
ಕೊಲಂಬೊ: ಸಾರ್ವಜನಿಕರ ಹಣ ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಬಂಧನಕೊಳ್ಳಗಾಗಿದ್ದ ಶ್ರೀಲಂಕಾ ಮಾಜಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರಿಗೆ ನ್ಯಾಯಾಲಯ ಮಂಗಳವಾರ ಜಾಮೀನು ಮಂಜೂರು ಮಾಡಿದೆ.
ಕೊಲಂಬೊ ರಾಷ್ಟ್ರೀಯ ಆಸ್ಪತ್ರೆಯ ತೀವ್ರ ನಿಗಾ ಘಟಕದಿಂದ, ನ್ಯಾಯಾಲಯದ ಆವರಣದ ಹೊರಗೆ ಬಿಗಿ ಭದ್ರತೆ ಮತ್ತು ಪ್ರತಿಭಟನೆಗಳ ನಡುವೆ ವಿಕ್ರಮಸಿಂಘೆ ಅವರು ವರ್ಚುವಲ್ ಮೂಲಕ ಕೋರ್ಟ್ ವಿಚಾರಣೆಗೆ ಹಾಜರಾದರು.
ವಿಕ್ರಮಸಿಂಘೆ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಕೊಲಂಬೊ ಫೋರ್ಟ್ ಮ್ಯಾಜಿಸ್ಟ್ರೇಟ್ ನಿಲುಪುಲಿ ಲಂಕಾಪುರ ಅವರು, ಮಾಜಿ ಅಧ್ಯಕ್ಷರಿಗೆ ಜಾಮೀನು ಮಂಜೂರು ಮಾಡಿ ಆದೇಶಿಸಿದ್ದಾರೆ.
ವಿಕ್ರಮಸಿಂಘೆ ಅವರನ್ನು ಕಳೆದ ಶುಕ್ರವಾರ ಪೊಲೀಸರ ಅಪರಾಧ ತನಿಖಾ ಇಲಾಖೆ(ಸಿಐಡಿ) ಬಂಧಿಸಿತ್ತು.
ಆರಂಭದಲ್ಲಿ ಜೈಲು ಆಸ್ಪತ್ರೆಗೆ ದಾಖಲಾಗಿದ್ದ ವಿಕ್ರಮಸಿಂಘೆ ಅವರನ್ನು ನಿರ್ಜಲೀಕರಣದಿಂದಾಗಿ ಅವರ ಆರೋಗ್ಯ ತೀವ್ರ ಹದಗೆಟ್ಟ ನಂತರ ರಾಷ್ಟ್ರೀಯ ಆಸ್ಪತ್ರೆಯ ಐಸಿಯುಗೆ ವರ್ಗಾಯಿಸಲಾಯಿತು.
ವಿಕ್ರಮಸಿಂಘೆ ಅವರು ಸರ್ಕಾರದ 16 ಲಕ್ಷ ರೂಪಾಯಿಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
76 ವರ್ಷದ ವಿಕ್ರಮಸಿಂಘೆ ಅವರು ದೇಶದ ಮುಖ್ಯಸ್ಥರಾಗಿದ್ದಾಗ ಬ್ರಿಟಿಷ್ ವಿಶ್ವವಿದ್ಯಾಲಯದಲ್ಲಿ ತಮ್ಮ ಪತ್ನಿ ಪ್ರೊಫೆಸರ್ ಮೈತ್ರೀ ಅವರ ಘಟಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಲು ಸೆಪ್ಟೆಂಬರ್ 2023 ರಲ್ಲಿ ಲಂಡನ್‌ಗೆ ಭೇಟಿ ನೀಡಲು ಸರ್ಕಾರದ ಹಣ ಬಳಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
Advertisement