ವಾಷಿಂಗ್ಟನ್: ಮೀಸಲಾತಿ ಕುರಿತು ಹೇಳಿಕೆ ನೀಡುವ ಮೂಲಕ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತೊಮ್ಮೆ ಅಮೆರಿಕದಲ್ಲಿ ಹೊಸ ವಿವಾದ ಸೃಷ್ಟಿಸಿದ್ದಾರೆ. ಬಿಜೆಪಿ ನಾಯಕರು ಮಾತ್ರವಲ್ಲದೆ ಬಿಎಸ್ಪಿ ಮತ್ತು ಇತರ ಸಣ್ಣ ಪಕ್ಷಗಳು ಕೂಡ ಮೀಸಲಾತಿ ಮತ್ತು ಇತರ ವಿಷಯಗಳ ಬಗ್ಗೆ ರಾಹುಲ್ ಗಾಂಧಿಯವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಅಮೆರಿಕ ಪ್ರವಾಸದಲ್ಲಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಜಾರ್ಜ್‌ಟೌನ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಜೊತೆಗಿನ ಸಂವಾದದ ವೇಳೆ ದೇಶದಲ್ಲಿ ಎಲ್ಲರಿಗೂ ಸಮಾನ ಅವಕಾಶಗಳು ಸಿಗುವವರೆಗೆ ಕಾಂಗ್ರೆಸ್ ಮೀಸಲಾತಿಯನ್ನು ಕೊನೆಗೊಳಿಸುವುದಿಲ್ಲ. ದೇಶದಲ್ಲಿ ಮೀಸಲಾತಿಯನ್ನು ಕೊನೆಗೊಳಿಸಲು ಇದು ಸರಿಯಾದ ಸಮಯವಲ್ಲ. ಸಮಯ ಬಂದಾಗ ಕಾಂಗ್ರೆಸ್ ಈ ಬಗ್ಗೆ ಯೋಚಿಸಲಿದೆ ಎಂದು ಹೇಳಿದ್ದರು.
ಮೀಸಲಾತಿ ವಿಚಾರವಾಗಿ ತಮ್ಮ ಹೇಳಿಕೆ ವಿರುದ್ಧ ತೀವ್ರ ಟೀಕೆಗಳು ವ್ಯಕ್ತವಾಗುತ್ತಿದ್ದಂತೆ ಇದಕ್ಕೆ ಸ್ಪಷ್ಟನೆ ನೀಡಿರುವ ರಾಹುಲ್ ಗಾಂಧಿ, ಮೀಸಲಾತಿ ಕುರಿತು ತಮ್ಮ ಹೇಳಿಕೆಯನ್ನು ತಪ್ಪಾಗಿ ನಿರೂಪಿಸಲಾಗಿದೆ. ಮೀಸಲಾತಿಗೆ ತಾನು ವಿರೋಧಿಯಲ್ಲ ಎಂದು ಸ್ಪಷ್ಟಪಡಿಸಿದ ಅವರು, ಮೀಸಲಾತಿ ಮೇಲಿನ ಶೇ 50ರ ಮಿತಿಯನ್ನು ತೆಗೆದುಹಾಕುವ ಕಾಂಗ್ರೆಸ್‌ನ ನಿಲುವನ್ನು ಪುನರುಚ್ಚರಿಸಿದರು.
ನೀವು ಹಣಕಾಸಿನ ಅಂಕಿಅಂಶಗಳನ್ನೇ ನೋಡಿ, 100 ರೂಪಾಯಿಯಲ್ಲಿ ಆದಿವಾಸಿಗಳಿಗೆ 10 ಪೈಸೆ ಸಿಗುತ್ತದೆ. ದಲಿತರು 100 ರೂಪಾಯಿಗಳಲ್ಲಿ 5 ರೂಪಾಯಿ ಪಡೆದರೆ OBC ಗಳು ಇದೇ ಮೊತ್ತವನ್ನು ಪಡೆಯುತ್ತಾರೆ. ಇಲ್ಲಿ ಸಮಾನತೆ ಎಲ್ಲಿದೆ ಎಂದು ಹೇಳಿದ್ದರು. ಸಮಸ್ಯೆ ಏನೆಂದರೆ, ಭಾರತದ ಶೇಕಡಾ 90ರಷ್ಟು ಜನರು ವ್ಯವಹಾರ ನಡೆಸಲು ಸಾಧ್ಯವಿಲ್ಲ. ಭಾರತದ ಪ್ರತಿಯೊಬ್ಬ ಉದ್ಯಮಿಗಳ ಪಟ್ಟಿಯನ್ನು ನೋಡಿ. ಅದರಲ್ಲಿ ನನಗೆ ಬುಡಕಟ್ಟು ಹೆಸರನ್ನು ತೋರಿಸಿ. ನನಗೆ ದಲಿತ ಹೆಸರನ್ನು ತೋರಿಸಿ. ನನಗೆ ಒಬಿಸಿಯನ್ನು ತೋರಿಸಿ. ಭಾರತದಲ್ಲಿ 50 ಪ್ರತಿಶತದಷ್ಟು ಇವರಿದ್ದಾರೆ ಆದರೆ ಟಾಪ್ 200 ಉದ್ಯಮಿಗಳಲ್ಲಿ ಇವರ್ಯಾರಿದ್ದಾರೆ ತೋರಿಸಿ ಎಂದು ಹೇಳಿದ್ದರು.
Advertisement