

ದುಬೈ: ದುಬೈನಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುತ್ತಿದ್ದು, ವಿಶ್ವದ ಅತಿ ಎತ್ತರದ ಕಟ್ಟಡವಾದ ಬುರ್ಜ್ ಖಲೀಫಾದ ತುತ್ತತುದಿಗೆ ಸಿಡಿಲು ಬಡಿದಿದ್ದು, ಆ ಕ್ಷಣದ ಅದ್ಭುತ ವಿಡಿಯೋವನ್ನು ದುಬೈನ ಕ್ರೌನ್ ಪ್ರಿನ್ಸ್ ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಈ ಚಿಕ್ಕ, ಮೋಡಿಮಾಡುವ ಅದ್ಭುತ ದೃಶ್ಯವು ಕತ್ತಲೆಯಾಗಿರುವ, ಮೋಡ ಕವಿದ ಆಕಾಶ, ಮಳೆ ಮತ್ತು ಗುಡುಗಿನ ವಿಶಿಷ್ಟ ಶಬ್ದವನ್ನು ಸೆರೆಹಿಡಿದಿದೆ. ಈ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಫೋಟೋಗ್ರಫಿ ಮತ್ತು ಪ್ರಕೃತಿಯಲ್ಲಿ ಆಸಕ್ತಿ ಹೊಂದಿರುವ ಶೇಖ್ ಹಮ್ದಾನ್, "ದುಬೈ" ಮತ್ತು ಮಳೆಯೊಂದಿಗೆ ಮೋಡ ಹಾಗೂ ಹೈ ವೋಲ್ಟೇಜ್ ಚಿಹ್ನೆಯ ಎಮೋಜಿಯೊಂದಿಗೆ ವಿಡಿಯೋ ಪೋಸ್ಟ್ ಮಾಡಿದ್ದಾರೆ.
ಗಮನಾರ್ಹ ವಿಚಾರ ಎಂದರೆ ಶೇಖ್ ಹಮ್ದಾನ್ ಅವರು ಯುಎಇಯ ಉಪ ಪ್ರಧಾನಿ ಮತ್ತು ರಕ್ಷಣಾ ಸಚಿವರೂ ಆಗಿದ್ದಾರೆ. ಅವರನ್ನು ಫಝಾ ಎಂದು ಜನಪ್ರಿಯವಾಗಿ ಕರೆಯಲಾಗುತ್ತದೆ.
ಯುಎಇಯಲ್ಲಿ ಅಸ್ಥಿರ ಹವಾಮಾನ ಪರಿಸ್ಥಿತಿಯ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದ್ದು, ವಿವಿಧ ಪ್ರದೇಶಗಳಲ್ಲಿ ಭಾರೀ ಮಳೆ, ಗುಡುಗು, ಮಿಂಚು ಮತ್ತು ಆಲಿಕಲ್ಲು ಸಹಿ ಮಳೆಯ ಎಚ್ಚರಿಕೆಯನ್ನು ರಾಷ್ಟ್ರೀಯ ಹವಾಮಾನ ಕೇಂದ್ರ ನೀಡಿದೆ.
Advertisement