

ರಾವಲ್ಪಿಂಡಿ: ಪಾಕಿಸ್ತಾನ ಸೇನೆಯ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ , ಇತ್ತೀಚೆಗೆ ತನ್ನ ಮಗಳ ವಿವಾಹ ನೆರವೇರಿಸಿದ್ದಾರೆ. ತನ್ನ ಸ್ವಂತ ತಮ್ಮನ ಮಗ ಖಾಸಿಮ್ ಮುನೀರ್ ಗೆ ಮಗಳನ್ನು ಕೊಟ್ಟು ಮದುವೆ ಮಾಡಿದ್ದಾರೆ.
ಡಿಸೆಂಬರ್ 26 ರಂದು ರಾವಲ್ಪಿಂಡಿಯಲ್ಲಿ ಈ ಮದುವೆ ಕಾರ್ಯಕ್ರಮ ನಡೆದಿದೆ. ಮುನೀರ್ ತನ್ನ ಮೂರನೇ ಮಗಳನ್ನು ತನ್ನ ಸಹೋದರನ ಮಗ ಕ್ಯಾಪ್ಟನ್ ಅಬ್ದುಲ್ ರೆಹ್ಮಾನ್ ಗೆ ಕೊಟ್ಟು ವಿವಾಹ ಮಾಡಿಸಿದ್ದಾರೆ. ಹಿಂದೆ ಪಾಕಿಸ್ತಾನ ಸೇನೆಯಲ್ಲಿ ಕ್ಯಾಪ್ಟನ್ ಆಗಿ ಸೇವೆ ಸಲ್ಲಿಸಿದ್ದ ಅಬ್ದುಲ್ ರಹ್ಮಾನ್ ನಂತರ ಅವರು ನಾಗರಿಕ ಸೇವೆಗಳಿಗೆ ಸೇರ್ಪಡೆಗೊಂಡು, ಸೇನಾ ಅಧಿಕಾರಿಗಳಿಗೆ ಮೀಸಲಾದ ಕೋಟಾದಡಿ ಸಹಾಯಕ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಈ ವಿವಾಹವನ್ನು ಯಾವುದೇ ದೊಡ್ಡ ಹೋಟೆಲ್ ಅಥವಾ ಮದುವೆ ಮಂಟಪದಲ್ಲಿ ಆಯೋಜಿಸದೆ, ರಾವಲ್ಪಿಂಡಿಯಲ್ಲಿ ಇರುವ ಅಸಿಮ್ ಮುನೀರ್ ನಿವಾಸದಲ್ಲೇ ನಡೆಸಲಾಗಿದೆ. ಏಕೆಂದರೆ ಮುನೀರ್ ನಿವಾಸವು ಪಾಕಿಸ್ತಾನ ಸೇನೆಯ ಪ್ರಧಾನ ಕಚೇರಿ ಜಿಎಚ್‌ಕ್ಯೂ ಸಮೀಪದಲ್ಲಿದೆ. ಜೊತೆಗೆ ಕಾರ್ಯಕ್ರಮವನ್ನು ಸಂಪೂರ್ಣವಾಗಿ ಖಾಸಗಿ ಎಂದು ಘೋಷಿಸಲಾಗಿದ್ದು, ಯಾವುದೇ ಅಧಿಕೃತ ಚಿತ್ರಗಳು ಅಥವಾ ವೀಡಿಯೊಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಲಾಗಿಲ್ಲ.
ಈ ವಿವಾಹಕ್ಕೆ UAE ಅಧ್ಯಕ್ಷ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್, ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ, ಪ್ರಧಾನಿ ಶಹಬಾಜ್ ಷರೀಫ್, ಉಪಪ್ರಧಾನಿ ಇಶಾಕ್ ದಾರ್, ಐಎಸ್‌ಐ ಮುಖ್ಯಸ್ಥ ಸೇರಿದಂತೆ ಹಲವು ಉನ್ನತ ಸೇನಾ ಜನರಲ್‌ಗಳು ಭಾಗವಹಿಸಿದ್ದರು ಎನ್ನಲಾಗಿದೆ.
ಮಗಳ ಮದುವೆಯಲ್ಲೂ ಒಳಸಂಚು: ರಾವಲ್ಪಿಂಡಿಯಲ್ಲಿ ಮಿಲಿಟರಿ ನಿಯಂತ್ರಿತ ಸ್ಥಳಗಳಲ್ಲಿ ಮುನೀರ್ ಪ್ರತಿ ಸಮಾರಂಭ ಆಯೋಜಿಸುವುದು ರಕ್ತಸಂಬಂಧದ ನಂಬಿಕೆ ಜಾಲವನ್ನು ಹೆಚ್ಚಿಸುವ ಪ್ರಯತ್ನದಂತೆ ಕಂಡುಬರುತ್ತಿದೆ ಎಂದು ಭಾರತದ ಗುಪ್ತಚರ ಮೂಲಗಳು ಹೇಳಿವೆ.
ಪಾಕಿಸ್ತಾನ ಆಂತರಿಕ ಭಿನ್ನಾಭಿಪ್ರಾಯ, ಆರ್ಥಿಕ ಒತ್ತಡ ಮತ್ತು ಸೇನೆಯಲ್ಲಿ ಬೆಳೆಯುತ್ತಿರುವ ರಾಜಕೀಯ ಪ್ರಾಬಲ್ಯದ ಬಗ್ಗೆ ಹೆಚ್ಚುತ್ತಿರುವ ಟೀಕೆಗಳ ನಡುವೆ ಈ ಮದುವೆ ನಡೆದಿದೆ. ಆಸಿಫ್ ಅಲಿ ಜರ್ದಾರಿ, ಶೆಹಬಾಜ್ ಷರೀಫ್ ಮತ್ತು ಇಶಾಕ್ ದಾರ್ ಅವರಂತಹ ನಾಯಕರು ಮದುವೆ ಸಮಾರಂಭದಲ್ಲಿ ಭಾಗವಹಿಸಿರುವುದು, ಮುನೀರ್ ನಾಯಕತ್ವ ಮುಂದುವರೆಯುತ್ತದೆ ಎಂಬುದನ್ನು ತೋರಿಸುತ್ತದೆ.
ಯುಎಇ ಅಧ್ಯಕ್ಷರನ್ನು ಆಹ್ವಾನಿಸಿರುವುದು ದೇಶದಲ್ಲಿ ಅಸ್ಥಿರತೆಯ ಹೊರತಾಗಿಯೂ ಪಾಕಿಸ್ತಾನದ ಮಿಲಿಟರಿ ನಾಯಕತ್ವಕ್ಕೆ ಗಲ್ಫ್ ಬೆಂಬಲವನ್ನು ಮುಂದುವರೆಸುವ ಸಂಕೇತವೆಂದು ಪರಿಗಣಿಸಲಾಗಿದೆ. ಅಬುಧಾಬಿಯಿಂದ ಆರ್ಥಿಕ, ರಾಜತಾಂತ್ರಿಕ ಮತ್ತು ಕಾರ್ಯತಂತ್ರದ ಭರವಸೆಯನ್ನು ಪಡೆಯುವುದು ಮುನೀರ್ ಅವರ ಪ್ರಯತ್ನ ಎನ್ನಲಾಗಿದೆ.
Advertisement