

ಇಸ್ಲಾಮಾಬಾದ್: ಮಿಲಿಟರಿ ಬಗ್ಗೆ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ನೀಡಿರುವ ಹೇಳಿಕೆಗಳನ್ನು ಪಾಕಿಸ್ತಾನ ಭಾನುವಾರ ಟೀಕಿಸಿದೆ. ಸಶಸ್ತ್ರ ಪಡೆಗಳು ಸೇರಿದಂತೆ ತನ್ನ ಸಂಸ್ಥೆಗಳು ರಾಷ್ಟ್ರೀಯ ಭದ್ರತೆಯ ಆಧಾರಸ್ತಂಭ ಎಂದು ಹೇಳಿದೆ.
ಶನಿವಾರ ನವದೆಹಲಿಯಲ್ಲಿ ನಡೆದ ಹಿಂದೂಸ್ತಾನ್ ಟೈಮ್ಸ್ ನಾಯಕತ್ವ ಶೃಂಗಸಭೆಯಲ್ಲಿ ಮಾತನಾಡಿದ ಜೈಶಂಕರ್, ಭಾರತದ ಹೆಚ್ಚಿನ ಸಮಸ್ಯೆ ಪಾಕಿಸ್ತಾನದ ಮಿಲಿಟರಿಯಿಂದ ಬರುತ್ತದೆ ಎಂದಿದ್ದರು. ಅಲ್ಲದೇ ಭಯೋತ್ಪಾದಕ ಗುಂಪುಗಳಿಗೆ ಅದರ ಬೆಂಬಲವನ್ನು ಸಹ ಉಲ್ಲೇಖಿಸಿದ್ದರು.
ಒಳ್ಳೆಯ ಭಯೋತ್ಪಾದಕರು ಮತ್ತು ಕೆಟ್ಟ ಭಯೋತ್ಪಾದಕರು ಇರುವಂತೆ, ಒಳ್ಳೆಯ ಮಿಲಿಟರಿ ನಾಯಕರು ಮತ್ತು ಸ್ಪಷ್ಟವಾಗಿ ಒಳ್ಳೆಯವರಲ್ಲದವರು ಇದ್ದಾರೆ ಎಂದು ಅವರು ಹೇಳಿದ್ದರು. ಇದನ್ನು ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರನ್ನು ಉಲ್ಲೇಖಿಸಿ ನೀಡಿರುವ ಹೇಳಿಕೆಯಂತೆ ನೋಡಲಾಗುತ್ತಿದೆ.
ಜೈಶಂಕರ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಪಾಕ್ ವಿದೇಶಾಂಗ ಕಚೇರಿಯ ವಕ್ತಾರ ತಹೀರ್ ಅಂದ್ರಾಬಿ, ಜೈಶಂಕರ್ ಮಾಡಿರುವ ಅತ್ಯಂತ ಪ್ರಚೋದನಕಾರಿ, ಆಧಾರರಹಿತ ಮತ್ತು ಬೇಜವಾಬ್ದಾರಿ ಹೇಳಿಕೆಗಳನ್ನು ಪಾಕಿಸ್ತಾನ ಸ್ಪಷ್ಟವಾಗಿ ತಿರಸ್ಕರಿಸುತ್ತದೆ ಮತ್ತು ಖಂಡಿಸುತ್ತದೆ" ಎಂದು ಹೇಳಿದ್ದಾರೆ.
ಪಾಕಿಸ್ತಾನ ಜವಾಬ್ದಾರಿಯುತ ರಾಷ್ಟ್ರವಾಗಿದ್ದು, ಸಶಸ್ತ್ರ ಪಡೆಗಳು ಸೇರಿದಂತೆ ಅದರ ಎಲ್ಲಾ ಸಂಸ್ಥೆಗಳು ರಾಷ್ಟ್ರೀಯ ಭದ್ರತೆಯ ಆಧಾರಸ್ತಂಭವಾಗಿದೆ ಎಂದು ಅಂದ್ರಾಬಿ ಹೇಳಿದ್ದಾರೆ. ಮೇ ತಿಂಗಳಲ್ಲಿ ನಡೆದ ಸೇನಾ ಸಂಘರ್ಷದ ವೇಳೆಪಾಕಿಸ್ತಾನಿ ಪಡೆಗಳು ತಕ್ಕ ಉತ್ತರ ನೀಡುವ ಮೂಲಕ ದೇಶವನ್ನು ಆಕ್ರಮಣದಿಂದ ರಕ್ಷಿಸಿವೆ. ಜೈಶಂಕರ್ ಹೇಳಿಕೆ ಪ್ರಚಾರದ ಭಾಗವಾಗಿ ಪಾಕಿಸ್ತಾನದ ಸಂಸ್ಥೆಗಳು ಮತ್ತು ಅದರ ನಾಯಕತ್ವವನ್ನು ದೂಷಿಸುವ ಪ್ರಯತ್ನ ಎಂದಿದ್ದಾರೆ.
ಪಹಲ್ಗಾಮ್ ದಾಳಿಯ ಸೇಡು ತೀರಿಸಿಕೊಳ್ಳಲು ಮೇ 7 ರಂದು ನಡೆದ ಆಪರೇಷನ್ ಸಿಂಧೂರ ವೇಳೆ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ದಾಳಿ ನಡೆಸಿದ್ದ ಭಾರತ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿತ್ತು.
Advertisement