ್ದಾರೆ.
ಯೂನಸ್ ಅವರು ಆಗಸ್ಟ್ 13 ರಂದು ಹಸೀನಾ ಅವರ ಹೇಳಿಕೆಯನ್ನು ಉಲ್ಲೇಖಿಸಿ ಈ ಹೇಳಿಕೆ ನೀಡಿದ್ದಾರೆ. ಆ.13 ರ ಹೇಳಿಕೆಯಲ್ಲಿ ಶೇಖ್ ಹಸೀನಾ,"ನ್ಯಾಯ"ಕ್ಕಾಗಿ ಒತ್ತಾಯಿಸಿದ್ದರು, ಇತ್ತೀಚಿನ "ಭಯೋತ್ಪಾದಕ ಕೃತ್ಯಗಳು", ಹತ್ಯೆಗಳು ಮತ್ತು ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾಗಿರುವವರನ್ನು ತನಿಖೆ ಮಾಡಬೇಕು, ಗುರುತಿಸಬೇಕು ಮತ್ತು ಶಿಕ್ಷಿಸಬೇಕು ಎಂದು ಹೇಳಿದ್ದರು.
“ಶೇಖ್ ಹಸೀನಾ ಅವರ ಈ ಹೇಳಿಕೆಗಳು ನಮಗೆ ಅಥವಾ ಭಾರತಕ್ಕೆ ಒಳ್ಳೆಯದಲ್ಲ. ಅದರ ಬಗ್ಗೆ ಅನಾನುಕೂಲತೆ ಇದೆ,” ಎಂದು ಅವರು ಪಿಟಿಐಗೆ ತಿಳಿಸಿದ್ದಾರೆ.
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿ ಕೋಮುವಾದವಲ್ಲ: ಯೂನಸ್
ಬಾಂಗ್ಲಾದೇಶದ ಸರ್ಕಾರದ ಮುಖ್ಯಸ್ಥರು ಇದೇ ವೇಳೆ ತಮ್ಮ ದೇಶದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳ ಮೇಲಿನ ದಾಳಿಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದಾಳಿಗಳನ್ನು ದೊಡ್ಡ ವಿಷಯವನ್ನಾಗಿ ಮಾಡಲಾಗುತ್ತಿದೆ. ಹಿಂದೂಗಳ ಮೇಲಿನ ದಾಳಿ ಕೋಮುವಾದವಲ್ಲ ಎಂದು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ