ಸಿಂಗಾಪುರ್ ಸಿಟಿ: ಭಾರತ ಮತ್ತು ಸಿಂಗಾಪುರ ಡಿಜಿಟಲ್ ತಂತ್ರಜ್ಞಾನಗಳು, ಅರೆವಾಹಕಗಳು, ಆರೋಗ್ಯ ಸಹಕಾರ ಮತ್ತು ಕೌಶಲ್ಯ ಅಭಿವೃದ್ಧಿ ಕ್ಷೇತ್ರಗಳಲ್ಲಿ ನಾಲ್ಕು ತಿಳುವಳಿಕೆ ಒಪ್ಪಂದಕ್ಕೆ (MoU) ಸಹಿ ಹಾಕಿದ್ದು, ಉಭಯ ರಾಷ್ಟ್ರಗಳ ನಡುವಿನ ಸಹಕಾರವನ್ನು ಮತ್ತಷ್ಟು ಬಲಪಡಿಸುತ್ತದೆ.
ಸಿಂಗಾಪುರ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಗುರುವಾರ ಅಲ್ಲಿನ ಸಂಸತ್ ಭವನಕ್ಕೆ ಆಗಮಿಸಿದಾಗ ಅವರಿಗೆ ವಿದ್ಯುಕ್ತ ಸ್ವಾಗತ ದೊರೆಯಿತು.
ಸಿಂಗಾಪುರ ಪ್ರಧಾನ ಮಂತ್ರಿ ಲಾರೆನ್ಸ್ ವಾಂಗ್ ಅವರನ್ನು ಭೇಟಿಯಾದರು. ಉಭಯ ನಿಯೋಗಗಳು ದ್ವಿಪಕ್ಷೀಯ ಸಭೆಗಳನ್ನು ನಡೆಸಿದರು, ಅದರ ನಂತರ ಎಂಒಯುಗಳಿಗೆ ಸಹಿ ಹಾಕಲಾಯಿತು. ಡಿಜಿಟಲ್ ತಂತ್ರಜ್ಞಾನ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ಭಾರತದ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮತ್ತು ಸಿಂಗಾಪುರದ ಡಿಜಿಟಲ್ ಅಭಿವೃದ್ಧಿ ಮತ್ತು ಮಾಹಿತಿ ಸಚಿವಾಲಯದ ನಡುವೆ ಮೊದಲ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಲಾಯಿತು.
ನಮ್ಮ ಮಾತುಕತೆಗಳು ಕೌಶಲ್ಯ, ತಂತ್ರಜ್ಞಾನ, ಆರೋಗ್ಯ, ಎಐ ಮತ್ತು ಹೆಚ್ಚಿನ ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸುವುದರ ಮೇಲೆ ಕೇಂದ್ರೀಕೃತವಾಗಿವೆ. ವ್ಯಾಪಾರ ಸಂಬಂಧಗಳನ್ನು ಹೆಚ್ಚಿಸುವ ಅಗತ್ಯವನ್ನು ನಾವಿಬ್ಬರೂ ಒಪ್ಪಿಕೊಂಡಿದ್ದೇವೆ ಎಂದು ಭೇಟಿ ನಂತರ ಪ್ರಧಾನಿ ಮೋದಿ ಹೇಳಿದ್ದಾರೆ.
ಡಿಜಿಟಲ್ ತಂತ್ರಜ್ಞಾನಗಳಾದ ಡಿಪಿಐ, ಸೈಬರ್-ಸೆಕ್ಯುರಿಟಿ, 5ಜಿ ಮತ್ತು ಸೂಪರ್-ಕಂಪ್ಯೂಟಿಂಗ್, ಕ್ವಾಂಟಮ್ ಕಂಪ್ಯೂಟಿಂಗ್ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ನಂತಹ ಉದಯೋನ್ಮುಖ ತಂತ್ರಜ್ಞಾನಗಳ ಕ್ಷೇತ್ರಗಳಲ್ಲಿ ಇದು ಭಾರತ ಮತ್ತು ಸಿಂಗಾಪುರದ ನಡುವೆ ನಿಕಟ ಸಹಕಾರವನ್ನು ಸುಗಮಗೊಳಿಸುತ್ತದೆ.
ಈ ಒಡಂಬಡಿಕೆಯ ವ್ಯಾಪ್ತಿಯಲ್ಲಿ ಡಿಜಿಟಲ್ ಕ್ಷೇತ್ರಕ್ಕೆ ಸಂಬಂಧಿಸಿದ ಕಾರ್ಮಿಕರ ಕೌಶಲ್ಯ ಮತ್ತು ಪುನರ್ ಕೌಶಲ್ಯಕ್ಕಾಗಿ ಸಹಕಾರವನ್ನು ಎಂಒಯು ಮತ್ತಷ್ಟು ಸಕ್ರಿಯಗೊಳಿಸುತ್ತದೆ.
Advertisement