
ಬ್ಯಾಂಕಾಕ್: ಥೈಲ್ಯಾಂಡ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಗುರುವಾರ ಥಾಯ್ ಪ್ರಧಾನಿ ಪೇಟೊಂಗ್‌ಟಾರ್ನ್ ಶಿನವಾತ್ರ ಅವರೊಂದಿಗೆ ನಿಯೋಗ ಮಟ್ಟದ ಮಾತುಕತೆ ನಡೆಸಿದರು.
ಬ್ಯಾಂಕಾಕ್ ಗೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ಭಾರತೀಯ ಮೂಲದ ಸಮುದಾಯ ಆತ್ಮೀಯವಾಗಿ ಬರಮಾಡಿಕೊಂಡಿತು. ಗರ್ಬಾ ನೃತ್ಯವನ್ನು ಪ್ರದರ್ಶಿಸಲಾಯಿತು. ನಂತರ ಗಾರ್ಡ್ ಆಫ್ ಹಾನರ್ ನೀಡಲಾಯಿತು.
"ಪ್ರಧಾನಿ ಮೋದಿ ಅವರಿಗೆ ಗಾರ್ಡ್ ಆಫ್ ಆನರ್‌ನೊಂದಿಗೆ ಥೈಲ್ಯಾಂಡ್‌ನ ಪ್ರಧಾನಿ ವಿಶೇಷ ಸ್ವಾಗತ ನೀಡಿದರು. ಇಂದು ಬ್ಯಾಂಕಾಕ್‌ನ ಸರ್ಕಾರಿ ಭವನದಲ್ಲಿ ಪ್ರಧಾನಿ ಮೋದಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು" ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು X ನಲ್ಲಿ ಪೋಸ್ಟ್ ಮಾಡಿದ್ದಾರೆ.
"ಭವಿಷ್ಯದ ಭಾರತ-ಥೈಲ್ಯಾಂಡ್ ಪಾಲುದಾರಿಕೆಗೆ ದಾರಿ ಮಾಡಿಕೊಡಲು ಇಬ್ಬರೂ ನಾಯಕರು ವ್ಯಾಪಕ ಚರ್ಚೆಗಳನ್ನು ನಡೆಸಲಿದ್ದಾರೆ" ಎಂದು ಅವರು ಹೇಳಿದ್ದಾರೆ.
ಇನ್ನು X ನಲ್ಲಿ ಪ್ರಧಾನಿ ಮೋದಿ ಸಹ ಪೋಸ್ಟ್ ಮಾಡಿದ್ದು, ಬ್ಯಾಂಕಾಕ್‌ಗೆ ಬಂದ ನಂತರ ಆಕರ್ಷಕ ರಾಮಕಿಯನ್, ಥಾಯ್ ರಾಮಾಯಣ ವೀಕ್ಷಿಸಿದೆ ಎಂದು ಹೇಳಿದ್ದಾರೆ. ರಾಮಕಿಯನ್ ಥಾಯ್ಲೆಂಡ್‌ನ ಪೌರಾಣಿಕ ಗ್ರಂಥಗಳಲ್ಲಿ ಒಂದು.
ನಂತರ ಮತ್ತೊಂದು ಪೋಸ್ಟ್ ನಲ್ಲಿ ಭಾರತ ಮತ್ತು ಥೈಲ್ಯಾಂಡ್ ಕಾರ್ಯತಂತ್ರದ ಪಾಲುದಾರಿಯನ್ನು ಮತ್ತಷ್ಟು ಗಟ್ಟಿಗೊಳಿಸಲು ಗಮನ ಕೇಂದ್ರೀಕರಿಸಿದ್ದೇವೆ. ರಕ್ಷಣೆ, ಭದ್ರತೆ, ಕಡಲ ಭದ್ರತೆ, ಜಲ ವಿಜ್ಞಾನದಂತಹ ಕಾರ್ಯತಂತ್ರದ ಕ್ಷೇತ್ರಗಳ ಕುರಿತಾಗಿಯೂ ಚರ್ಚಿಸಿದ್ದೇವೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
ಭಯೋತ್ಪಾದನೆ, ಅಕ್ರಮ ಹಣ ವರ್ಗಾವಣೆ ಮತ್ತು ಇತರೆ ಸವಾಲುಗಳನ್ನು ಒಟ್ಟಾಗಿ ಎದುರಿಸಲು ಕೆಲಸ ಮಾಡಲು ನಮ್ಮ ಬದ್ಧತೆಯನ್ನು ಪುನರುಚ್ಚರಿಸಿದ್ದೇವೆ ಎಂದು ಪ್ರಧಾನಿ ಹೇಳಿದ್ದಾರೆ.
ಎರಡು ದಿನಗಳ ಥೈಲ್ಯಾಂಡ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರು ಬಂಗಾಳ ಕೊಲ್ಲಿ ಬಹುವಲಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರ ಸಂಘಟನೆ(BIMSTEC)ಯ 6ನೇ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.
Advertisement