

ಢಾಕಾ: ಬಾಂಗ್ಲಾದೇಶದಲ್ಲಿ ಮತ್ತೋರ್ವ ಹಿಂದೂವನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ. ಮೈಮೆನ್‌ಸಿಂಗ್ ಜಿಲ್ಲೆಯ ಗಾರ್ಮೆಂಟ್ ಫ್ಯಾಕ್ಟರಿಯೊಂದರಲ್ಲಿ ಭದ್ರತಾ ಸಿಬ್ಬಂದಿಯಾಗಿ ನಿಯೋಜಿಸಲಾದ ಹಿಂದೂ ಕೆಲಸಗಾರನನ್ನು ಸಹೋದ್ಯೋಗಿಯೊಬ್ಬರು ಗುಂಡಿಕ್ಕಿ ಕೊಂದಿದ್ದಾರೆ. ಇದು ಕಳೆದ ಎರಡು ವಾರಗಳಲ್ಲಿ ಮೂರನೇ ಹಿಂದೂ ಹತ್ಯೆಯಾಗಿದೆ.
ಭಾಲುಕಾ ಉಪಜಿಲಾ ಪ್ರದೇಶದಲ್ಲಿರುವ ಲಬಿಬ್ ಗ್ರೂಪ್ ಫ್ಯಾಕ್ಟರಿ ಸುಲ್ತಾನಾ ಸ್ವೆಟರ್ಸ್ ಲಿಮಿಟೆಡ್‌ನಲ್ಲಿ ಸೋಮವಾರ ಸಂಜೆ 6.45 ರ ಸುಮಾರಿಗೆ ಈ ಘಟನೆ ನಡೆದಿದೆ. ಹತ್ಯೆಯಾದವರನ್ನು ಕಾರ್ಖಾನೆಯಲ್ಲಿ Ansar ಸದಸ್ಯನಾಗಿ ಕೆಲಸ ಮಾಡುತ್ತಿದ್ದ ಬಜೇಂದ್ರ ಬಿಸ್ವಾಸ್ (42) ಎಂದು ಗುರುತಿಸಲಾಗಿದೆ. ಆರೋಪಿ ನೋಮನ್ ಮಿಯಾ (29) ಕೂಡ ಇದೇ ಘಟಕದಲ್ಲಿ ಸೇವೆ ಸಲ್ಲಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಂಗ್ಲಾದೇಶದಲ್ಲಿ ಅನ್ಸಾರ್ (Ansar) ಎಂಬುದು ಗೃಹ ವ್ಯವಹಾರಗಳ ಸಚಿವಾಲಯದಡಿ ಕೆಲಸ ಮಾಡುವ ಸಹಾಯಕ ಪಡೆಯಾಗಿದೆ. ಸರ್ಕಾರಿ ಕಚೇರಿಗಳು, ಕಾರ್ಖಾನೆಗಳು, ಕೈಗಾರಿಕಾ ಘಟಕಗಳು ಮತ್ತು ಪ್ರಮುಖ ಕಟ್ಟಡಗಳ ರಕ್ಷಣೆ ಸೇರಿದಂತೆ ಆಂತರಿಕ ಭದ್ರತಾ ಕಾರ್ಯಾಚರಣೆಗಳಿಗಾಗಿ ಅನ್ಸಾರ್ ಸದಸ್ಯರನ್ನು ನಿಯೋಜಿಸಲಾಗುತ್ತದೆ.
ಸಶಸ್ತ್ರ ಭದ್ರತಾ ಕರ್ತವ್ಯಕ್ಕೆ ಅವರನ್ನು ನಿಯೋಜಿಸಿದಾಗ ಸರ್ಕಾರಿ ಶಸ್ತ್ರಾಸ್ತ್ರಗಳನ್ನು ನೀಡಲಾಗುತ್ತದೆ. ಪೊಲೀಸರು ಮತ್ತು ಪ್ರತ್ಯಕ್ಷದರ್ಶಿಗಳ ಪ್ರಕಾರ, ಇಬ್ಬರೂ ಭದ್ರತಾ ಕರ್ತವ್ಯದಲ್ಲಿದ್ದರು ಮತ್ತು ಕಾರ್ಖಾನೆಯ ಆವರಣದೊಳಗಿನ ಅನ್ಸಾರ್ ಬ್ಯಾರಕ್‌ಗಳಲ್ಲಿ ತಂಗಿದ್ದರು ಎನ್ನಲಾಗಿದೆ.
ಮಾತುಕತೆ ವೇಳೆ ನೊಮನ್ ಮಿಯಾ, ಸರ್ಕಾರ ನೀಡಿದ ಗನ್ ನ್ನು ಬಿಸ್ವಾಸ್ ನತ್ತ ತೋರಿ ತಮಾಷೆ ಮಾಡಿದ್ದಾನೆ. ಸ್ವಲ್ಪ ಸಮಯದ ನಂತರ ಗುಂಡು ಹಾರಿಸಿದ್ದಾನೆ. ಬಿಸ್ವಾಸ್‌ನ ಎಡ ತೊಡೆಗೆ ಗುಂಡು ತಗುಲಿದ್ದು, ತಕ್ಷಣ ಅವರನ್ನು ಭಾಲುಕಾ ಉಪಜಿಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಲ್ಲಿ ಅವರು ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದ್ದು, ಗನ್ ನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮೈಮೆನ್‌ಸಿಂಗ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕಳುಹಿಸಲಾಗಿದೆ.
ಈ ತಿಂಗಳ ಆರಂಭದಲ್ಲಿ ಇದೇ ರೀತಿಯಲ್ಲಿ ಇಬ್ಬರು ಹಿಂದೂಗಳನ್ನು ಹತ್ಯೆ ಮಾಡಲಾಗಿತ್ತು. ಬಾಂಗ್ಲಾದೇಶದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಸುರಕ್ಷತೆಯ ಕುರಿತು ಹೆಚ್ಚುತ್ತಿರುವ ಕಳವಳದ ನಡುವೆ ಇದೀಗ ಮತ್ತೋರ್ವ ಹಿಂದೂವಿನ ಕೊಲೆಯಾಗಿದೆ.
ಡಿಸೆಂಬರ್ 18 ರಂದು, ಧರ್ಮನಿಂದೆಯ ಆರೋಪದ ಮೇಲೆ ಭಾಲುಕಾದಲ್ಲಿ ಜನಸಮೂಹದಿಂದ ದೀಪು ಚಂದ್ರ ದಾಸ್ ಅವರನ್ನು ಹತ್ಯೆ ಮಾಡಲಾಗಿತ್ತು. ಆತನನ್ನು ಥಳಿಸಿ, ವಿವಸ್ತ್ರಗೊಳಿಸಿ, ಬೆಂಕಿ ಹಚ್ಚಲಾಗಿತ್ತು. ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
Advertisement