

ವಾಷಿಂಗ್ಟನ್: ಹೆಚ್ಚು ಕೌಶಲ್ಯಪೂರ್ಣ ವಿದೇಶಿ ಕಾರ್ಮಿಕರಿಗೆ H-1B ವೀಸಾಗೆ 100,000 ಡಾಲರ್ ಶುಲ್ಕ ವಿಧಿಸುವುದನ್ನು ತಡೆಯುವಂತೆ ಕೋರಿ ಕ್ಯಾಲಿಫೋರ್ನಿಯಾ ಸೇರಿದಂತೆ ಅಮೆರಿಕದ 20 ರಾಜ್ಯಗಳು ಶುಕ್ರವಾರ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಮೊಕದ್ದಮೆ ಹೂಡಿವೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಕ್ಯಾಲಿಫೋರ್ನಿಯಾ ಅಟಾರ್ನಿ ಜನರಲ್ ರಾಬ್ ಬೊಂಟಾ ಅವರು 20 ರಾಜ್ಯಗಳ ಮೊಕದ್ದಮೆಯನ್ನು ಮುನ್ನಡೆಸುತ್ತಿದ್ದು, ಈ ನೀತಿಯನ್ನು ಕಾನೂನುಬಾಹಿರ ಎಂದು ಕರೆದಿದ್ದಾರೆ ಮತ್ತು ಇದು ಕೌಶಲ್ಯಪೂರ್ಣ ವಿದೇಶಿ ಕಾರ್ಮಿಕರನ್ನು ಅವಲಂಬಿಸಿರುವ ವಲಯಗಳಿಗೆ ಅಡ್ಡಿಪಡಿಸಬಹುದು ಎಂದು ಎಚ್ಚರಿಸಿದ್ದಾರೆ.
ಫೆಡರಲ್ ನ್ಯಾಯಾಲಯದಲ್ಲಿ ಶುಕ್ರವಾರ ಸಲ್ಲಿಸಲಾದ ಮೊಕದ್ದಮೆಯಲ್ಲಿ, ಹೋಮ್ಲ್ಯಾಂಡ್ ಸೆಕ್ಯುರಿಟಿ ಇಲಾಖೆ(DHS) ಕಾಂಗ್ರೆಸ್ಸಿನ ಅಧಿಕಾರ ವ್ಯಾಪ್ತಿಯನ್ನು ಮೀರಿ ಶುಲ್ಕವನ್ನು ವಿಧಿಸಿದೆ ಮತ್ತು ಅಗತ್ಯವಿರುವ ಯಾವುದೇ ಸೂಚನೆ ನೀಡದೆ ಸರಿಯಾದ ಕಾನೂನು ಪ್ರಕ್ರಿಯೆಗಳು ಇಲ್ಲದೆ ಎಚ್-1ಬಿ ವೀಸಾಗೆ ಭಾರಿ ಶುಲ್ಕ ವಿಧಿಸಲಾಗಿದೆ ಎಂದು ವಾದಿಸಲಾಗಿದೆ.
ಮೊಕದ್ದಮೆಯಲ್ಲಿ ಕ್ಯಾಲಿಫೋರ್ನಿಯಾದೊಂದಿಗೆ ಅರಿಜೋನಾ, ಕೊಲೊರಾಡೋ, ಕನೆಕ್ಟಿಕಟ್, ಡೆಲವೇರ್, ಹವಾಯಿ, ಇಲಿನಾಯ್ಸ್, ಮೇರಿಲ್ಯಾಂಡ್, ಮ್ಯಾಸಚೂಸೆಟ್ಸ್, ಮಿಚಿಗನ್, ಮಿನ್ನೇಸೋಟ, ನೆವಾಡಾ, ಉತ್ತರ ಕೆರೊಲಿನಾ, ನ್ಯೂಜೆರ್ಸಿ, ನ್ಯೂಯಾರ್ಕ್, ಒರೆಗಾನ್, ರೋಡ್ ಐಲ್ಯಾಂಡ್, ವರ್ಮೊಂಟ್, ವಾಷಿಂಗ್ಟನ್ ಮತ್ತು ವಿಸ್ಕಾನ್ಸಿನ್ ಸೇರಿವೆ.
ಸಾಮಾನ್ಯ H-1B ಶುಲ್ಕಕ್ಕಿಂತ 10 ಪಟ್ಟು ಹೆಚ್ಚು ಶುಲ್ಕವು H-1B ಉದ್ಯೋಗಿಗಳನ್ನು ಅವಲಂಬಿಸಿರುವ ಶಾಲೆಗಳು, ವಿಶ್ವವಿದ್ಯಾಲಯಗಳು ಮತ್ತು ಆಸ್ಪತ್ರೆಗಳ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ ಎಂದು ಬೊಂಟಾ ಅವರ ಕಚೇರಿ ಹೇಳಿದೆ.
H-1B ಕಾರ್ಯಕ್ರಮವು ಉದ್ಯೋಗದಾತರು ಎಂಜಿನಿಯರ್‌ಗಳು, ಸಂಶೋಧಕರು, ವೈದ್ಯರು ಮತ್ತು ಶಿಕ್ಷಕರು ಸೇರಿದಂತೆ ಹೆಚ್ಚು ಕೌಶಲ್ಯಪೂರ್ಣ ವಿದೇಶಿ ಕಾರ್ಮಿಕರನ್ನು ನೇಮಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಆದರೆ ಈ ಹೊಸ ಶುಲ್ಕವು ಆರೋಗ್ಯ, ರಕ್ಷಣೆ, ಶಿಕ್ಷಣ ಸೇರಿದಂತೆ ಅನೇಕ ಸರ್ಕಾರಿ ಮತ್ತು ಸರ್ಕಾರೇತರ ಉದ್ಯೋಗದಾತರ ಮೇಲೆ ಪರಿಣಾಮ ಬೀರುತ್ತದೆ ಎಂದು ವಿಮರ್ಶಕರು ಹೇಳಿದ್ದಾರೆ.
ಟ್ರಂಪ್ ಅವರು ಸೆಪ್ಟೆಂಬರ್ 19 ರಂದು ಹೊಸ H-1B ವೀಸಾಗೆ 100,000 ಡಾಲರ್ ಶುಲ್ಕ ವಿಧಿಸುವ ಕಾರ್ಯನಿರ್ವಾಹಕ ಆದೇಶಕ್ಕೆ ಸಹಿ ಹಾಕಿದ್ದರು.
2024ರಲ್ಲಿ, ಎಲ್ಲಾ H-1B ವೀಸಾ ಫಲಾನುಭವಿಗಳಲ್ಲಿ ಭಾರತೀಯರು ಶೇ. 71 ರಷ್ಟಿದ್ದು, ಚೀನಾ ಶೇ. 11.7ರೊಂದಿಗೆ ಎರಡನೇ ಸ್ಥಾನದಲ್ಲಿದೆ.
Advertisement