289 ಪ್ರಯಾಣಿಕರಿದ್ದ ವಿಮಾನದ ಟೈರ್ ರನ್‌ವೇಯಲ್ಲೇ ಸ್ಫೋಟ: ಪ್ರಯಾಣಿಕರು ಬದುಕುಳಿದ್ದಿದ್ದೇಗೆ? ವೀಡಿಯೊ ನೋಡಿ!
ಮೆಲ್ಬೋರ್ನ್ ವಿಮಾನ ನಿಲ್ದಾಣದಲ್ಲಿ ಭಾರೀ ದುರಂತವೊಂದು ತಪ್ಪಿಸಲಾಗಿದೆ. ಸುಮಾರು 300 ಮಂದಿ ಪ್ರಯಾಣಿಕರನ್ನು ಹೊತ್ತು ಅಬುಧಾಬಿಗೆ ತೆರಳುತ್ತಿದ್ದ ಎತಿಹಾದ್ ಏರ್‌ವೇಸ್ ವಿಮಾನದ ಎರಡು ಟೈರ್‌ಗಳು ಸ್ಫೋಟಗೊಂಡ ಹಿನ್ನೆಲೆಯಲ್ಲಿ ಟೇಕಾಫ್ ಆಗದಂತೆ ನಿಲ್ಲಿಸಬೇಕಾಯಿತು.
ಇಂದು ರಾತ್ರಿ 289 ಪ್ರಯಾಣಿಕರೊಂದಿಗೆ ಮೆಲ್ಬೋರ್ನ್‌ನಿಂದ ಅಬುಧಾಬಿಗೆ ಹೋಗುತ್ತಿದ್ದ EY 461 ವಿಮಾನದ ಟೈರ್‌ಗಳು ಟೇಕ್‌ಆಫ್ ಆಗುವ ಕೆಲವೇ ಕ್ಷಣಗಳ ಮೊದಲು ಸ್ಫೋಟಗೊಂಡಿದ್ದವು. ಮೆಲ್ಬೋರ್ನ್ ವಿಮಾನ ನಿಲ್ದಾಣದಲ್ಲಿ ತುರ್ತು ಸೇವೆಗಳು ಬೋಯಿಂಗ್ 787 ವಿಮಾನವನ್ನು ಸುತ್ತುವರೆದಿದ್ದು ಸುರಕ್ಷತಾ ಕ್ರಮವಾಗಿ ಲ್ಯಾಂಡಿಂಗ್ ಗೇರ್ ಮೇಲೆ ರಕ್ಷಣಾತ್ಮಕ ಫೋಮ್ ಅನ್ನು ಇರಿಸಿದವು.
ಎಲ್ಲಾ 289 ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದ್ದು ಅವರನ್ನು ಟರ್ಮಿನಲ್‌ಗೆ ಹಿಂತಿರುಗಿಸಲಾಗಿದೆ ಎಂದು ಏರ್‌ಲೈನ್ ದೃಢಪಡಿಸಿದೆ. ಪ್ರಯಾಣಿಕರ ಪ್ರಯಾಣ ಮುಂದುವರಿಸುವ ಪ್ರಯತ್ನ ನಡೆಯುತ್ತಿದೆ. ವಿಮಾನದ ಟೈರ್‌ಗಳಿಗೆ ಹಾನಿಯಾಗಿರುವ ಕಾರಣ ರನ್‌ವೇಯಿಂದ ವಿಮಾನವನ್ನು ತೆಗೆಯಲು ಸಾಧ್ಯವಾಗುತ್ತಿಲ್ಲ ಎಂದು ಎತಿಹಾದ್ ಏರ್‌ವೇಸ್ ವಕ್ತಾರರು ತಿಳಿಸಿದ್ದಾರೆ. ಸದ್ಯ ದುರಸ್ತಿ ಕಾರ್ಯ ನಡೆಯುತ್ತಿದೆ. ಎಲ್ಲಾ ಪ್ರಯಾಣಿಕರನ್ನು ವಿಮಾನದಿಂದ ಇಳಿಸಿ ಬಸ್ ಮೂಲಕ ಟರ್ಮಿನಲ್‌ಗೆ ಕರೆದೊಯ್ಯಲಾಗಿದೆ ಎಂದು ಅವರು ಹೇಳಿದರು.
ಪ್ರಯಾಣಿಕರನ್ನು ಸುರಕ್ಷಿತವಾಗಿ ಇಳಿಸಲಾಗಿದೆ. ನಮ್ಮ ತಂಡಗಳು ಸಾಧ್ಯವಾದಷ್ಟು ಬೇಗ ಅವರ ಮುಂದಿನ ಪ್ರಯಾಣವನ್ನು ಮುಂದುವರಿಸಲು ಅನುವು ಮಾಡಿಕೊಡಲು ಕೆಲಸ ಮಾಡುತ್ತಿವೆ. ಎತಿಹಾದ್ ಏರ್‌ವೇಸ್ ಯಾವುದೇ ಅನಾನುಕೂಲತೆಗಾಗಿ ಪ್ರಾಮಾಣಿಕವಾಗಿ ವಿಷಾದಿಸುತ್ತದೆ ಎಂದು ಟ್ವೀಟ್ ಮಾಡಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ