

ಕರಾಚಿ: ಪಾಕಿಸ್ತಾನದ ಪ್ರಕ್ಷುಬ್ಧ ಬಲೂಚಿಸ್ತಾನ್ ಪ್ರಾಂತ್ಯದಲ್ಲಿರುವ ಅರೆಸೇನಾ ಪಡೆಯ ಪ್ರಧಾನ ಕಚೇರಿಯ ಪ್ರವೇಶದ್ವಾರದಲ್ಲಿ ನಿಷೇಧಿತ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ(ಬಿಎಲ್‌ಎ)ಯ ಮಹಿಳಾ ಆತ್ಮಹುತಿ ಬಾಂಬರ್ ಒಬ್ಬಳು ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದು, ಬಳಿಕ ಸುದೀರ್ಘ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ಆರು ಉಗ್ರರನ್ನು ಹೊಡೆದುರುಳಿಸಲಾಗಿದೆ ಎಂದು ಭದ್ರತಾ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಭಾನುವಾರ ರಾತ್ರಿ ಚಾಗೈ ಜಿಲ್ಲೆಯ ನೊಕುಂಡಿ ಪಟ್ಟಣದಲ್ಲಿರುವ ಫ್ರಾಂಟಿಯರ್ ಕಾರ್ಪ್ಸ್(ಎಫ್‌ಸಿ) ಪ್ರಧಾನ ಕಚೇರಿಯ ಮುಖ್ಯ ದ್ವಾರದಲ್ಲಿ ದಾಳಿಕೋರ ಮಹಿಳೆ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಂತರ ಬಾಂಬರ್ ಮಹಿಳೆಯನ್ನು ಜಿನಾಟಾ ರಫೀಕ್ ಎಂದು ಗುರುತಿಸಿ ಅವರ ಫೋಟೋವನ್ನು ಬಿಡುಗಡೆ ಮಾಡಿದೆ.
ಸ್ಫೋಟದ ನಂತರ, ಆರು ಉಗ್ರರು ಪ್ರಧಾನ ಕಚೇರಿಗೆ ನುಗ್ಗಲು ಯತ್ನಿಸಿದರು. ತಕ್ಷಣ ಎಚ್ಚೆತ್ತ ಭದ್ರತಾ ಪಡೆಗಳು ಪ್ರವೇಶದ್ವಾರದ ಬಳಿಯೇ ಮೂವರನ್ನು ಗುಂಡಿಕ್ಕಿ ಹತ್ಯೆ ಮಾಡಿದರು. ಉಳಿದ ಮೂವರು ಎಫ್‌ಸಿ ಸಿಬ್ಬಂದಿ ಸುತ್ತುವರಿಯುವ ಮೊದಲು ಆವರಣ ಪ್ರವೇಶಿಸುವಲ್ಲಿ ಯಶಸ್ವಿಯಾದರು. ನಂತರ ಆ ಮೂವರನ್ನು ಹತ್ಯೆ ಮಾಡಲಾಗಿದೆಎಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.
ಸೋಮವಾರ ಸಂಜೆಯವರೆಗೆ ಪ್ರಧಾನ ಕಚೇರಿಯ ಒಳಗಿನಿಂದ ಗುಂಡಿನ ಸದ್ದು ಮತ್ತು ಸ್ಫೋಟಗಳು ಕೇಳಿಬಂದವು ಎಂದು ನಿವಾಸಿಗಳು ಹೇಳಿದ್ದಾರೆ.
ಬಲೂಚಿಸ್ತಾನದಲ್ಲಿ ಅತ್ಯಂತ ಸಕ್ರಿಯ ಮತ್ತು ಸುಸಜ್ಜಿತ ದಂಗೆಕೋರ ಗುಂಪು ಎಂದು ಪರಿಗಣಿಸಲಾದ ಬಿಎಲ್‌ಎ, ಮಹಿಳಾ ಆತ್ಮಹುತಿ ದಾಳಿಕೋರಳನ್ನು ಬಳಸಿಕೊಂಡು ಮೂರನೇ ಬಾರಿ ದಾಳಿ ಮಾಡಿದೆ.
ಏಪ್ರಿಲ್ 2022 ರಲ್ಲಿ, ಎರಡು ಮಕ್ಕಳ ತಾಯಿಯಾದ ಶಾರಿ ಬಲೂಚ್, ಕರಾಚಿ ವಿಶ್ವವಿದ್ಯಾಲಯದ ಕನ್ಫ್ಯೂಷಿಯಸ್ ಇನ್‌ಸ್ಟಿಟ್ಯೂಟ್‌ನಲ್ಲಿ ಚೀನೀ ಶಿಕ್ಷಕರನ್ನು ಗುರಿಯಾಗಿಸಿಕೊಂಡು ಆತ್ಮಹುತಿ ಬಾಂಬ್ ದಾಳಿ ನಡೆಸಿದ್ದು, ಮೂವರು ಚೀನೀ ಪ್ರಜೆಗಳು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದರು.
ಜೂನ್ 2023 ರಲ್ಲಿ, ಮತ್ತೊಬ್ಬ ಮಹಿಳಾ ಬಾಂಬರ್, ಸುಮೈಯಾ ಖಲಂದ್ರಾನಿ ಬಲೂಚ್, ಬಲೂಚಿಸ್ತಾನದ ಟರ್ಬತ್ ಪ್ರದೇಶದಲ್ಲಿ ಪಾಕಿಸ್ತಾನಿ ಮಿಲಿಟರಿ ಬೆಂಗಾವಲು ಪಡೆಯನ್ನು ಗುರಿಯಾಗಿಸಿಕೊಂಡು ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದರು.
Advertisement