
ಬ್ಯಾಂಕಾಕ್: ಕಾಂಬೋಡಿಯಾದೊಂದಿಗಿನ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಥೈಲ್ಯಾಂಡ್ ಸಾಂವಿಧಾನಿಕ ನ್ಯಾಯಾಲಯ ಶುಕ್ರವಾರ ಥಾಯ್ಲೆಂಡ್ ಪ್ರಧಾನಿ ಪೆಟೊಂತಾರ್ನ್ ಶಿನವಾತ್ರ ಮತ್ತು ಅವರ ಸಂಪುಟವನ್ನು ವಜಾಗೊಳಿಸಿದೆ.
ಜೂನ್‌ನಲ್ಲಿ ಕಾಂಬೋಡಿಯಾ ಮಾಜಿ ಪ್ರಧಾನಿ ಹನ್ ಸೇನ್ ಅವರೊಂದಿಗೆ ದೂರವಾಣಿ ಮೂಲಕ ನಡೆಸಿದ ಮಾತುಕತೆಯ ಆಡಿಯೋ ಸೋರಿಕೆಯಾದ ನಂತರ ಬಿಲಿಯನೇರ್ ಮಾಜಿ ಪ್ರಧಾನಿ ಥಾಕ್ಸಿನ್ ಶಿನವಾತ್ರ ಅವರ ಪುತ್ರಿ ಪೆಟೊಂತಾರ್ನ್ ಅವರನ್ನು ಕಳೆದ ತಿಂಗಳು ಅಧಿಕಾರದಿಂದ ಅಮಾನತುಗೊಳಿಸಲಾಗಿತ್ತು.
ಇದೀಗ ಒಂಬತ್ತು ನ್ಯಾಯಾಧೀಶರ ಸಮಿತಿಯು, ಪೆಟೊಂತಾರ್ನ್ ಅವರು ಪ್ರಧಾನಿಗೆ ಅಗತ್ಯವಿರುವ ನೈತಿಕ ಮಾನದಂಡಗಳನ್ನು ಎತ್ತಿಹಿಡಿದಿಲ್ಲ ಎಂದು ತೀರ್ಪು ನೀಡುವ ಮೂಲಕ ಅವರನ್ನು ಪ್ರಧಾನಿ ಹುದ್ದೆಯಿಂದ ವಜಾಗೊಳಿಸಿದೆ.
“ಕಾಂಬೋಡಿಯಾದೊಂದಿಗಿನ ಗಡಿ ಬಿಕ್ಕಟ್ಟಿನ ವೇಳೆ ಪೆಟೊಂತಾರ್ನ್ ಶಿನವತ್ರ ಪ್ರಧಾನಿ ಸ್ಥಾನದ ನೈತಿಕತೆಯನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಕನ್ಸರ್ವೇಟಿವ್ ಸೆನೆಟರ್ ಗಳ ಗುಂಪೊಂದು ದಾಖಲಿಸಿದ್ದ ದೂರಿನ ವಿಚಾರಣೆ ನಡೆಸಿದ ಸಾಂವಿಧಾನಿಕ ನ್ಯಾಯಾಲಯ, ಪ್ರಧಾನಿ ಹುದ್ದೆಯಿಂದ ಅವರನ್ನು ವಜಾಗೊಳಿಸಿ ಆದೇಶಿಸಿದೆ.
ಥೈಲ್ಯಾಂಡ್ ಅನ್ನು ರಾಜಕೀಯ ಬಿಕ್ಕಟ್ಟಿನ ಅಂಚಿಗೆ ತಳ್ಳಿದ್ದು, ಅವರ ಕ್ರಮಗಳು ನಂಬಿಕೆಯನ್ನು ಕಳೆದುಕೊಳ್ಳಲು ಕಾರಣವಾಗಿವೆ. ರಾಷ್ಟ್ರೀಯ ಹಿತಾಸಕ್ತಿಗಿಂತ ವೈಯಕ್ತಿಕ ಹಿತಾಸಕ್ತಿಗೆ ಆದ್ಯತೆ ನೀಡಿವೆ. ಇದು ಅವರು ಕಾಂಬೋಡಿಯಾದ ಪರವಾಗಿದ್ದಾರೆ ಎಂಬ ಸಾರ್ವಜನಿಕ ಅನುಮಾನವನ್ನು ಮತ್ತಷ್ಟು ಹೆಚ್ಚಿಸಿತು ಮತ್ತು ಥಾಯ್ ನಾಗರಿಕರಲ್ಲಿ ಪ್ರಧಾನಿಯಾಗಿ ಅವರ ಮೇಲಿನ ವಿಶ್ವಾಸವನ್ನು ಕಡಿಮೆ ಮಾಡಿದೆ" ಎಂದು ನ್ಯಾಯಾಧೀಶರಲ್ಲಿ ಒಬ್ಬರು ತೀರ್ಪು ಓದಿದರು.
"ಪ್ರತಿವಾದಿಯು ನೈತಿಕ ನೀತಿ ಸಂಹಿತೆಯನ್ನು ಎತ್ತಿಹಿಡಿದಿಲ್ಲ. ಜುಲೈ 1 ರಂದು ಅಮಾನತುಗೊಳಿಸುವುದರೊಂದಿಗೆ ಅವರ ಪ್ರಧಾನ ಮಂತ್ರಿ ಅವಧಿಯು ಪರಿಣಾಮಕಾರಿಯಾಗಿ ಕೊನೆಗೊಂಡಿತು" ಎಂದು ಹೇಳಿದ್ದಾರೆ.
'ವಿವಾದಾತ್ಮಕ ಕರೆ'
ಈ ಪ್ರಕರಣವು ಕಾಂಬೋಡಿಯಾದ ದೀರ್ಘಕಾಲದ ಆಡಳಿತಗಾರ ಮತ್ತು ಅದರ ಪ್ರಸ್ತುತ ಪ್ರಧಾನಿಯ ತಂದೆ ಹುನ್ ಸೇನ್ ಅವರೊಂದಿಗಿನ ಅವರ ಭೇಟಿಯ ಮೇಲೆ ಕೇಂದ್ರೀಕೃತವಾಗಿತ್ತು.
ಥಾಯ್ಲೆಂಡ್ ಹಾಗೂ ಕಾಂಬೋಡಿಯಾ ನಡುವಿನ ದೀರ್ಘಕಾಲದ ಗಡಿ ವಿವಾದವು ಕಳೆದ ಮೇ ತಿಂಗಳಲ್ಲಿ ಅಂತರ್ ಗಡಿ ಸಂಘರ್ಷಕ್ಕೆ ತಿರುಗಿತ್ತು. ಈ ವೇಳೆ ಕಾಂಬೋಡಿಯಾದ ಓರ್ವ ಯೋಧ ಮೃತಪಟ್ಟಿದ್ದರು.
ಈ ಕುರಿತು ಚರ್ಚಿಸಲು ಕಾಂಬೋಡಿಯಾದ ರಾಜನೀತಿಜ್ಞ ಹುನ್ ಸೇನ್ ಗೆ ಕರೆ ಮಾಡಿದ್ದ ಪೆಟೊಂತಾರ್ನ್ ಶಿನವತ್ರ, ಅವರನ್ನು ‘ಅಂಕಲ್’ ಎಂದು ಸಂಬೋಧಿಸಿ, ಓರ್ವ ಸೇನಾ ಕಮಾಂಡರ್ ರನ್ನು ತಮ್ಮ ಶತ್ರು ಎಂದು ಹೇಳಿರುವುದು ಸೋರಿಕೆಯಾಗಿರುವ ದೂರವಾಣಿ ಕರೆಯಿಂದ ಬಯಲಾಗಿತ್ತು. ಇದು ಪೆಟೊಂತಾರ್ನ್ ತಿರುಗುಬಾಣವಾಗಿದೆ.
Advertisement