
ಒಟ್ಟಾವಾ: ಕೆನಡಾದಲ್ಲಿ ಭಾರತೀಯ ಪ್ರಜೆಗಳ ಕೊಲೆ ಪ್ರಕರಣ ಮುಂದುವರೆದಿದೆ. ಒಟ್ಟಾವಾ ನಗರದ ಬಳಿ ಭಾರತೀಯ ಪ್ರಜೆಗೆ ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ.
ಈ ಸಂಬಂಧ ಪೊಲೀಸರು ಶಂಕಿತನನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ ಎಂದು ಅಲ್ಲಿನ ಭಾರತೀಯ ಹೈಕಮಿಷನ್ ತಿಳಿಸಿದೆ. ಕೆನಡಾದ ರಾಜಧಾನಿ ಒಟ್ಟಾವಾದಲ್ಲಿರುವ ರಾಕ್‌ಲ್ಯಾಂಡ್‌ನಲ್ಲಿ ಈ ಘಟನೆ ನಡೆದಿದೆ. ಮೃತನ ಗುರುತು ಪತ್ತೆಯಾಗಿಲ್ಲ ಎಂದು ಭಾರತೀಯ ಹೈಕಮಿಷನ್ ತಿಳಿಸಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ಹೈಕಮಿಷನ್, ಮೃತನ ಕುಟುಂಬಕ್ಕೆ ನೆರವಾಗಲು ಸ್ಥಳೀಯ ಸಮುದಾಯ ಸಂಘದೊಂದಿಗೆ ನಿಕಟ ಸಂಪರ್ಕದಲ್ಲಿದ್ದೇವೆ ಎಂದು ಹೇಳಿದೆ.
ಶುಕ್ರವಾರ ಮಧ್ಯಾಹ್ನ 3 ಗಂಟೆಯ ಮೊದಲು ರಾಕ್‌ಲ್ಯಾಂಡ್‌ನ ಲಾಲೋಂಡೆ ಸ್ಟ್ರೀಟ್ ಬಳಿ ಈ ಘಟನೆ ನಡೆದಿದೆ ಎಂದು ಒಂಟಾರಿಯೊ ಪ್ರಾಂತೀಯ ಪೊಲೀಸ್ (OPP)ಹೇಳಿರುವುದಾಗಿ ಸಿಟಿವಿ ನ್ಯೂಸ್ ವರದಿ ಮಾಡಿದೆ.
ಘಟನೆ ನಡೆದ ಸ್ಥಳ ಡೌನ್‌ಟೌನ್ ಒಟ್ಟಾವಾದಿಂದ ಪೂರ್ವಕ್ಕೆ ಸರಿಸುಮಾರು 40 ಕಿಲೋಮೀಟರ್ ದೂರದಲ್ಲಿದೆ. ಕಸ್ಟಡಿಯಲ್ಲಿರುವ ವ್ಯಕ್ತಿಯ ಆರೋಪ ಕುರಿತು ಪೊಲೀಸರು ಇನ್ನೂ ಏನನ್ನೂ ಹೇಳಿಲ್ಲ. ಸಾರ್ವಜನಿಕ ಸುರಕ್ಷತೆಯ ಬಗ್ಗೆ ಯಾವುದೇ ಭಯಪಡಬೇಕಾಗಿಲ್ಲ. ತನಿಖೆಯ ಆರಂಭಿಕ ಹಂತದಲ್ಲಿರುವುದರಿಂದ ಹೆಚ್ಚಿನ ಮಾಹಿತಿಯನ್ನು ಒದಗಿಸಲಾಗುವುದಿಲ್ಲ ಪೊಲೀಸರು ಹೇಳಿರುವುದಾಗಿ CTV ನ್ಯೂಸ್ ವರದಿ ಮಾಡಿದೆ.
Advertisement