ವಾಷಿಂಗ್ಟನ್: ನೀಲಿ ಚಿತ್ರ ತಾರೆ ಸ್ಟಾರ್ಮಿ ಡೆನಿಯಲ್ಸ್ ಅವರಿಗೆ ಲಂಚ ನೀಡಿದ ಪ್ರಕರಣದಲ್ಲಿ ದೋಷಿಯಾಗಿರುವ ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಜೈಲು ಶಿಕ್ಷೆ ನ್ಯಾಯಾಧೀಶರು ನಿರಾಕರಿಸಿದ್ದಾರೆ.
ಪ್ರಕರಣದಲ್ಲಿ ಟ್ರಂಪ್ ದೋಷಿ ಎಂದು ಘೋಷಿಸಿದ್ದ ಮ್ಯಾನ್‌ಹ್ಯಾಟನ್ ಕೋರ್ಟ್, ಶಿಕ್ಷೆಯ ಪ್ರಮಾಣವನ್ನು ಶುಕ್ರವಾರಕ್ಕೆ ಕಾಯ್ದಿರಿಸಿತ್ತು. ಇಂದು ತೀರ್ಪು ಪ್ರಕಟಿಸಿದ ನ್ಯಾಯಾಧೀಶರು, ಔಪಚಾರಿಕವಾಗಿ ಶಿಕ್ಷೆ ವಿಧಿಸಿದರು. ಆದರೆ ಯಾವುದೇ ಜೈಲು ಶಿಕ್ಷೆ ವಿಧಿಸದೆ ಬೇಷರತ್ತಾದ ಬಿಡುಗಡೆ ಶಿಕ್ಷೆ ವಿಧಿಸಿದರು ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.
ಈ ನಿರ್ಧಾರವು ಟ್ರಂಪ್ ಅವರನ್ನು ಅಪರಾಧದಿಂದ ಮುಕ್ತಗೊಳಿಸುತ್ತದೆ ಮತ್ತು ಜೈಲು ಶಿಕ್ಷೆ ಅಥವಾ ದಂಡ ಇಲ್ಲದೆ ಶ್ವೇತಭವನ ಪ್ರವೇಶಿಸಲು ಅವಕಾಶ ನೀಡುತ್ತದೆ.
ಮ್ಯಾನ್‌ಹ್ಯಾಟನ್ ನ್ಯಾಯಾಧೀಶ ಜಾನ್ ಎಂ ಮರ್ಚಂಟ್ ಅವರು, ಅಮೆರಿಕದ ನಿಯೋಜಿತ ಅಧ್ಯಕ್ಷರು ಶ್ವೇತಭವನದಲ್ಲಿ ಮೊದಲ ಅಪರಾಧಿಯಾಗುವುದನ್ನು ತಪ್ಪಿಸಲು ಬೇಷರತ್ತಾದ ಬಿಡುಗಡೆ ಶಿಕ್ಷೆ ನೀಡಿದ್ದಾರೆ.
ನ್ಯಾಯಾಧೀಶರು, ಎರಡನೇ ಬಾರಿಗೆ ಅಧಿಕಾರಕ್ಕೆ ಬಂದಿರುವ 78 ವರ್ಷದ ಡೊನಾಲ್ಡ್ ಟ್ರಂಪ್ ಗೆ ನಾಲ್ಕು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವ ಅಧಿಕಾರವನ್ನು ಹೊಂದಿದ್ದರು. ಆದಾಗ್ಯೂ, ಅವರ ತೀರ್ಪು ಸಾಂವಿಧಾನಿಕ ಸಂಕೀರ್ಣತೆಗಳನ್ನು ತಪ್ಪಿಸಿದೆ.
ನೀಲಿ ಚಿತ್ರ ತಾರೆ ಸ್ಟಾರ್ಮಿ ಡೇನಿಯಲ್ಸ್ ಅವರನ್ನು ಸುಮ್ಮನಾಗಿಸಲು ನೀಡಿದ ಹಣದ ವಿಚಾರವನ್ನು ಮುಚ್ಚಿಡಲು ಟ್ರಂಪ್ ಅವರು ತಮ್ಮ ಉದ್ಯಮ ವ್ಯವಹಾರಗಳ ದಾಖಲೆಯನ್ನೇ ತಿರುಚಿದ ಪ್ರತಿ 34 ಆರೋಪಗಳಲ್ಲಿಯೂ ಅವರು ತಪ್ಪಿತಸ್ಥರಾಗಿದ್ದಾರೆ ಎಂದು ನ್ಯಾಯಾಧೀಶರು ಹೇಳಿದ್ದಾರೆ. ಪ್ರತಿ ಪ್ರಕರಣದಲ್ಲಿಯೂ ಅವರು 4 ವರ್ಷಗಳ ಕಾಲ ಸೆರೆವಾಸ ಶಿಕ್ಷೆಗೆ ಗುರಿಯಾಗಬಹುದಾಗಿತ್ತು. ಆದರೆ ಇದೀಗ ಅವರು ಶಿಕ್ಷೆಯಿಂದ ತಪ್ಪಿಸಿಕೊಂಡಿದ್ದಾರೆ.
Advertisement