

ಚಂಡೀಗಢ: ಕೆನಡಾದ ಆಗ್ನೇಯ ಎಡ್ಮಂಟನ್‌ನಲ್ಲಿ ನಡೆದ ಉದ್ದೇಶಿತ ದಾಳಿಯಲ್ಲಿ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಪಂಜಾಬ್ ಮೂಲದ ಇಬ್ಬರು ಯುವಕರನ್ನು ಹತ್ಯೆ ಮಾಡಿದ್ದಾರೆ. ಮೃತರನ್ನು ಬರೆಹ್ ಗ್ರಾಮದ ಗುರುದೀಪ್ ಸಿಂಗ್ ಮತ್ತು ಪಂಜಾಬ್‌ನ ಮಾನ್ಸಾದ ಬುಧ್ಲಾಡಾ ಬಳಿಯ ಉದ್ದತ್ ಸೈದೇವಾಲಾ ಗ್ರಾಮದ ರಣಬೀರ್ ಸಿಂಗ್ ಎಂದು ಗುರುತಿಸಲಾಗಿದೆ.
ಗುರುದೀಪ್ ಅವರ ಕುಟುಂಬವು ಅವರ ಸ್ನೇಹಿತ ಅರ್ಷ್ ದೀಪ್ ಅವರಿಂದ ಪಡೆದ ಮಾಹಿತಿ ಪ್ರಕಾರ, ಸ್ನೇಹಿತನ ಹುಟ್ಟುಹಬ್ಬ ಆಚರಿಸಲು ಇಬ್ಬರು ಹೋಗುತ್ತಿದ್ದಾಗ ಶುಕ್ರವಾರ ಮುಂಜಾನೆ ಅವರ ಮೇಲೆ ಗುಂಡು ಹಾರಿಸಲಾಗಿದೆ ಎಂದು ಹೇಳಲಾಗಿದೆ.
ಉತ್ತಮ ವೃತ್ತಿ ಹುಡುಕಾಟದಲ್ಲಿ ಇಬ್ಬರೂ ಪ್ರತ್ಯೇಕವಾಗಿ ಕೆನಡಾಕ್ಕೆ ತೆರಳಿದ್ದರು. ಈ ಘಟನೆಯನ್ನು ಉದ್ದೇಶಿತ ದಾಳಿ ಎಂದು ಎಡ್ಮಂಟನ್ ಪೊಲೀಸ್ ಸೇವೆ (EPS) ಶಂಕಿಸಿದ್ದು, ತನಿಖೆಯನ್ನು ಪ್ರಾರಂಭಿಸಿರುವುದಾಗಿ ತಿಳಿಸಿದೆ.
ಆಗ್ನೇಯ ಎಡ್ಮಂಟನ್‌ನಲ್ಲಿ ಇಬ್ಬರು ವಯಸ್ಕ ಪುರುಷರ ಅನುಮಾನಾಸ್ಪದ ಸಾವಿನ ಬಗ್ಗೆ ತನಿಖೆ ನಡೆಸುತ್ತಿದೆ ಎಂದು EPS ಹೇಳಿಕೆಯಲ್ಲಿ ತಿಳಿಸಿದೆ. ತುರ್ತು ವೈದ್ಯಕೀಯ ಸೇವೆ ಬರುವವರೆಗೂ ಅಧಿಕಾರಿಗಳು ಜೀವ ಉಳಿಸಲು ಪ್ರಯತ್ನಿಸಿದರು, ಆದರೆ ಸ್ಥಳದಲ್ಲಿ ಇಬ್ಬರು ಸಂತ್ರಸ್ತರು ಮೃತಪಟ್ಟಿರುವುದಾಗಿ ಘೋಷಿಸಿದೆ.
EPS ಪೊಲೀಸರು ತನಿಖೆ ನಡೆಸುತ್ತಿದ್ದು, ಡಿಸೆಂಬರ್ 16 ಮತ್ತು 17 ರಂದು ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
Advertisement