

ಬಾಂಗ್ಲಾದೇಶದ 2024ರ ಜುಲೈ ತಿಂಗಳ ದಂಗೆಯ ಪ್ರಮುಖ ನಾಯಕ ಶರೀಫ್ ಉಸ್ಮಾನ್ ಹಾದಿ ಕಳೆದ ವಾರ ಗುಂಡೇಟಿಗೆ ತೀವ್ರ ಗಾಯಗೊಂಡು ಸಿಂಗಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಘಟನೆಯ ನಂತರ ಬಾಂಗ್ಲಾದೇಶದಲ್ಲಿ ದಂಗೆ ಮತ್ತೆ ಭುಗಿಲೆದ್ದಿದೆ.
ಕಳೆದ ವಾರ ಢಾಕಾದ ಕೇಂದ್ರ ಬಿಜೋಯ್‌ನಗರ ಪ್ರದೇಶದಲ್ಲಿ ತಮ್ಮ ಚುನಾವಣಾ ಪ್ರಚಾರವನ್ನು ಆರಂಭಿಸಿದ ವೇಳೆ ಉಸ್ಮಾನ್ ಹಾದಿ ಅವರ ತಲೆಗೆ ಮುಸುಕುಧಾರಿ ಬಂದೂಕುಧಾರಿಗಳು ಗುಂಡು ಹಾರಿಸಿದರು. ಇದೀಗ ಬಾಂಗ್ಲಾದೇಶ ಸರ್ಕಾರದ ಮುಖ್ಯ ಸಲಹೆಗಾರ ಯೂನಸ್ ಹಾದಿ ಅವರ ಸಾವನ್ನು ಘೋಷಿಸಿದರು, ಕೊಲೆ ಆರೋಪಿಗಳನ್ನು ಪತ್ತೆಹಚ್ಚಲು ತ್ವರಿತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಇಂದು, ನಾನು ತುಂಬಾ ಹೃದಯವಿದ್ರಾವಕ ಸುದ್ದಿಯೊಂದಿಗೆ ನಿಮ್ಮ ಮುಂದೆ ಬಂದಿದ್ದೇನೆ. ಜುಲೈ ದಂಗೆಯ ನಿರ್ಭೀತ ಮುಂಚೂಣಿ ಹೋರಾಟಗಾರ ಮತ್ತು ಇಂಕಿಲಾಬ್ ಮಂಚದ ವಕ್ತಾರ ಶರೀಫ್ ಉಸ್ಮಾನ್ ಹಾದಿ ಇಂದು ಅಸುನೀಗಿದ್ದಾರೆ ಎಂದು ಯೂನಸ್ ಘೋಷಿಸಿದರು.
ಸೋಮವಾರ ಸರ್ಕಾರವು ಹಾದಿ ಅವರನ್ನು ಸುಧಾರಿತ ಚಿಕಿತ್ಸೆಗಾಗಿ ಏರ್ ಆಂಬ್ಯುಲೆನ್ಸ್‌ನಲ್ಲಿ ಸಿಂಗಾಪುರಕ್ಕೆ ಕಳುಹಿಸಿತ್ತು. ಢಾಕಾದಲ್ಲಿ ವೈದ್ಯರು ಅವರ ಸ್ಥಿತಿಯನ್ನು 'ಅತ್ಯಂತ ಗಂಭೀರ' ಎಂದು ಹೇಳಿದ್ದರು. ಅವರ ಸಾವಿನ ನಂತರ ದೇಶದ ಅತಿದೊಡ್ಡ ದಿನಪತ್ರಿಕೆ ಪ್ರೋಥೋಮ್ ಅಲೋ ಮತ್ತು ಡೈಲಿ ಸ್ಟಾರ್ ಕಚೇರಿಗಳನ್ನು ಜನಸಮೂಹ ಧ್ವಂಸ ಮಾಡಿರುವ ವಿಡಿಯೊಗಳು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದ್ದವು.
ಈ ಪ್ರತಿಭಟನೆಗಳಲ್ಲಿ ಹಾದಿ ಪರ ಅನೇಕರು ಘೋಷಣೆಗಳನ್ನು ಕೂಗುತ್ತಿದ್ದರು. ಪ್ರತಿಭಟನಾಕಾರರು ತಮ್ಮ ಚಳವಳಿಯನ್ನು ಮುಂದುವರಿಸುವುದಾಗಿ ಮತ್ತು ಅವರ ಜೀವವನ್ನು ಬಲಿತೆಗೆದುಕೊಂಡ ದಾಳಿಗೆ ತ್ವರಿತ ನ್ಯಾಯ ಮತ್ತು ಹೊಣೆಗಾರಿಕೆಯನ್ನು ಒತ್ತಾಯಿಸುವುದಾಗಿ ಪ್ರತಿಜ್ಞೆ ಮಾಡಿದ್ದರು.
ಯಾರು ಈ ಹಾದಿ?
ಹಾಗಾದರೆ ಈ ಷರೀಫ್ ಉಸ್ಮಾನ್ ಹಾದಿ ಯಾರು? ದಕ್ಷಿಣ ಬಾಂಗ್ಲಾದೇಶದ ಝಲಕಾಥಿ ಜಿಲ್ಲೆಯ ನಲ್ಚಿಟಿಯಿಂದ ಬಂದ ಹಾದಿ, ಮದರಸಾ ಶಿಕ್ಷಕರ ಪುತ್ರ.
ಅವರು ತಮ್ಮ ಶಿಕ್ಷಣವನ್ನು ನೇಸರಾಬಾದ್ ಕಾಮಿಲ್ ಮದರಸಾದಲ್ಲಿ ಪ್ರಾರಂಭಿಸಿ ನಂತರ ಢಾಕಾ ವಿಶ್ವವಿದ್ಯಾಲಯಕ್ಕೆ ಸೇರಿಕೊಂಡರು. ಅಲ್ಲಿ ಅವರು ರಾಜಕೀಯ ವಿಜ್ಞಾನವನ್ನು ಅಧ್ಯಯನ ಮಾಡಿದರು. ಅವರು ಇತ್ತೀಚೆಗೆ ಖಾಸಗಿ ವಿದ್ವಾಂಸರ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದರು. 2024 ರ ಜುಲೈ ಕ್ರಾಂತಿಯ ನಂತರ ಜನಪ್ರಿಯತೆಗೆ ಬಂದ ಇಂಕ್ವಿಲಾಬ್ ಮಂಚ ಎಂಬ 'ಸಾಮಾಜಿಕ-ಸಾಂಸ್ಕೃತಿಕ ವೇದಿಕೆ'ಯ ಸ್ಥಾಪಕ ಹಾದಿ.
ಶೇಖ್ ಹಸೀನಾ ಸರ್ಕಾರ ಮತ್ತು ಭಾರತದ ಕಟು ಟೀಕಾಕಾರರಾಗಿದ್ದ ಹಾದಿ, ಶೇಖ್ ಹಸೀನಾ ಅವರ ಅವಾಮಿ ಲೀಗ್ ನ್ನು ವಿಸರ್ಜಿಸುವಂತೆ ಒತ್ತಾಯಿಸುವ ರಾಜಕೀಯವಾಗಿ ಪ್ರಭಾವಶಾಲಿ ಗುಂಪಾಗಿ ಇಂಕ್ವಿಲಾಬ್ ಮಂಚದ ಉದಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ (ICT) 'ಮಾನವೀಯತೆಯ ವಿರುದ್ಧದ ಅಪರಾಧಗಳಿಗಾಗಿ' ಹಸೀನಾಗೆ ಮರಣದಂಡನೆ ವಿಧಿಸಿದ ನ್ಯಾಯಾಲಯ ತೀರ್ಪನ್ನು ಹಾದಿ ಸ್ವಾಗತಿಸಿದ್ದರು. ತೀರ್ಪು ಇಡೀ ಜಗತ್ತಿಗೆ ಒಂದು ಪೂರ್ವನಿದರ್ಶನವನ್ನು ನೀಡಿದೆ ಎಂದಿದ್ದರು.
ಭಾರತ ವಿರುದ್ಧ ತೀವ್ರ ವಿರೋಧ
ಬಾಂಗ್ಲಾದೇಶ ಸೇನೆ ಮತ್ತು ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರವನ್ನು ಟೀಕಿಸಲು ಎಂದಿಗೂ ಅವರು ಹಿಂಜರಿಯುತ್ತಿರಲಿಲ್ಲ. ದೇಶದಲ್ಲಿ ಯಾವುದೇ ಮಹತ್ವದ ಬದಲಾವಣೆಯನ್ನು ತರದ ಹೊಸ ಸರ್ಕಾರವನ್ನು ಅವರು ಟೀಕಿಸಿದರು. ಹಾದಿಯ ನಿಧನವು ಬಾಂಗ್ಲಾದೇಶದಲ್ಲಿ ಭಾರತ ವಿರೋಧಿ ಭಾವನೆಯನ್ನು ಹೆಚ್ಚಿಸಲು ಕಾರಣವಾಗಿದೆ.
ಹಾದಿಯ ಮೇಲೆ ಹಲ್ಲೆಕೋರರು ಕೊಲೆ ಮಾಡಿದ ನಂತರ ಭಾರತಕ್ಕೆ ಓಡಿಹೋದರು ಎಂದು ಹಲವರು ಆರೋಪಿಸಿದರು. ಅವರನ್ನು ದೇಶಕ್ಕೆ ಕಳುಹಿಸುವವರೆಗೆ ಭಾರತೀಯ ಹೈಕಮಿಷನ್ ನ್ನು ಮುಚ್ಚುವಂತೆ ಅವರು ಮಧ್ಯಂತರ ಸರ್ಕಾರವನ್ನು ಒತ್ತಾಯಿಸಿದರು.
ಕಳೆದ ವರ್ಷ ಬಾಂಗ್ಲಾದೇಶದಲ್ಲಿ ಹಿಂಸಾತ್ಮಕ ಪ್ರತಿಭಟನೆಯ ನೇತೃತ್ವ ವಹಿಸಿದ್ದ ವಿದ್ಯಾರ್ಥಿಗಳ (SAD) ದೊಡ್ಡ ಶಾಖೆಯಾದ ನ್ಯಾಷನಲ್ ಸಿಟಿಜನ್ ಪಾರ್ಟಿ (NCP), ಜಾತಿಯ ಛತ್ರ ಶಕ್ತಿ ಎಂಬ ವಿದ್ಯಾರ್ಥಿ ಗುಂಪನ್ನು ಸೇರಿಕೊಂಡು ಢಾಕಾ ವಿಶ್ವವಿದ್ಯಾಲಯದ ಆವರಣದಲ್ಲಿ ಶೋಕ ಮೆರವಣಿಗೆಯನ್ನು ನಡೆಸಿ ಶಹಬಾಗ್‌ಗೆ ಮೆರವಣಿಗೆ ನಡೆಸಿತು.
ಮಧ್ಯಂತರ ಸರ್ಕಾರ, ಭಾರತ ಹಾದಿಯ ಹಂತಕರನ್ನು ಹಿಂದಿರುಗಿಸುವವರೆಗೆ, ಬಾಂಗ್ಲಾದೇಶದಲ್ಲಿರುವ ಭಾರತೀಯ ಹೈಕಮಿಷನ್ ಮುಚ್ಚಿರುತ್ತದೆ. ನಾವು ಯುದ್ಧದ ಮನಸ್ಥಿತಿಯಲ್ಲಿದ್ದೇವೆ ಎಂದು ಎನ್‌ಸಿಪಿಯ ಪ್ರಮುಖ ನಾಯಕ ಸರ್ಜಿಸ್ ಆಲ್ಮ್ ಘೋಷಿಸಿದ್ದಾರೆ.
Advertisement