

ವಾಷಿಂಗ್ಟನ್: ಸಾಮೂಹಿಕ ಗಡೀಪಾರುಗಳನ್ನು ಹೆಚ್ಚಿಸಲು ಮತ್ತು ಜಾರಿ ವೆಚ್ಚವನ್ನು ಕಡಿಮೆ ಮಾಡಲು ಡೊನಾಲ್ಡ್ ಟ್ರಂಪ್ ಸರ್ಕಾರ ಅಕ್ರಮ ವಲಸಿಗರಿಗೆ ಕ್ರಿಸ್‌ಮಸ್ ಆಫರ್ ನೀಡಿದ್ದು, ಸ್ವಯಂಪ್ರೇರಣೆಯಿಂದ ಅಮೆರಿಕ ತೊರೆಯುವವರಿಗೆ 3 ಸಾವಿರ ಡಾಲರ್ ಸ್ಟೈಫಂಡ್ ನೀಡುವುದಾಗಿ ಘೋಷಿಸಿದೆ.
ಈ ವರ್ಷಾಂತ್ಯದೊಳಗೆ ಅಮೆರಿಕವನ್ನು ತೊರೆಯಲು ಒಪ್ಪಿದರೆ, ಅಕ್ರಮ ವಲಸಿಗರಿಗೆ ಉಚಿತ ವಿಮಾನ ಪ್ರಯಾಣದ ಜೊತೆಗೆ ಹೋಮ್‌ಲ್ಯಾಂಡ್ ಸೆಕ್ಯುರಿಟಿ ಇಲಾಖೆ(DHS) 3,000 ಡಾಲರ್(ಸುಮಾರು ರೂ. 2.70 ಲಕ್ಷ) ಸ್ಟೈಫಂಡ್ ನೀಡಿಲಿದೆ.
ಅಮೆರಿಕದಲ್ಲಿರುವ ಅಕ್ರಮ ವಲಸಿಗರು ತಮ್ಮ ತಾಯ್ನಾಡಿಗೆ ಮರಳಲು ಸಹಾಯ ಮಾಡುವ ಉದ್ದೇಶದಿಂದ ಈ ರಜಾದಿನಗಳಲ್ಲಿಯೂ ಸೇವೆ ಸಲ್ಲಿಸುವುದನ್ನು ಮುಂದುವರಿಸುವುದಾಗಿ ಡಿಎಚ್ಎಸ್ ಪ್ರಕಟಣೆಯಲ್ಲಿ ತಿಳಿಸಿದೆ.
"ವರ್ಷಾಂತ್ಯದೊಳಗೆ CBP (ಕಸ್ಟಮ್ಸ್ ಮತ್ತು ಬಾರ್ಡರ್ ಪ್ರೊಟೆಕ್ಷನ್) ಹೋಮ್ ಅಪ್ಲಿಕೇಶನ್ ಮೂಲಕ ಸ್ವಯಂ-ಗಡೀಪಾರು ಮಾಡಲು ಸೈನ್ ಅಪ್ ಮಾಡುವ ಅಕ್ರಮ ವಿದೇಶಿಯರಿಗೆ ಉಚಿತ ವಿಮಾನ ಪ್ರಯಾಣದ ಜೊತೆಗೆ 3,000 ಸ್ಟೈಫಂಡ್ ನೀಡಲಾಗುವುದು ಎಂದು ಹೇಳಿದೆ.
"CBP ಹೋಮ್ ಅಪ್ಲಿಕೇಶನ್ ಮೂಲಕ ಸ್ವಯಂ-ಗಡೀಪಾರು ಮಾಡುವುದು ಈ ರಜಾದಿನಗಳಲ್ಲಿ ಅಕ್ರಮ ವಿದೇಶಿಯರು ತಮ್ಮ ಮತ್ತು ತಮ್ಮ ಕುಟುಂಬಗಳಿಗೆ ನೀಡಬಹುದಾದ ಅತ್ಯುತ್ತಮ ಉಡುಗೊರೆಯಾಗಿದೆ. ಇದು ವೇಗವಾದ, ಉಚಿತ ಮತ್ತು ಸುಲಭವಾದ ಪ್ರಕ್ರಿಯೆ. ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ, ನಿಮ್ಮ ಮಾಹಿತಿಯನ್ನು ಭರ್ತಿ ಮಾಡಿ, ಉಳಿದದ್ದನ್ನು ಡಿಹೆಚ್ಎಸ್ ನೋಡಿಕೊಳ್ಳುತ್ತದೆ. ನಿಮ್ಮ ಮನೆಗೆ ಹಿಂದಿರುಗುವ ಪ್ರಯಾಣಕ್ಕೆ ವ್ಯವಸ್ಥೆ ಮಾಡುವುದರ ಜೊತೆಗೆ ನಿಮಗೆ ಹಣ ತಲುಪಿಸಲಾಗುತ್ತದೆ" ಎಂದು ಡಿಎಚ್ಎಸ್ ಮಾಹಿತಿ ನೀಡಿದೆ.
ಈ ವಿಶೇಷ ಕೊಡುಗೆಯ ಲಾಭ ಪಡೆಯದ ಅಕ್ರಮ ವಲಸಿಗರಿಗೆ ಉಳಿಯುವುದು ಒಂದೇ ದಾರಿ. ಅವರನ್ನು ಬಂಧಿಸಿ ಗಡಿಪಾರು ಮಾಡಲಾಗುತ್ತದೆ. ಅವರು ಎಂದಿಗೂ ಅಮೆರಿಕಕ್ಕೆ ಹಿಂತಿರುಗಲು ಸಾಧ್ಯವಾಗುವುದಿಲ್ಲ ಎಂದು ಎಚ್ಚರಿಸಿದೆ.
ಜನವರಿ 2025 ರಿಂದ, 1.9 ಮಿಲಿಯನ್ ಅಕ್ರಮ ವಲಸಿಗರು ಸ್ವಯಂಪ್ರೇರಣೆಯಿಂದ ಗಡೀಪಾರು ಆಗಿದ್ದಾರೆ ಮತ್ತು ಹತ್ತಾರು ಸಾವಿರ ಜನರು ಸಿಬಿಪಿ ಹೋಮ್ ಕಾರ್ಯಕ್ರಮವನ್ನು ಬಳಸಿದ್ದಾರೆ.
"ಅಕ್ರಮ ವಲಸಿಗರು ಈ ಕೊಡುಗೆಯ ಲಾಭವನ್ನು ಪಡೆದುಕೊಳ್ಳಬೇಕು ಮತ್ತು ಸ್ವಯಂ-ಗಡೀಪಾರು ಆಗಬೇಕು. ಏಕೆಂದರೆ ಅವರು ಹಾಗೆ ಮಾಡದಿದ್ದರೆ, ನಾವು ಅವರನ್ನು ಹುಡುಕುತ್ತೇವೆ, ಬಂಧಿಸುತ್ತೇವೆ ಮತ್ತು ಅವರು ಎಂದಿಗೂ ಹಿಂತಿರುಗುವುದಿಲ್ಲ" ಎಂದು ಹೋಮ್‌ಲ್ಯಾಂಡ್ ಸೆಕ್ಯುರಿಟಿ ಕಾರ್ಯದರ್ಶಿ ಕ್ರಿಸ್ಟಿ ನೋಯೆಮ್ ಎಚ್ಚರಿಸಿದ್ದಾರೆ.
Advertisement