TTP ಸಂಘಟನೆಯ 54 ಉಗ್ರರನ್ನು ಕೊಂದ ಪಾಕ್ ಭದ್ರತಾ ಪಡೆಗಳು! ಜಗತ್ತಿನ ಮುಂದೆ ಮತ್ತೊಂದು ನಾಟಕವೇ?
ಪೇಶಾವರ: ಅಪ್ಘಾನಿಸ್ತಾನದಿಂದ ಪಾಕಿಸ್ತಾನದ ಗಡಿ ದಾಟಲು ಯತ್ನಿಸುತ್ತಿದ್ದ ತೆಹರಿಕ್ ಎ ತಾಲಿಬಾನ್ ಪಾಕಿಸ್ತಾನ್ (TTP) ಸಂಘಟನೆಯ 54 ಉಗ್ರರನ್ನು ಹೊಡೆದುರುಳಿಸಿರುವುದಾಗಿ ಪಾಕಿಸ್ತಾನ ಸೇನೆಯ ಮಾಧ್ಯಮ ವಿಭಾಗ ಭಾನುವಾರ ಹೇಳಿಕೊಂಡಿದೆ.
ಏಪ್ರಿಲ್ 25, 26 ಮತ್ತು ಏಪ್ರಿಲ್ 26 ಮತ್ತು 27 ರಂದು ಮಧ್ಯ ರಾತ್ರಿ ಖೈಬರ್ ಪಂಕ್ತುವಾ ಪ್ರಾಂತ್ಯದ ಉತ್ತರ ವಜಿರಿಸ್ತಾನ್ ಬಳಿ ಉಗ್ರರ ಗುಂಪನ್ನು ಪತ್ತೆ ಹಚ್ಚಿದ ಪಾಕ್ ಭದ್ರತಾ ಪಡೆಗಳು ಗುಂಡಿನ ಕಾಳಗ ನಡೆಸಿರುವುದಾಗಿ ಅಂತರ್ ಸೇವಾ ಸಾರ್ವಜನಿಕ ಸಂಪರ್ಕ (ISPR) ಹೇಳಿಕೆಯಲ್ಲಿ ತಿಳಿಸಿದೆ.
ಭದ್ರತಾ ಪಡೆಗಳು ನಡೆಸಿದ ಗುಂಡಿನ ಚಕಮಕಿಯಲ್ಲಿ 54 ಉಗ್ರರನ್ನು ಹೊಡೆದುರುಳಿಸಲಾಗಿದೆ. ಅಪಾರ ಪ್ರಮಾಣದ ಶಸಾಸ್ತ್ರಗಳು, ಮದ್ದುಗುಂಡುಗಳನ್ನು ವಶಕ್ಕೆ ಪಡೆದಿರುವುದಾಗಿ ಹೇಳಿಕೊಂಡಿದೆ. ಅಫ್ಘಾನಿಸ್ತಾನದಿಂದ ಉಗ್ರರ ಒಳನುಸುಳುವಿಕೆ ಯತ್ನವನ್ನು ವಿಫಲಗೊಳಿಸಿದ ಭದ್ರತಾ ಪಡೆಗಳನ್ನು ಪ್ರಧಾನಿ ಶೆಹಬಾಜ್ ಷರೀಫ್ ಶ್ಲಾಘಿಸಿದ್ದಾರೆ.
ಭಯೋತ್ಪಾದನೆ ವಿರುದ್ಧದ ಯುದ್ಧದಲ್ಲಿ ಇಡೀ ರಾಷ್ಟ್ರವು ಭದ್ರತಾ ಪಡೆಗಳೊಂದಿಗೆ ನಿಂತಿದೆ ಮತ್ತು ಪಾಕಿಸ್ತಾನದ ಭದ್ರತಾ ಪಡೆಗಳು ದೇಶದ ಗಡಿಗಳನ್ನು ರಕ್ಷಿಸಲು ಮತ್ತು ಭಯೋತ್ಪಾದನೆಯ ಪಿಡುಗು ನಿರ್ಮೂಲನೆಗೆ ಬದ್ಧವಾಗಿವೆ. ಈ ಯಶಸ್ವಿ ಕಾರ್ಯಾಚರಣೆ ಪಾಕಿಸ್ತಾನ ಭಯೋತ್ಪಾದನೆಯ ವಿರುದ್ಧದ ಯುದ್ಧದಲ್ಲಿ ಗೆಲುವನ್ನು ತೋರಿಸುತ್ತದೆ ಎಂದು ಪ್ರಧಾನಿ ಹೇಳಿದ್ದಾರೆ.
ಇತ್ತೀಚಿಗೆ ಜಮ್ಮು-ಕಾಶ್ಮೀರದಲ್ಲಿ ಪಹಲ್ಗಾಮ್ ನಲ್ಲಿ 26 ಭಾರತೀಯ ಪ್ರವಾಸಿಗರನ್ನು ಉಗ್ರರು ಹತ್ಯೆಗೈದ ಘಟನೆಗೆ ಜಗತ್ತಿನಾದ್ಯಂತ ಖಂಡನೆ ವ್ಯಕ್ತವಾಗಿದ್ದು, ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ನಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ನಡುವೆ 54 ಉಗ್ರರನ್ನು ಹತ್ಯೆ ಮಾಡಿರುವುದಾಗಿ ಹೇಳುವ ಪಾಕಿಸ್ತಾನದ ಹೇಳಿಕೆ ಜಗತ್ತಿನ ಮುಂದೆ ತಾನು ಉಗ್ರರ ವಿರೋಧಿ ಎಂಬುದನ್ನು ತೋರಿಸಿಕೊಳ್ಳುವ ಮತ್ತೊಂದು ನಾಟಕನಾ? ಎಂಬ ಅನುಮಾನಕ್ಕೆ ಕಾರಣವಾಗಿದೆ.
ಉಗ್ರರನ್ನು ಪೋಷಿಸುತ್ತಿರುವ ಪಾಕಿಸ್ತಾನವನ್ನು ವಿಶ್ವದ ಯಾವುದೇ ರಾಷ್ಟ್ರಗಳು ಬೆಂಬಲಿಸಬಾರದು ಎಂಬ ಒತ್ತಡಗಳು ಹೆಚ್ಚುತ್ತಿರುವಂತೆಯೇ ತಾನು ಉಗ್ರವಾದದ ವಿರೋಧಿ ಎಂದು ತೋರಿಸಿಕೊಂಡು ಸಹಾನುಭೂತಿ ಪಡೆಯುವ ತಂತ್ರವೇ ಎಂಬ ಚರ್ಚೆಯೂ ನಡೆಯುತ್ತಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ