
ಪ್ಯಾರಿಸ್: ಫ್ರಾನ್ಸ್ ದೇಶ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ದಕ್ಷಿಣ ಫ್ರಾನ್ಸ್‌ನ ಮಾರ್ಸಿಲ್ಲೆಗೆ ಆಗಮಿಸಿ, ಬಂದರು ನಗರದಲ್ಲಿ ಸ್ವಾತಂತ್ರ್ಯ ಹೋರಾಟಗಾರ ವಿ ಡಿ ಸಾವರ್ಕರ್ ಅವರ ಸ್ಮರಣಾರ್ಥ ಗೌರವ ಸಲ್ಲಿಸಿದರು.
ಮಾರ್ಸಿಲ್ಲೆಯಲ್ಲಿ ಬಂದಿಳಿದೆ. ಭಾರತದ ಸ್ವಾತಂತ್ರ್ಯದ ಅನ್ವೇಷಣೆಯಲ್ಲಿ, ಈ ನಗರವು ವಿಶೇಷ ಮಹತ್ವವನ್ನು ಹೊಂದಿದೆ. ಮಹಾನ್ ವೀರ್ ಸಾವರ್ಕರ್ ಧೈರ್ಯಶಾಲಿಯಾಗಿ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದ್ದು ಇಲ್ಲಿಯೇ ಎಂದು ಪ್ರಧಾನಿ ಮೋದಿ ಕಳೆದ ರಾತ್ರಿ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಸಾವರ್ಕರ್ ಅವರನ್ನು ಬ್ರಿಟಿಷ್ ಕಸ್ಟಡಿಗೆ ಹಸ್ತಾಂತರಿಸಬಾರದು ಎಂದು ಒತ್ತಾಯಿಸಿದ್ದ ಅಂದಿನ ಮಾರ್ಸಿಲ್ಲೆಯ ಜನರು ಮತ್ತು ಆ ಕಾಲದ ಫ್ರೆಂಚ್ ಕಾರ್ಯಕರ್ತರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ವೀರ್ ಸಾವರ್ಕರ್ ಅವರ ಶೌರ್ಯವು ಪೀಳಿಗೆಗೆ ಸ್ಫೂರ್ತಿ ನೀಡುತ್ತಲೇ ಇದೆ! ಎಂದು ಬರೆದಿದ್ದಾರೆ. ಮಾರ್ಸಿಲ್ಲೆಗೆ ಆಗಮಿಸಿದ ಪ್ರಧಾನಿಗೆ ಭಾರತೀಯ ವಲಸಿಗರಿಂದ ಆತ್ಮೀಯ ಸ್ವಾಗತ ದೊರೆಯಿತು.
ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ಮತ್ತು ನಾನು ಸ್ವಲ್ಪ ಸಮಯದ ಹಿಂದೆ ಮಾರ್ಸಿಲ್ಲೆ ತಲುಪಿದೆವು. ಈ ಭೇಟಿಯು ಭಾರತ ಮತ್ತು ಫ್ರಾನ್ಸ್ ನ್ನು ಮತ್ತಷ್ಟು ಸಂಪರ್ಕಿಸುವ ಗುರಿಯನ್ನು ಹೊಂದಿರುವ ಪ್ರಮುಖ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಲಿದೆ. ಉದ್ಘಾಟನೆಯಾಗುತ್ತಿರುವ ಭಾರತೀಯ ದೂತಾವಾಸ ಕಚೇರಿಯು ಜನರ ಮಧ್ಯೆ ಸಂಪರ್ಕವನ್ನು ಹೆಚ್ಚಿಸುತ್ತದೆ. ಮೊದಲ ಮತ್ತು ಎರಡನೆಯ ಮಹಾಯುದ್ಧಗಳಲ್ಲಿ ಹುತಾತ್ಮರಾದ ಭಾರತೀಯ ಸೈನಿಕರಿಗೆ ನಾನು ಗೌರವ ಸಲ್ಲಿಸುತ್ತೇನೆ ಎಂದು ಪ್ರಧಾನ ಮಂತ್ರಿಗಳು ಬರೆದುಕೊಂಡಿದ್ದಾರೆ.
ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯಲ್ಲಿ, ಸ್ವಾತಂತ್ರ್ಯ ಹೋರಾಟಗಾರ ವಿನಾಯಕ ದಾಮೋದರ್ ಸಾವರ್ಕರ್ ಅವರನ್ನು ಜುಲೈ 8, 1910 ರಂದು ವಿಚಾರಣೆಗೆ ಒಳಪಡಿಸಲು ಬ್ರಿಟಿಷ್ ಹಡಗಿನ ಮೊರಿಯಾದಲ್ಲಿ ಭಾರತಕ್ಕೆ ಸಾಗಿಸುತ್ತಿದ್ದಾಗ ಸೆರೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರು.
ಅವರು ಹಡಗಿನ ದ್ವಾರದಿಂದ ಜಾರಿಬಿದ್ದು ದಡಕ್ಕೆ ಈಜುವಲ್ಲಿ ಯಶಸ್ವಿಯಾದರು. ಅಲ್ಲಿ ಫ್ರೆಂಚ್ ಅಧಿಕಾರಿಗಳಿಂದ ಸೆರೆಹಿಡಿಯಲ್ಪಟ್ಟರು. ನಂತರ ಬ್ರಿಟಿಷ್ ಹಡಗು ಅಧಿಕಾರಿಗಳ ವಶಕ್ಕೆ ಒಪ್ಪಿಸಲ್ಪಟ್ಟರು. ಸಾವರ್ಕರ್ ಅವರಿಗೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಸೆಲ್ಯುಲಾರ್ ಜೈಲಿನಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿದ್ದರಿಂದ ಇದು ಪ್ರಮುಖ ರಾಜತಾಂತ್ರಿಕ ವಿವಾದಕ್ಕೆ ಕಾರಣವಾಯಿತು.
ಪ್ರಧಾನಿ ಮೋದಿ ಅವರು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ಭಾರತದ ಹೊಸ ಕಾನ್ಸುಲೇಟ್ ಜನರಲ್ ನ್ನು ಉದ್ಘಾಟಿಸಲು ಮಾರ್ಸಿಲ್ಲೆಯಲ್ಲಿದ್ದಾರೆ.
ವಿಶ್ವ ಯುದ್ಧಗಳಲ್ಲಿ ಹೋರಾಡುತ್ತಾ ಹುತಾತ್ಮರಾದ ಭಾರತೀಯ ಸೈನಿಕರ ತ್ಯಾಗವನ್ನು ಗೌರವಿಸಲು ಮಜಾರ್ಗ್ಸ್ ಯುದ್ಧ ಸ್ಮಶಾನಕ್ಕೆ ಭೇಟಿ ನೀಡುವುದು ಸೇರಿದಂತೆ ಇಂದು ಹಲವು ಕಾರ್ಯಕ್ರಮಗಳನ್ನು ಯೋಜಿಸಿದ್ದಾರೆ. ಅಂತಾರಾಷ್ಟ್ರೀಯ ಪರಮಾಣು ಸಮ್ಮಿಳನ ಸಹಯೋಗವಾದ ಅಂತರರಾಷ್ಟ್ರೀಯ ಥರ್ಮೋನ್ಯೂಕ್ಲಿಯರ್ ಪ್ರಾಯೋಗಿಕ ರಿಯಾಕ್ಟರ್ (ITER) ಯೋಜನೆಯ ಪ್ರವಾಸವೂ ಅವರ ಕಾರ್ಯಸೂಚಿಯಲ್ಲಿದೆ.
ನಿನ್ನೆ ಪ್ರಧಾನ ಮಂತ್ರಿಗಳು AI ಕ್ರಿಯಾ ಶೃಂಗಸಭೆ ಮತ್ತು 14 ನೇ ಭಾರತ-ಫ್ರಾನ್ಸ್ ಸಿಇಒಗಳ ವೇದಿಕೆಯನ್ನು ಉದ್ದೇಶಿಸಿ ಮಾತನಾಡಿದ್ದರು.
Advertisement