
ವಾಷಿಂಗ್ಟನ್: ಭಾರತೀಯ ಮೂಲದ ಅಮೆರಿಕನ್ ಕಾಶ್ ಪಟೇಲ್ ಅವರು ನಿನ್ನೆ ಶುಕ್ರವಾರ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (FBI) ನ ಒಂಬತ್ತನೇ ನಿರ್ದೇಶಕರಾಗಿ ಭಗವದ್ಗೀತೆಯ ಮೇಲೆ ಪ್ರಮಾಣ ವಚನ ಮಾಡುವ ಮೂಲಕ ಅಧಿಕಾರ ಸ್ವೀಕರಿಸಿದರು.
ಕಾಶ್ ಪಟೇಲ್ ಪ್ರಮಾಣ ವಚನ ಸ್ವೀಕರಿಸುವಾಗ ಅವರ ಗೆಳತಿ ಮತ್ತು ಕುಟುಂಬ ಸದಸ್ಯರು ಅವರ ಪಕ್ಕದಲ್ಲಿ ನಿಂತಿದ್ದರು ಮತ್ತು ಇತರ ಕುಟುಂಬ ಸದಸ್ಯರು ಮುಂದಿನ ಸಾಲಿನಲ್ಲಿ ಕುಳಿತಿದ್ದರು.
ಕ್ರಿಸ್ಟೋಫರ್ ವ್ರೇ ಅವರ ನಂತರ ಎಫ್‌ಬಿಐನ 9ನೇ ನಿರ್ದೇಶಕರಾಗಿ ಯುಎಸ್ ಸೆನೆಟ್ ದೃಢಪಡಿಸಿದ ನಂತರ ಕಾಶ್ ಪಟೇಲ್ ಅವರನ್ನು ಐಸೆನ್‌ಹೋವರ್ ಕಾರ್ಯನಿರ್ವಾಹಕ ಕಚೇರಿ ಕಟ್ಟಡದಲ್ಲಿ ಯುಎಸ್ ಅಟಾರ್ನಿ ಜನರಲ್ ಪ್ಯಾಮ್ ಬೋಂಡಿ ಅವರು ಪ್ರಮಾಣ ವಚನ ಬೋಧಿಸಿದರು.
ಪ್ರಮಾಣ ವಚನ ಸ್ವೀಕರಿಸಿದ ನಂತರ, ಕಾಶ್ ಪಟೇಲ್ ಅವರು ಮಾತನಾಡುತ್ತಾ, ಅಮೇರಿಕನ್ನರ ಕನಸಿನಲ್ಲಿ ಜೀವಿಸುತ್ತಿದ್ದೇನೆ. ಮೊದಲ ತಲೆಮಾರಿನ ಭಾರತೀಯರು ಭೂಮಿಯ ಮೇಲಿನ ಶ್ರೇಷ್ಠ ರಾಷ್ಟ್ರದ ಕಾನೂನು ಜಾರಿ ಸಂಸ್ಥೆಯನ್ನು ಮುನ್ನಡೆಸಲಿದ್ದಾರೆ, ಇಂತಹ ಅವಕಾಶ ನೀವು ಬೇರೆ ಎಲ್ಲಿಯೂ ನೋಡಲು ಸಾಧ್ಯವಿಲ್ಲ ಎಂದರು.
ನಾನು ಅಮೇರಿಕನ್ನರ ಕನಸಿನಲ್ಲಿ ಜೀವಿಸುತ್ತಿದ್ದೇನೆ, ಅಮೆರಿಕನ್ನರ ಕನಸು ಸತ್ತುಹೋಗಿದೆ ಎಂದು ಯಾರಾದರೂ ಭಾವಿಸುತ್ತಿದ್ದರೆ ಇಲ್ಲಿ ನೋಡಿ. ನೀವು ಭೂಮಿಯ ಮೇಲಿನ ಶ್ರೇಷ್ಠ ರಾಷ್ಟ್ರದ ಕಾನೂನು ಜಾರಿ ಸಂಸ್ಥೆಯನ್ನು ಮುನ್ನಡೆಸಲಿರುವ ಮೊದಲ ತಲೆಮಾರಿನ ಭಾರತೀಯರೊಂದಿಗೆ ಮಾತನಾಡುತ್ತಿದ್ದೀರಿ. ಅದು ಬೇರೆಲ್ಲಿಯೂ ಸಂಭವಿಸಲು ಸಾಧ್ಯವಿಲ್ಲ ಎಂದು ತಾವು ಎಫ್ ಬಿಐ ನಿರ್ದೇಶಕರಾದ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡರು.
ಎಫ್‌ಬಿಐ ಒಳಗೆ ಹೊಣೆಗಾರಿಕೆಯನ್ನು ಸರಿಯಾಗಿ ನಿರ್ವಹಿಸುವ ಬದ್ಧತೆಯನ್ನು ಪುನರುಚ್ಛರಿಸಿದರು.ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಾಶ್ ಪೇಟ್ ಅವರಿಗೆ ತಮ್ಮ ಬಲವಾದ ಬೆಂಬಲವನ್ನು ವ್ಯಕ್ತಪಡಿಸಿ ಕಾಶ್ ಪಟೇಲ್ ಅತ್ಯಂತ ಕಠಿಣ, ಬಲಿಷ್ಠ ವ್ಯಕ್ತಿ ಎಂದು ಶ್ಲಾಘಿಸಿದರು.
ಕಾಶ್ ಪಟೇಲ್ ಅವರು ಎಫ್‌ಬಿಐ ನಿರ್ದೇಶಕರಾಗಿ ಪ್ರಮಾಣವಚನ ಸ್ವೀಕರಿಸಿದ ಬಗ್ಗೆ ಮಾತನಾಡಿದ ಡೊನಾಲ್ಡ್ ಟ್ರಂಪ್, ನಾನು ಕಾಶ್ ಅವರನ್ನು ಪ್ರೀತಿಸಲು ಮತ್ತು ಅವರನ್ನು ನೇಮಿಸಲು ಬಯಸಿದ್ದಕ್ಕೆ ಒಂದು ಕಾರಣವೆಂದರೆ ಏಜೆಂಟರು ಅವರ ಬಗ್ಗೆ ಹೊಂದಿದ್ದ ಗೌರವ. ಅವರು ಆ ಸ್ಥಾನದಲ್ಲಿ ಅತ್ಯುತ್ತಮ ವ್ಯಕ್ತಿಯಾಗಿ ಉಳಿಯುತ್ತಾರೆ ಎಂಬ ನಂಬಿಕೆ ನನಗಿದೆ ಎಂದರು.
Advertisement