
ಟೆಲ್ ಅವಿವ್: ತಾತ್ಕಾಲಿಕ ಕದನ ವಿರಾಮ ಒಪ್ಪಂದದ ಭಾಗವಾಗಿ ಹಮಾಸ್ ಇಸ್ರೇಲ್ ನ ಒತ್ತೆಯಾಳುಗಳನ್ನು ಬಿಡುಗಡೆ ಮಾಡುತ್ತಿದ್ದು, ಇಂದು (ಫೆ.22 ರಂದು) ಒಂದಷ್ಟು ಒತ್ತೆಯಾಳುಗಳು ಬಿಡುಗಡೆಯಾಗಿದ್ದಾರೆ.
ಬಿಡುಗಡೆ ವೇಳೆ ಒತ್ತೆಯಾಳುಗಳ ಪೈಕಿ ಓರ್ವ ಹಮಾಸ್ ಉಗ್ರನ ಹಣೆಗೆ ಮುತ್ತಿಕ್ಕಿರುವ ವಿಡಿಯೋ ಈಗ ವೈರಲ್ ಆಗತೊಡಗಿದೆ.
ವೇದಿಕೆಯಲ್ಲಿ ಕೈ ಬೀಸುತ್ತಾ ಇಬ್ಬರು ಹಮಾಸ್ ಸದಸ್ಯರ ಹಣೆಗೆ ಮುತ್ತಿಟ್ಟ ಇಸ್ರೇಲಿ ಒತ್ತೆಯಾಳನ್ನು ಓಮರ್ ಶೆಮ್ ಟೋವ್ ಎಂದು ಗುರುತಿಸಲಾಗಿದೆ.
ಕೊನೆಯ ವಿನಿಮಯದಲ್ಲಿ ಹಮಾಸ್ 3 ಇಸ್ರೇಲಿ ಒತ್ತೆಯಾಳನ್ನು ರೆಡ್ ಕ್ರಾಸ್‌ಗೆ ಹಸ್ತಾಂತರಿಸಿದೆ. ಮೂವರು ಇಸ್ರೇಲಿ ಒತ್ತೆಯಾಳಾಗಿದ್ದ ಓಮರ್ ವೆಂಕರ್ಟ್, ಓಮರ್ ಶೆಮ್ ಟೋವ್ ಮತ್ತು ಎಲಿಯಾ ಕೊಹೆನ್ ಬಿಡುಗಡೆಯಾಗಿರುವ ಒತ್ತೆಯಾಳುಗಳಾಗಿದ್ದಾರೆ.
ಹಮಾಸ್ ಒತ್ತೆಯಾಳುಗಳನ್ನು ಹೊರಗೆ ಕರೆತಂದು ನುಸೇರಾತ್ ಪಟ್ಟಣದಲ್ಲಿ ವೇದಿಕೆಯ ಮೇಲೆ ಮೆರವಣಿಗೆ ಮಾಡಿದರು. ರೆಡ್ ಕ್ರಾಸ್ ಅಧಿಕಾರಿಗಳಿಗೆ ಹಸ್ತಾಂತರಿಸುವ ಮೊದಲು ಅವರು ಬಿಡುಗಡೆ ಪ್ರಮಾಣಪತ್ರಗಳನ್ನು ಹೊಂದಿದ್ದರು.
ಪ್ರಕ್ರಿಯೆಗಳ ಬಳಿಕ ರೆಡ್ ಕ್ರಾಸ್ ಬೆಂಗಾವಲು ಪಡೆ ಒತ್ತೆಯಾಳುಗಳನ್ನು ಕರೆದೊಯ್ದಿದೆ. ದಿ ಟೈಮ್ಸ್ ಆಫ್ ಇಸ್ರೇಲ್ ಪ್ರಕಾರ, ಓಮರ್‌ನ ತಂದೆ ಮಲ್ಕಿ ಶೆಮ್ ಟೋವ್, ಬಿಡುಗಡೆಯ ಸಮಯದಲ್ಲಿ ತನ್ನ ಮಗನ ಸಂತೋಷದ ವರ್ತನೆ ಅವನ ವ್ಯಕ್ತಿತ್ವವನ್ನು ತೋರುತ್ತದೆ ಎಂದು ಹೇಳಿದ್ದಾರೆ.
"ಆತ ಹೇಗಿರುತ್ತಾನೆಂದು ನಮಗೆ ತಿಳಿದಿರಲಿಲ್ಲ. ಅವನು ಹೊರಬಂದು ಆತನ ನಗುವಿನ ಮೂಲಕ ನಮ್ಮೆಲ್ಲರನ್ನೂ ಅಚ್ಚರಿಗೊಳಿಸಿದ್ದಾನೆ ಎಂದು ಆತನ ತಂದೆ ಹೇಳಿದ್ದಾರೆ. ಆತನ ಸಕಾರಾತ್ಮಕ ವ್ಯಕ್ತಿತ್ವದಿಂದ ಆತ ಎಲ್ಲರೊಂದಿಗೆ ಚೆನ್ನಾಗಿ ಹೊಂದಿಕೊಳ್ಳುತ್ತಾನೆ ಎಂದು ಓಮರ್ ಶೆಮ್ ಟೋವ್ ತಂದೆ ಹೇಳಿದ್ದಾರೆ.
IDF ಪ್ರಕಾರ, ಬಿಡುಗಡೆಯಾದ ಒತ್ತೆಯಾಳುಗಳಾದ ಒಮರ್ ಶೆಮ್ ಟೋವ್, ಎಲಿಯಾ ಕೊಹೆನ್ ಮತ್ತು ಒಮರ್ ವೆಂಕರ್ಟ್ 505 ದಿನಗಳನ್ನು ಹಮಾಸ್ ಸೆರೆಯಲ್ಲಿ ಕಳೆದಿದ್ದಾರೆ ಮತ್ತು ಈಗ ಇಸ್ರೇಲ್ ಗೆ ಸುರಕ್ಷಿತವಾಗಿ ಬಂದಿದ್ದಾರೆ. ಬಂಧಮುಕ್ತ ಒತ್ತೆಯಾಳುಗಳನ್ನು ದೈಹಿಕ ಮತ್ತು ಮಾನಸಿಕ ತಪಾಸಣೆಗಾಗಿ IDF ಗೆ ಕರೆತರಲಾಗಿದೆ.
Advertisement