
ಒಟ್ಟಾವಾ: ಕೆನಡಾದಲ್ಲಿರುವ ಹಾಸ್ಯನಟ ಕಪಿಲ್ ಶರ್ಮಾ ಅವರ ಕೆಫೆ ಮೇಲೆ ಮತ್ತೆ ದಾಳಿಯಾಗಿದೆ. ಕೆನಡಾದ ಬ್ರಿಟಿಷ್ ಕೊಲಂಬಿಯಾದ ಸರ್ರೆಯಲ್ಲಿರುವ ಈ ಕೆಫೆ ಮೇಲೆ ಒಂದು ತಿಂಗಳ ಅವಧಿಯಲ್ಲಿ ಎರಡನೇ ಬಾರಿಗೆ ದಾಳಿಯಾಗಿದೆ.
ಕೆಫೆಯ ಮೇಲೆ ಕನಿಷ್ಠ 25 ಗುಂಡುಗಳ ದಾಳಿ ನಡೆದಿರುವುದನ್ನು ಸಿಸಿಟಿವಿ ದೃಶ್ಯಾವಳಿಗಳು ತೋರಿಸುತ್ತವೆ. ಗುರುಪ್ರೀತ್ ಸಿಂಗ್ ಅಲಿಯಾಸ್ ಗೋಲ್ಡಿ ಧಿಲ್ಲೋನ್ ಮತ್ತು ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಈ ದಾಳಿಯ ಹೊಣೆ ಹೊತ್ತಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಫೋಸ್ಟ್ ಮಾಡಿರುವುದಾಗಿ ವರದಿಗಳು ಹೇಳಿವೆ.
ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿದಾಗ ಕೆಫೆ ಆವರಣದಲ್ಲಿ ಒಡೆದ ಕಿಟಕಿಗಳು ಮತ್ತು ಆರು ಬುಲೆಟ್ ನಿಂದಾದ ರಂದ್ರಗಳು ಕಂಡುಬಂದಿವೆ.
ಈ ದಾಳಿ ಸ್ಥಳೀಯ ಭಾರತೀಯ ಸಮುದಾಯದಲ್ಲಿ ಆತಂಕ ಮೂಡಿಸಿದೆ. ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ, ಆದರೆ ಇದುವರೆಗೆ ಯಾರನ್ನೂ ಬಂಧಿಸಲಾಗಿಲ್ಲ. ಕಳೆದ ತಿಂಗಳು ನಡೆದ ದಾಳಿಯನ್ನು ಖಲಿಸ್ತಾನಿ ಭಯೋತ್ಪಾದಕ ಹರ್ಜೀತ್ ಸಿಂಗ್ ಲಡ್ಡಿ ಹೊತ್ತುಕೊಂಡಿದ್ದ. ಆಗ ಕೆಫೆ ಮೇಲೆ ಕನಿಷ್ಠ ಒಂಬತ್ತು ಗುಂಡುಗಳನ್ನು ಹಾರಿಸಲಾಗಿತ್ತು.
ಘಟನೆಯಲ್ಲಿ ಯಾರಿಗೂ ಗಾಯಗಳಾಗಿರಲಿಲ್ಲ. ಈ ಬಾರಿಯೂ ಯಾರಿಗೂ ಗಾಯಗಳಾದ ಬಗ್ಗೆ ಯಾವುದೇ ವರದಿಯಾಗಿಲ್ಲ.
Advertisement