
ವಾಷಿಂಗ್ಟನ್: ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿಶೇಷ ಆತಿಥ್ಯ ನೀಡಿದ್ದಾರೆ. ಶ್ವೇತಭವನಕ್ಕೆ ಭೇಟಿ ನೀಡಿದ ವೇಳೆ ಪ್ರಧಾನಿ ಮೋದಿಗೆ ಟ್ರಂಪ್ ವಿಶೇಷ ಗಿಫ್ಟ್ ಆಗಿ Our Journey Together ಎಂಬ ಪುಸ್ತಕವನ್ನು ನೀಡಿದ್ದಾರೆ.
ಶ್ವೇತಭವನದಲ್ಲಿ ಪ್ರಧಾನಿ ಮೋದಿಯನ್ನು ಆತ್ಮೀಯ ಅಪ್ಪುಗೆಯೊಂದಿಗೆ ಸ್ವಾಗತಿಸಿದ ಟ್ರಂಪ್, "ನಾವು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಂಡೆವು" ಎಂದು ಹೇಳಿದರು.
ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಮೋದಿಗೆ ಉಡುಗೊರೆಯಾಗಿ ನೀಡಿದ 'ಅವರ್ ಜರ್ನಿ ಟುಗೆದರ್' ಪುಸ್ತಕದಲ್ಲಿ "ಮಿಸ್ಟರ್ ಪ್ರೈಮ್ ಮಿನಿಸ್ಟರ್, ಯು ಆರ್ ಗ್ರೇಟ್" ಎಂದು ಟ್ರಂಪ್ ಬರೆದಿದ್ದಾರೆ.
ಟ್ರಂಪ್ ಅವರ ಮೊದಲ ಅವಧಿಯನ್ನು ವಿವರಿಸುವ ಈ ಫೋಟೋ ಬುಕ್, ಸೆಪ್ಟೆಂಬರ್ 2019ರಲ್ಲಿ ಪ್ರಧಾನಿ ಮೋದಿ ಅವರು ಅಮೆರಿಕಕ್ಕೆ ಭೇಟಿ ನೀಡಿದಾಗ ನಡೆದ ಹೌಡಿ ಮೋದಿ ಕಾರ್ಯಕ್ರಮ ಸೇರಿ, ಅಹಮದಾಬಾದ್‌ನ ನಮಸ್ತೆ ಟ್ರಂಪ್ ಫೋಟೋಗಳು ಸೇರಿ ಅನೇಕ ಫೋಟೋಗಳನ್ನು ಈ ಪುಸ್ತಕ ಒಳಗೊಂಡಿದೆ. ಈ ಪುಸ್ತಕ ಕೊಡುವ ಮುನ್ನ ಸಹಿ ಹಾಕಿದ ಟ್ರಂಪ್ ಮಿಸ್ಟರ್ ಪ್ರೈಮ್ ಮಿನಿಸ್ಟರ್ ಯೂ ಆರ್ ಗ್ರೇಟ್ ಎಂದು ಬರೆದಿದ್ದು ಕೂಡ ಈಗ ಭಾರೀ ವೈರಲ್ ಆಗುತ್ತಿದೆ. ಅದಲ್ಲದೇ ಈ ವೇಳೆ ನಮಸ್ತೆ ಟ್ರಂಪ್ ರ‍್ಯಾಲಿಯ ಫೋಟೋಗಳನ್ನು, ಮೆಲಾನಿಯಾ ಟ್ರಂಪ್ ಜೊತೆ ತಾಜಮಹಲ್ ಮುಂದೆ ತೆಗೆಸಿಕೊಂಡ ಫೋಟೋಗಳನ್ನು ಸಹ ಪ್ರದರ್ಶಿಸಿದರು.
"ನನ್ನ ಸ್ನೇಹಿತ ಪ್ರಧಾನಿ ಮೋದಿ" ಅವರನ್ನು ಸ್ವಾಗತಿಸಲು ನಾನು ರೋಮಾಂಚನಗೊಂಡಿದ್ದೇನೆ. ಅವರು ವಿಶೇಷ ವ್ಯಕ್ತಿ ಎಂದು ಟ್ರಂಪ್ ಹೇಳಿದರು.
2008 ರ ಭಯೋತ್ಪಾದಕ ದಾಳಿಯ ಆರೋಪಿ ತಹವ್ವೂರ್ ರಾಣಾನನ್ನು ಗಡಿಪಾರು ಮಾಡುವುದಾಗಿ ಟ್ರಂಪ್ ಘೋಷಿಸಿದ್ದಲ್ಲದೆ, ಮೂಲಭೂತವಾದಿ ಇಸ್ಲಾಮಿಕ್ ಭಯೋತ್ಪಾದನೆಯ ವಿರುದ್ಧ ಒಟ್ಟಾಗಿ ಹೋರಾಡುವಲ್ಲಿ ಭಾರತದೊಂದಿಗೆ ಕೈಜೋಡಿಸುವುದಾಗಿ ಹೇಳಿದರು.
ಮೋದಿ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟ್ರಂಪ್, ಅಮೆರಿಕವು ಹಿಂಸಾತ್ಮಕ ವ್ಯಕ್ತಿಯನ್ನು ಭಾರತಕ್ಕೆ ಹಸ್ತಾಂತರಿಸುತ್ತಿದೆ ಮತ್ತು ಹೆಚ್ಚಿನ ಕ್ರಮ ಕೈಗೊಳ್ಳುವ ಭರವಸೆ ನೀಡಿದೆ ಎಂದು ಹೇಳಿದರು.
ಮೋದಿ ಅವರನ್ನು ತಮ್ಮ ದೀರ್ಘಕಾಲದ ಸ್ನೇಹಿತ ಎಂದು ಬಣ್ಣಿಸಿರುವ ಟ್ರಂಪ್, "ಅವರು ನನಗಿಂತ ಹೆಚ್ಚು ಕಠಿಣ ಸಮಾಲೋಚಕರು, ಮತ್ತು ಅವರು ನನಗಿಂತ ಉತ್ತಮ ಸಮಾಲೋಚಕರು" ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹೇಳಿದರು.
"ಎಲ್ಲರೂ ಅವರ ಬಗ್ಗೆ ಮಾತನಾಡುತ್ತಾರೆ. ಅವರು ನಿಜವಾಗಿಯೂ ಅದ್ಭುತ ಕೆಲಸ ಮಾಡುತ್ತಿದ್ದಾರೆ. ಅವರು ಒಬ್ಬ ಮಹಾನ್ ನಾಯಕ" ಎಂದು ಟ್ರಂಪ್, ಮೋದಿಯನ್ನು ಶ್ಲಾಘಿಸಿದರು.
Advertisement