

ಇಸ್ಲಾಮಾಬಾದ್: ಭಾರತದ 'ಆಪರೇಷನ್ ಸಿಂಧೂರ' ಕಾರ್ಯಾಚರಣೆ ವಿರುದ್ಧ ಸೇಡು ತೀರಿಸಿಕೊಳ್ಳಲು ಕಾಯುತ್ತಿರುವ ಪಾಕಿಸ್ತಾನದ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರನ್ನು ದೇಶದ ಮೊದಲ ರಕ್ಷಣಾ ಪಡೆಗಳ ಮುಖ್ಯಸ್ಥ (CDF) ಆಗಿ ಶೆಹಭಾಜ್ ಷರೀಫ್ ಸರ್ಕಾರ ನೇಮಕ ಮಾಡಿದೆ. ಇದು ಪರಮಾಣು ಶಸ್ತ್ರಸಜ್ಜಿತ ದೇಶದಲ್ಲಿ ಹೊಸದಾಗಿ ರಚಿಸಲಾದ ಮತ್ತು ಶಕ್ತಿಯುತ ಮಿಲಿಟರಿ ಸ್ಥಾನವಾಗಿದ್ದು, ಐದು ವರ್ಷಗಳ ಅಧಿಕಾರವಧಿ ಹೊಂದಿದೆ.
"5 ವರ್ಷಗಳ ಕಾಲ CDF ಆಗಿ ಏಕಕಾಲದಲ್ಲಿ COAS ಆಗಿ ಫೀಲ್ಡ್ ಮಾರ್ಷಲ್ ಸೈಯದ್ ಅಸಿಮ್ ಮುನೀರ್ ಅವರನ್ನು ನೇಮಕ ಮಾಡಲು ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅನುಮೋದನೆ ನೀಡಿದ್ದಾರೆ" ಎಂದು ಪಾಕಿಸ್ತಾನದ ಅಧ್ಯಕ್ಷರ ಅಧಿಕೃತ X ಹ್ಯಾಂಡಲ್ ಪೋಸ್ಟ್‌ನಲ್ಲಿ ತಿಳಿಸಿದೆ.
'ನ್ಯೂಕ್ಲಿಯರ್ ಬಟನ್' ಈಗ ಅಸಿಮ್ ಮುನೀರ್ ಕೈಯಲ್ಲಿ: CDF ಹುದ್ದೆಯು ಕೇವಲ ಮೂರು ಪಡೆಗಳ ಮುಖ್ಯಸ್ಥರ ಅಧಿಕಾರವನ್ನು ಕ್ರೋಢೀಕರಿಸುವುದಲ್ಲದೆ, ದೇಶದ ಪರಮಾಣು ಶಸ್ತ್ರಾಸ್ತ್ರಗಳು ಮತ್ತು ಕ್ಷಿಪಣಿ ವ್ಯವಸ್ಥೆಗಳನ್ನು ನಿರ್ವಹಿಸುವ ರಾಷ್ಟ್ರೀಯ ಕಾರ್ಯತಂತ್ರದ ಕಮಾಂಡ್‌ನ (National Strategic Command)ಮೇಲ್ವಿಚಾರಣೆಯನ್ನು ಸಹ ಅವರಿಗೆ ನೀಡುತ್ತದೆ. ಇದು ಮುನೀರ್ ಅವರನ್ನು ದೇಶದ ಏಕೈಕ ಶಕ್ತಿಶಾಲಿ ಮಿಲಿಟರಿ ವ್ಯಕ್ತಿಯನ್ನಾಗಿ ಮಾಡುತ್ತದೆ. ಈ ಮೂಲಕ ಪಾಕಿಸ್ತಾದ 'ನ್ಯೂಕ್ಲಿಯರ್ ಬಟನ್' ಈಗ ಅಸಿಮ್ ಮುನೀರ್ ಕೈಯಲ್ಲಿದ್ದು, ಭಾರತದ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾಗ್ತಾರಾ? ಎಂಬ ಕುತೂಹಲ ಉಂಟಾಗಿದೆ.
CDF ಹುದ್ದೆಯು ಮುನೀರ್ ಅವರಿಗೆ ಪಾಕಿಸ್ತಾನದ ಅಧ್ಯಕ್ಷರಿಗೆ ಸಮಾನವಾದ ಕಾನೂನು ರಕ್ಷಣೆಯನ್ನು ನೀಡುತ್ತದೆ. ಅಧ್ಯಕ್ಷರಂತೆ ಫೀಲ್ಡ್ ಮಾರ್ಷಲ್‌ಗೆ ಯಾವುದೇ ಕಾನೂನು ಮೊಕದ್ದಮೆಯಿಂದ ಜೀವಮಾನದ ವಿನಾಯಿತಿ ನೀಡಲಾಗುತ್ತದೆ. ವಾಯುಪಡೆ ಮತ್ತು ನೌಕಾಪಡೆಯ ಮುಖ್ಯಸ್ಥರಿಗೂ ರಕ್ಷಣೆಯನ್ನು ವಿಸ್ತರಿಸಲಾಗಿದೆ. ಕೊನೆಯ ವೇಳೆ ಮತ್ತೆ ನೇಮಕಗೊಳ್ಳಲು ಬಯಸುವುದಾಗಿ ಪ್ರಧಾನಿ ಮತ್ತು ಅಧ್ಯಕ್ಷರಿಗೆ ಹೇಳಿದರೆ, ಅದನ್ನು ನಿರಾಕರಿಸುವ ಸಾಧ್ಯತೆ ಇರುವುದಿಲ್ಲ.
CDF ಹುದ್ದೆಯು ಸೇನೆಯ ಮೇಲಿನ ಸರ್ಕಾರದ ನಿಯಂತ್ರಣವನ್ನು ಕಡಿಮೆ ಮಾಡುತ್ತದೆ. ಅಲ್ಲದೇ ಸೇನಾ ಸಿಬ್ಬಂದಿಯ ಉಪ ಮುಖ್ಯಸ್ಥ (VCOAS) ಸ್ಥಾನಕ್ಕೆ ನೇಮಕಾತಿಗೆ ಶಿಫಾರಸು ಮಾಡುವ ಅಧಿಕಾರವನ್ನು ಹೊಂದಿದೆ. ನಂತರ ಅದನ್ನು ಫೆಡರಲ್ ಸರ್ಕಾರ ಅಧಿಕೃತಗೊಳಿಸುತ್ತದೆ. ಈ ಹಿಂದೆ ಇವರನ್ನು ನೇಮಕ ಮಾಡುವ ಅಧಿಕಾರ ಸರ್ಕಾರಕ್ಕಿತ್ತು.
ಈ ಹಿಂದೆ ಪಾಕ್ ಮಿಲಿಟರಿ ಹೇಗಿತ್ತು? 240 ಮಿಲಿಯನ್ ಜನರ ಪರಮಾಣು ಶಕ್ತಿಯಾಗಿರುವ ಪಾಕಿಸ್ತಾನವು 1947 ರಲ್ಲಿ ರಚನೆಯಾದಾಗಿನಿಂದ ನಾಗರಿಕ ಮತ್ತು ಮಿಲಿಟರಿ ಆಡಳಿತದ ನಡುವೆ ಹದಗೆಡುತ್ತಾಲೇ ಬಂದಿದೆ. ದೇಶವನ್ನು ಬಹಿರಂಗವಾಗಿ ಆಳಿದ ಕೊನೆಯ ಮಿಲಿಟರಿ ನಾಯಕ ಪರ್ವೇಜ್ ಮುಷರಫ್, 1999 ರಲ್ಲಿ ದಂಗೆ ಏಳುವ ಮೂಲಕ ಅಧಿಕಾರವನ್ನು ವಶಪಡಿಸಿಕೊಂಡಿದ್ದರು. 2008 ರವರೆಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಅಂದಿನಿಂದ, ನಾಗರಿಕ ಆಡಳಿತಗಳು ಅಧಿಕೃತವಾಗಿ ಅಧಿಕಾರವನ್ನು ಹೊಂದಿವೆ. ಆದಾಗ್ಯೂ, ಪಾಕಿಸ್ತಾನದ ರಾಜಕೀಯ ಮತ್ತು ಆರ್ಥಿಕ ಕ್ಷೇತ್ರಗಳ ಮೇಲೆ ಮಿಲಿಟರಿಯ ಪ್ರಭಾವವು ಆಳವಾಗಿ ಬೇರೂರಿದೆ. ಇದನ್ನು ಎರಡು ಕಡೆ ಅಧಿಕಾರ ಹಂಚಿಕೊಂಡ "ಹೈಬ್ರಿಡ್ ನಿಯಮ" ಎಂದು ರಾಜಕೀಯ ವಿಶ್ಲೇಷಕರು ಕರೆಯುತ್ತಾರೆ.
ಪ್ರಧಾನಿ ಶೆಹಬಾಜ್ ಷರೀಫ್ ಅವರು ಅಸಿಮ್ ಮುನೀರ್ ಗೆ ಹೆಚ್ಚಿನ ಅಧಿಕಾರ ನೀಡಲು ಸಜ್ಜಾಗಿದ್ದಾರೆ ಎಂದು ಸಾಕಷ್ಟು ವದಂತಿಗಳು ಹರಿದಾಡುತ್ತಿದ್ದವು. ಈ ನಡುವೆ ಇದೀಗ ಹೊಸ ನೇಮಕಾತಿ ನಡೆದಿದೆ. ಷರೀಫ್ ಸರ್ಕಾರ ನವೆಂಬರ್ 29 ರಂದು ದೇಶದ ಮೊದಲ ರಕ್ಷಣಾ ಪಡೆಗಳ ಮುಖ್ಯಸ್ಥರ ನೇಮಕಾತಿಯನ್ನು ಘೋಷಿಸಬೇಕಿತ್ತು. ಅಂದೇ ಮುನೀರ್ ಅವರ ಮೂರು ವರ್ಷಗಳ ಸೇನಾ ಮುಖ್ಯಸ್ಥರ ಅವಧಿ ಕೊನೆಗೊಳುತಿತ್ತು. ಸೇನಾ ಕಮಾಂಡ್ ಅನ್ನು ಕೇಂದ್ರೀಕರಿಸುವ ಗುರಿ ಹೊಂದಿರುವ ಸಂವಿಧಾನದ 27 ನೇ ತಿದ್ದುಪಡಿಯಡಿ ರಕ್ಷಣಾ ಪಡೆಗಳ ಮುಖ್ಯಸ್ಥರ ಹುದ್ದೆಯನ್ನು ಕಳೆದ ತಿಂಗಳಷ್ಟೇ ಘೋಷಿಸಲಾಗಿತ್ತು.
ಈ ವರ್ಷ ಫೀಲ್ಡ್ ಮಾರ್ಷಲ್ ಹುದ್ದೆಗೆ ಬಡ್ತಿ ಪಡೆದ ಅಸಿಮ್ ಮುನೀರ್, CDF ಕರ್ತವ್ಯಗಳ ಜೊತೆಗೆ ಸೇನಾ ಮುಖ್ಯಸ್ಥರ ಹುದ್ದೆಯನ್ನು ಸಹ ಏಕಕಾಲದಲ್ಲಿ ನಿರ್ವಹಿಸಲಿದ್ದಾರೆ. ಇದು ಅವರನ್ನು ಪಾಕಿಸ್ತಾನದ ಅತ್ಯಂತ ಶಕ್ತಿಶಾಲಿ ವ್ಯಕ್ತಿಗಳಲ್ಲಿ ಒಬ್ಬರನ್ನಾಗಿ ಮಾಡುತ್ತದೆ. ಪಾಕಿಸ್ತಾನದ ಇತಿಹಾಸದಲ್ಲಿ ಫೀಲ್ಡ್ ಮಾರ್ಷಲ್ , CAS ಜೊತೆಗೆ CDF ಅಧಿಕಾರ ಹೊಂದಿರುವ ಮೊದಲ ಮಿಲಿಟರಿ ಅಧಿಕಾರಿ ಇವರಾಗಿದ್ದಾರೆ. 1965 ರ ಭಾರತದೊಂದಿಗಿನ ಯುದ್ಧದ ಸಮಯದಲ್ಲಿ ಪಾಕಿಸ್ತಾನವನ್ನು ಮುನ್ನಡೆಸಿದ್ದ ಜನರಲ್ ಅಯೂಬ್ ಖಾನ್ ನಂತರ ದೇಶದ ಇತಿಹಾಸದಲ್ಲಿ ಫೀಲ್ಡ್ ಮಾರ್ಷಲ್ ಬಿರುದನ್ನು ಪಡೆದ ಎರಡನೇ ಸೇನಾ ಅಧಿಕಾರಿ ಮುನೀರ್ ಆಗಿದ್ದಾರೆ.
Advertisement