
ವಾಷಿಂಗ್ಟನ್: ಭಾರತದ ಚುನಾವಣೆಗೆ 21 ಮಿಲಿಯನ್ ಡಾಲರ್ ಅಮೆರಿಕ ಸರ್ಕಾರದ ನೆರವನ್ನು ಮತ್ತೆ ಪ್ರಶ್ನಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅದನ್ನು ಕಿಕ್ ಬ್ಯಾಕ್ ಯೋಜನೆ ಎಂದು ಕರೆದಿದ್ದಾರೆ. ಬಾಂಗ್ಲಾದೇಶದಲ್ಲಿ ರಾಜಕೀಯ ಸ್ಥಿರತೆ ಬಲವರ್ಧನೆಗಾಗಿ ರೂ.21 ಮಿಲಿಯನ್ ಡಾಲರ್ ಮತ್ತು ನೇಪಾಳಕ್ಕೆ ಜೀವ ವೈವಿಧ್ಯತೆಗಾಗಿ ರೂ.19 ಮಿಲಿಯನ್ ಡಾಲರ್ ನೆರವಿನ ಬಗ್ಗೆಯೂ ಮಾತನಾಡಿದ್ದಾರೆ.
ರಿಪಬ್ಲಿಕನ್ ಗವರ್ನರ್ಸ್ ಅಸೋಸಿಯೇಷನ್ (RGA) ಸಭೆಯನ್ನುದ್ದೇಶಿಸಿ ಮಾತನಾಡಿದ ಟ್ರಂಪ್, ಭಾರತದಲ್ಲಿ ಚುನಾವಣೆಗಾಗಿ ರೂ. 21 ಮಿಲಿಯನ್ ಡಾಲರ್ ಕಳುಹಿಸಲಾಗಿದೆ. ಭಾರತದಲ್ಲಿನ ಚುನಾವಣೆ ಬಗ್ಗೆ ನಾವೇಕೆ ತಲೆಕೆಡಿಸಿಕೊಳ್ಳಬೇಕು. ನಮ್ಮಲ್ಲಿಯೇ ಸಾಕಷ್ಟು ಸಮಸ್ಯೆಯಿದೆ. ನಮಗೆ ನಮ್ಮದೇ ಮತದಾನ ಬೇಕು ಅಲ್ಲವೇ? ಇಷ್ಟೆಲ್ಲಾ ಹಣ ಭಾರತಕ್ಕೆ ಹೋಗಿದೆ ಎಂಬುದನ್ನು ನೀವು ಊಹಿಸಬಲ್ಲಿರಾ? ಅದನ್ನು ಪಡೆದಾಗ ಅವರು ಯಾವ ರೀತಿ ಯೋಚಿಸುತ್ತಾರೆ ಎಂಬುದು ನನಗೆ ಆಶ್ಚರ್ಯವನ್ನುಂಟು ಮಾಡಿತು. ಈಗ ಇದು ಕಿಕ್‌ಬ್ಯಾಕ್ ಯೋಜನೆಯಾಗಿದೆ. ಅದನ್ನು ಅವರು ಪಡೆದು ಖರ್ಚು ಮಾಡುವುದಿಲ್ಲ. ಅದನ್ನು ಜನರಿಗೆ ಕಳುಹಿಸಿದ್ದಾರೆ ಎಂದರು.
ಅನೇಕ ಸಂದರ್ಭಗಳಲ್ಲಿ ಈ ಪ್ರಕರಣ ಕುರಿತು ಹೇಳಿದ್ದೇನೆ. ಎಲ್ಲಾ ವೇಳೆಯಲ್ಲಿಯೂ ನಾವು ಏನು ಮಾತನಾಡುತ್ತಿದ್ದೇವೆ ಎಂಬುದರ ಬಗ್ಗೆ ಗೊತ್ತಿರುವುದಿಲ್ಲ. ಅಂದರೆ ಭಾರತದಲ್ಲಿ ಏನಾಗುತ್ತಿದೆ ಎಂದು ಯಾರಿಗೂ ತಿಳಿದಿಲ್ಲ. ಏಕೆಂದರೆ ಅಲ್ಲಿ ಕಿಕ್‌ಬ್ಯಾಕ್ ಪಡೆಯಲಾಗಿದೆ ಎಂದು ಆರೋಪಿಸಿದ ಟ್ರಂಪ್, ಬಾಂಗ್ಲಾದೇಶದಲ್ಲಿ ರಾಜಕೀಯ ಸ್ಥಿರತೆ ಬಲವರ್ಧನೆಗಾಗಿ 29 ಮಿಲಿಯನ್ ಕೊಡುತ್ತಾರೆ ಅಂದ್ರೆ ಏನರ್ಥ? ಎಂದು ಕಿಡಿಕಾರಿದರು.
ನೇಪಾಳಕ್ಕೆ ಜೀವ ವೈವಿಧ್ಯತೆಗಾಗಿ $19 ಮಿಲಿಯನ್, ಏಷ್ಯಾದಲ್ಲಿ ಕಲಿಕೆಯ ಫಲಿತಾಂಶಗಳನ್ನು ಸುಧಾರಿಸಲು $47 ಮಿಲಿಯನ್ ನೀಡಲಾಗಿದೆ. ನಮ್ಮಲ್ಲಿಯೇ ಸಾಕಷ್ಟು ಸಮಸ್ಯೆಯಿದೆ. ಇವೆಲ್ಲವನ್ನೂ ಅಂತ್ಯಗೊಳಿಸಬೇಕಾಗಿದೆ. ಈ ನೆರವು ನೀಡಿದ್ದವರನ್ನು ನಾವು ಮನೆಗೆ ಕಳುಹಿಸಿದ್ದೇವೆ. ಇನ್ನೂ ಅನೇಕ ಭಯಾನಕ ವಿಚಾರಗಳಿದ್ದು, ವಾಸ್ತವವಾಗಿ ಅಸಹ್ಯಕರವಾಗಿವೆ. ಆದರೆ ಅವೆಲ್ಲಾವನ್ನೂ ಹೇಳಲು ಈಗ ಆಗದು. ಆದರೆ ಈ ಎಲ್ಲಾ ಸಮಸ್ಯೆಗಳಿಗೆ ಈಗ ಅಂತ್ಯ ಹಾಡಿದ್ದೇವೆ ಎಂದರು.
ಅಮೆರಿಕ ಅಧ್ಯಕ್ಷರ ಹೇಳಿಕೆಗೆ ಪ್ರತಿಕ್ರಿಯಿಸಿದ ಭಾರತೀಯ ಜನತಾ ಪಕ್ಷದ ನಾಯಕ ಅಮಿತ್ ಮಾಳವಿಯಾ, ಪರೋಕ್ಷವಾಗಿ ಕಾಂಗ್ರೆಸ್ ಇದರ ಲಾಭ ಪಡೆದಿರುವುದಾಗಿ ಹೇಳಿದ್ದಾರೆ. ಕಿಕ್ ಬ್ಯಾಕ್ ಆರೋಪದಲ್ಲಿ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷ ಫಲಾನುಭವಿಯಾಗಿದ್ದರೆ ತನಿಖೆ ನಡೆಸಬೇಕು ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಪ್ರದೀಪ್ ಬಂಡರಿಯಾ ಒತ್ತಾಯಿಸಿದ್ದಾರೆ.
Advertisement