

ಟೆಹರಾನ್: ಇರಾನ್ ನ ಪರಮಾಣು ಪುನರ್ ನಿರ್ಮಾಣ ಕುರಿತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಾರ್ನಿಂಗ್ ಗೆ ತಲೆಕೆಡಿಸಿಕೊಳ್ಳದ ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಮಂಗಳವಾರ ತಿರುಗೇಟು ನೀಡಿದ್ದಾರೆ. ಯಾವುದೇ ಕ್ರೂರ ಆಕ್ರಮಣಕ್ಕೆ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್‌ನ ಉತ್ತರವು ಕಠಿಣವಾಗಿರುತ್ತದೆ ಎಂದು ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಅವರು ಹೇಳಿದ್ದಾರೆ.
ಇರಾನ್ ತನ್ನ ಪರಮಾಣು ಸಾಮರ್ಥ್ಯಗಳನ್ನು ಪುನರ್ ನಿರ್ಮಿಸಲು ಯತ್ನಿಸಿದರೆ ಅದನ್ನು ತಡೆಯಲು ಇಸ್ರೇಲ್ ನಡೆಸುವ ತಕ್ಷಣದ ದಾಳಿಗೆ ವಾಷಿಂಗ್ಟನ್ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಟ್ರಂಪ್ ಹೇಳಿಕೆ ನೀಡಿದ ಬೆನ್ನಲ್ಲೇ, ಯಾರ ಹೆಸರನ್ನೂ ಉಲ್ಲೇಖಿಸದೆ ಮಸೌದ್ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.
ಫ್ಲೋರಿಡಾದ ಮಾರ್-ಎ-ಲಾಗೊ ಎಸ್ಟೇಟ್‌ನಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ವ್ಯಾಪಕ ಮಾತುಕತೆಯ ಸಂದರ್ಭದಲ್ಲಿ ಟ್ರಂಪ್ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.
ಇರಾನ್ ಮತ್ತೆ ಪರಮಾಣು ಸಾಮರ್ಥ್ಯಗಳನ್ನು ಪುನರ್ ನಿರ್ಮಿಸಲು ಯತ್ನಿಸುತ್ತಿದೆ ಎಂಬ ಮಾಹಿತಿ ಕೇಳಿದ್ದೇನೆ. ಇರಾನ್ ನಡವಳಿಕೆ ಸುಧಾರಿಸದಿದ್ದರೆ ಪರಿಣಾಮಗಳು ಭೀಕರವಾಗಿರುತ್ತವೆ. ಈ ಹಿಂದಿನ ದಾಳಿಗಿಂತಲೂ ಈ ಬಾರಿಗೆ ಅಮೆರಿಕದ ಪ್ರತಿಕ್ರಿಯೆ ಹೆಚ್ಚು ಕಠಿಣವಾಗಿರಲಿದೆ ಎಂದು ಟ್ರಂಪ್ ವಾರ್ನಿಂಗ್ ನೀಡಿದ್ದರು.
ಈ ವರ್ಷದ ಜೂನ್ ಜೂನ್ 13, 2025 ರಂದು ಇಸ್ರೇಲ್ ಸತತ 12 ದಿನಗಳ ಕಾಲ ಇರಾನ್‌ನ ಮಿಲಿಟರಿ ಮತ್ತು ಪರಮಾಣು ನೆಲೆಗಳ ಮೇಲೆ ದಾಳಿ ನಡೆಸಿತ್ತು. ತದನಂತರ, ಜೂನ್ 22 ರಂದು ಅಮೆರಿಕವು ಇರಾನ್‌ನ ಪ್ರಮುಖ ಪರಮಾಣು ತಾಣಗಳಾದ ನಟಾಂಜ್, ಫೋರ್ಡೊ ಮತ್ತು ಇಸ್ಫಹಾನ್ ಮೇಲೆ ಬಾಂಬ್ ದಾಳಿ ನಡೆಸಿತ್ತು. ಈ ಸಂಘರ್ಷವು 24 ದಿನಗಳ ನಂತರ ಕದನ ವಿರಾಮದೊಂದಿಗೆ ಅಂತ್ಯಗೊಂಡಿತ್ತು.
ಈಗಾಗಲೇ ಇಸ್ರೇಲ್ ಕಡೆಯಿಂದ ಉದ್ವಿಗ್ನತೆ ಹೆಚ್ಚಿದೆ ಎಂದು ಪೆಜೆಶ್ಕಿಯಾನ್ ಶನಿವಾರ ಹೇಳಿದ್ದರು. US, ಇಸ್ರೇಲ್ ಮತ್ತು ಯುರೋಪ್‌ನೊಂದಿಗೆ ಪೂರ್ಣ ಪ್ರಮಾಣದ ಯುದ್ಧದಲ್ಲಿದ್ದೇವೆ. ನಮ್ಮ ದೇಶವು ಸ್ಥಿರವಾಗಿರುವುದನ್ನು ಅವರು ಬಯಸುವುದಿಲ್ಲ ಎಂದಿದ್ದರು
Advertisement