
ವಾಷಿಂಗ್ ಟನ್: ಅಮೆರಿಕ ಉತ್ಪನ್ನಗಳಿಗೆ ಹೆಚ್ಚಿನ ತೆರಿಗೆ ವಿಧಿಸುತ್ತಿರುವ ರಾಷ್ಟ್ರಗಳಿಗೆ ತಾವೂ ಪ್ರತೀಕಾರ ಸುಂಕ ವಿಧಿಸುವುದಾಗಿ ಹೇಳಿದ್ದ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಮಾತಿನಂತೆ ಚೀನಾ, ಮೆಕ್ಸಿಕೋ, ಕೆನಡಾಗಳ ಕೆಲವು ಉತ್ಪನ್ನಗಳಿಗೆ ತೆರಿಗೆ ಹೆಚ್ಚಿಸಿದ್ದರು.
ಈ ನಡುವೆ ಚೀನಾ ಅಮೇರಿಕಾಗೆ ಸೆಡ್ಡು ಹೊಡೆದಿದ್ದು ಪ್ರತೀಕಾರ ಸುಂಕ ವಿಧಿಸಿದ್ದು ಅಮೇರಿಕಾಗೆ ಇದರ ಬಿಸಿ ತಟ್ಟಿದೆ. ಪರಿಣಾಮವಾಗಿ ಎಚ್ಚೆತ್ತುಕೊಂಡಿರುವ ಡೊನಾಲ್ಡ್ ಟ್ರಂಪ್ ಈಗ ಕೆನಡಾ, ಮೆಕ್ಸಿಕೋ ಜೊತೆಗೆ ಮಾತುಕತೆ ನಡೆಸಿ ಈ ಹಿಂದೆ ತಾವು ಈ ರಾಷ್ಟ್ರಗಳಿಗೆ ವಿಧಿಸಿದ್ದ ತೆರಿಗೆ ಏರಿಕೆಯನ್ನು ತಾತ್ಕಾಲಿಕವಾಗಿ (30 ದಿನಗಳವರೆಗೆ) ತಡೆಹಿಡಿದಿದ್ದಾರೆ.
ಕೆನಡಾ, ಮೆಕ್ಸಿಕೋಗಳು ವ್ಯಾಪಾರ ಮತ್ತು ಭದ್ರತೆಯ ಕುರಿತು ಒಪ್ಪಂದಗಳನ್ನು ಮಾಡಿಕೊಳ್ಳುವ ಸಾಧ್ಯತೆಯನ್ನು ಪರಿಗಣಿಸಿ ಟ್ರಂಫ್ ಈ ನಿರ್ಧಾರ ಕೈಗೊಂಡಿದ್ದಾರೆ.
ಮೆಕ್ಸಿಕೋ, ಕೆನಡಾ ಮತ್ತು ಚೀನಾದ ಸರಕುಗಳ ಮೇಲೆ ಭಾರಿ ಸುಂಕಗಳ ಜಾರಿಗೆ ವಿಧಿಸಲಾಗಿದ್ದ ಗಡುವಿನ ಕೊನೆಯ ನಿಮಿಷದಲ್ಲಿ ಟ್ರಂಪ್ ತೆರಿಗೆ ಏರಿಕೆ ತಡೆಯ ನಿರ್ಧಾರ ಕೈಗೊಂಡಿದ್ದಾರೆ.
ಕೆನಡಾ, ಮೆಕ್ಸಿಕೋ ರಾಷ್ಟ್ರಗಳ ನಾಯಕರ ನಡುವಿನ ಸುದೀರ್ಘ ದೂರವಾಣಿ ಸಂಭಾಷಣೆಯ ನಂತರ, ಮೆಕ್ಸಿಕನ್ ಅಧ್ಯಕ್ಷೆ ಕ್ಲೌಡಿಯಾ ಶೀನ್‌ಬಾಮ್ ಯುಎಸ್-ಮೆಕ್ಸಿಕೋ ಗಡಿಗೆ 10,000 ರಾಷ್ಟ್ರೀಯ ಗಾರ್ಡ್ ಪಡೆಗಳನ್ನು ಕಳುಹಿಸಲು ಬದ್ಧರಾದ ನಂತರ, ಟ್ರಂಪ್ ಟ್ರೇಡ್ ವಾರ್ ವಿರಾಮಕ್ಕೆ ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
"ನಮ್ಮ ಎರಡೂ ದೇಶಗಳ ನಡುವೆ 'ಒಪ್ಪಂದ' ಸಾಧಿಸಲು ನಾವು ಪ್ರಯತ್ನಿಸುತ್ತಿರುವಾಗ, ಮೆಕ್ಸಿಕೋ ಅಧ್ಯಕ್ಷರಾದ ಶೀನ್‌ಬಾಮ್ ಅವರೊಂದಿಗೆ ಮಾತುಕತೆಗಳಲ್ಲಿ ಭಾಗವಹಿಸಲು ನಾನು ಎದುರು ನೋಡುತ್ತಿದ್ದೇನೆ" ಎಂದು ಟ್ರಂಪ್ ಟ್ರೂತ್ ಸೋಶಿಯಲ್‌ನಲ್ಲಿ ಬರೆದಿದ್ದಾರೆ.
ಗಡಿ ಕ್ರಮಗಳ ಪ್ಯಾಕೇಜ್‌ನ ಭಾಗವಾಗಿ, ಟ್ರೂಡೊ "ಸಂಘಟಿತ ಅಪರಾಧ ಮತ್ತು ಫೆಂಟನಿಲ್" ಗೆ ಸಂಬಂಧಿಸಿದ C$200 ಮಿಲಿಯನ್ ($138 ಮಿಲಿಯನ್) ಹಣವನ್ನು ಒದಗಿಸುವುದಾಗಿ ಮತ್ತು "ಫೆಂಟನಿಲ್ ಸಾರ್" ನ್ನು ನೇಮಿಸುವುದಾಗಿ ಹೇಳಿದ್ದಾರೆ. ಒಟ್ಟಾವಾ ಕಾರ್ಟೆಲ್‌ಗಳನ್ನು ಭಯೋತ್ಪಾದಕ ಸಂಘಟನೆಗಳೆಂದು ಪಟ್ಟಿ ಮಾಡುತ್ತದೆ ಮತ್ತು ಸಂಘಟಿತ ಅಪರಾಧ, ಫೆಂಟನಿಲ್ ಮತ್ತು ಹಣ ವರ್ಗಾವಣೆಯನ್ನು ಎದುರಿಸಲು "ಕೆನಡಾ-ಯುಎಸ್ ಜಂಟಿ ಸ್ಟ್ರೈಕ್ ಫೋರ್ಸ್" ನ್ನು ಪ್ರಾರಂಭಿಸುತ್ತದೆ ಎಂಬ ಭರವಸೆ ನೀಡಿದ್ದಾರೆ.
"ಕೆನಡಾದೊಂದಿಗೆ ಅಂತಿಮ ಆರ್ಥಿಕ ಒಪ್ಪಂದವನ್ನು ರಚಿಸಬಹುದೇ ಅಥವಾ ಇಲ್ಲವೇ ಎಂಬುದನ್ನು ನೋಡಲು ಶನಿವಾರ ಘೋಷಿಸಲಾದ ಸುಂಕಗಳನ್ನು 30 ದಿನಗಳ ಅವಧಿಗೆ ತಡೆಹಿಡಿಯಲಾಗಿದೆ" ಎಂದು ಟ್ರಂಪ್ ತಮ್ಮ ಟ್ರುತ್ ಸೋಶಿಯಲ್ ಪ್ಲಾಟ್‌ಫಾರ್ಮ್‌ನಲ್ಲಿ ಹೇಳಿದ್ದಾರೆ. ಬೀಜಿಂಗ್ ಮೇಲೆ ಸುಂಕಗಳ ಬೆದರಿಕೆ ಇರುವುದರಿಂದ ಅಮೆರಿಕ ಅಧ್ಯಕ್ಷರು ಮುಂದಿನ ದಿನಗಳಲ್ಲಿ ಚೀನಾದ ಕ್ಸಿ ಜಿನ್‌ಪಿಂಗ್ ಅವರೊಂದಿಗೂ ಮಾತನಾಡಲಿದ್ದಾರೆ.
Advertisement