
ಢಾಕಾ: ದಕ್ಷಿಣ ಬಾಂಗ್ಲಾದೇಶದ ನಿವಾಸಿಗಳ ಗುಂಪೊಂದು ಸೋಮವಾರ (ಫೆ.24) ರಂದು ಅಲ್ಲಿನ ವಾಯುಪಡೆ ನೆಲೆಯ ಮೇಲೆ ದಾಳಿ ನಡೆಸಿದೆ.
ದಾಳಿಯ ಹಿನ್ನೆಲೆಯಲ್ಲಿ ರಕ್ಷಣೆಗಾಗಿ ಯೋಧರು ಗುಂಡು ಹಾರಿಸಿದ್ದಾರೆ. ಇದರಲ್ಲಿ ಕನಿಷ್ಠ ಒಬ್ಬರು ಸಾವನ್ನಪ್ಪಿದರು ಮತ್ತು ಹಲವಾರು ಮಂದಿ ಗಾಯಗೊಂಡರು ಎಂದು ಸ್ಥಳೀಯ ಮಾಧ್ಯಮ ವರದಿಗಳು ತಿಳಿಸಿವೆ.
"ಕಾಕ್ಸ್ ಬಜಾರ್‌ನಲ್ಲಿರುವ ವಾಯುಪಡೆ ನೆಲೆಯ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿದ್ದಾರೆ, ಈ ವೇಳೆ ಗುಂಡಿನ ದಾಳಿ ನಡೆದಿದ್ದು, ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದು, ಹಲವರಿಗೆ ಗಾಯಗಳಾಗಿವೆ ಎಂದು ಮಿಲಿಟರಿ ಹೇಳಿಕೆಯಲ್ಲಿ ಆರೋಪಿಸಿದೆ.
ಬಂಗಾಳಿ ಭಾಷೆಯ ಪ್ರೋಥೋಮ್ ಅಲೋ ಪತ್ರಿಕೆಯ ಪ್ರಕಾರ, ಮೋಟಾರ್‌ಬೈಕ್‌ನಲ್ಲಿದ್ದ ವ್ಯಕ್ತಿಯೊಬ್ಬ ಹೆಲ್ಮೆಟ್ ಧರಿಸದಿದ್ದಕ್ಕಾಗಿ ವಾಯುಪಡೆಯ ಸೈನಿಕರು ಆತನನ್ನು ತಡೆದಿದ್ದರ ಪರಿಣಾಮ ವಾಗ್ವಾದದ ನಡೆದಿತ್ತು. ಈ ಬಳಿಕ ಹಿಂಸಾಚಾರ ಭುಗಿಲೆದ್ದಿತು. ಆ ವ್ಯಕ್ತಿಯ ಸಂಬಂಧಿಕರು ಮತ್ತು ನೆರೆಹೊರೆಯವರು ಬಂದು ವಾಯುನೆಲೆಯ ಮೇಲೆ ದಾಳಿ ಮಾಡಲು ಪ್ರಾರಂಭಿಸಿದರು ಎಂದು ವರದಿ ತಿಳಿಸಿದೆ.
ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರ ನಡೆಸುತ್ತಿರುವ ಬಾಂಗ್ಲಾದೇಶ ಆಗಸ್ಟ್ ಆರಂಭದಲ್ಲಿ ವಿದ್ಯಾರ್ಥಿಗಳ ನೇತೃತ್ವದ ಸಾಮೂಹಿಕ ದಂಗೆಯಿಂದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಪದಚ್ಯುತಗೊಳಿಸಿದ ನಂತರ ಸುವ್ಯವಸ್ಥೆಯನ್ನು ಸ್ಥಾಪಿಸುವಲ್ಲಿ ಹಲವಾರು ಸವಾಲುಗಳನ್ನು ಎದುರಿಸಿದೆ. ಅಲ್ಲಿ ಉದ್ಭವಿಸಿರುವ ಜಂಗಲ್ ರಾಜ್ ಪರಿಸ್ಥಿತಿ ಕಳವಳಕಾರಿಯಾಗಿದೆ.
ಫೆಬ್ರವರಿ 8 ರಂದು ಮಧ್ಯಂತರ ಸರ್ಕಾರ "ಆಪರೇಷನ್ ಡೆವಿಲ್ ಹಂಟ್" ಎಂಬ ರಾಷ್ಟ್ರವ್ಯಾಪಿ ದಮನ ಕಾರ್ಯಾಚರಣೆಯನ್ನು ಪ್ರಾರಂಭಿಸಿತು ಮತ್ತು ದೇಶಾದ್ಯಂತ 8,000 ಕ್ಕೂ ಹೆಚ್ಚು ಜನರನ್ನು ಬಂಧಿಸಿತು. ಹಸೀನಾ ಅವರ ಅವಾಮಿ ಲೀಗ್ ಪಕ್ಷ ತಮ್ಮ ಬೆಂಬಲಿಗರನ್ನು ಬಂಧಿಸಿದ್ದಕ್ಕಾಗಿ ಸರ್ಕಾರವನ್ನು ದೂಷಿಸಿತ್ತು.
Advertisement