
ಕೋಲ್ಕತ್ತಾ: ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ರಾಜಕೀಯ ಪ್ರಕ್ಷುಬ್ಧತೆಯ ಮಧ್ಯೆ, ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಲು ಪ್ರಯತ್ನಿಸುತ್ತಿರುವ ವ್ಯಕ್ತಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಈ ಮಧ್ಯೆ ಪಶ್ಚಿಮ ಬಂಗಾಳದಲ್ಲಿ ಪ್ರಮುಖ ನಕಲಿ ಪಾಸ್‌ಪೋರ್ಟ್ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ಇದು ಬೆಳೆಯುತ್ತಿರುವ ಬೆದರಿಕೆಯನ್ನು ಸಂಪೂರ್ಣವಾಗಿ ಎದುರಿಸಲು ಮತ್ತಷ್ಟು ಕಠಿಣ ಕ್ರಮಗಳು ಅಗತ್ಯವಾಗಬಹುದು ಎಂದು ಪೊಲೀಸರು ಎಚ್ಚರಿಸಿದ್ದಾರೆ.
ಹಲವಾರು ಬಾಂಗ್ಲಾದೇಶಿ ಪ್ರಜೆಗಳ ಅಕ್ರಮ ಪ್ರವೇಶಕ್ಕೆ ಅನುಕೂಲ ಮಾಡಿಕೊಟ್ಟ ಈ ಜಾಲದಲ್ಲಿ, ಆಧಾರ್ ಕಾರ್ಡ್‌ಗಳು, ಪ್ಯಾನ್ ಕಾರ್ಡ್‌ಗಳು, ಮತದಾರರ ಗುರುತಿನ ಚೀಟಿಗಳು ಮತ್ತು ಜನನ ಪ್ರಮಾಣಪತ್ರಗಳು ಸೇರಿದಂತೆ ನಕಲಿ ಭಾರತೀಯ ಗುರುತಿನ ದಾಖಲೆಗಳ ಸೃಷ್ಟಿಯೂ ಸೇರಿದೆ. ಈ ನಕಲಿ ದಾಖಲೆಗಳನ್ನು ನುಸುಳುಕೋರರಿಗೆ ಭಾರಿ ಮೊತ್ತಕ್ಕೆ ಮಾರಾಟ ಮಾಡಲಾಗುತ್ತಿದೆ. ಆಧಾರ್ ಕಾರ್ಡ್‌ಗೆ 15,000 ರೂ., ಮತದಾರರ ಗುರುತಿನ ಚೀಟಿಗೆ 10,000 ರೂ., ಜನನ ಪ್ರಮಾಣಪತ್ರಕ್ಕೆ 12,000 ರೂ. ಮತ್ತು ಪ್ಯಾನ್ ಕಾರ್ಡ್‌ಗೆ 3,000 ರೂ. ತೆಗೆದುಕೊಳ್ಳಲಾಗುತ್ತಿದೆ.
ಇಲ್ಲಿಯವರೆಗೆ, ಈ ಪ್ರಕರಣ ಸಂಬಂಧ ಬಂಗಾಳದಲ್ಲಿ ಪೊಲೀಸರು ಒಂಬತ್ತು ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಬರಾಸತ್ ನ್ಯಾಯಾಲಯದ ಗುಮಾಸ್ತ ಸಮೀರ್ ದಾಸ್ ಕೂಡ ಸೇರಿದ್ದಾನೆ. ಬಂಧಿತನು ಹಲವು ವರ್ಷಗಳಿಂದ ದಿನಸಿ ಅಂಗಡಿ ನಡೆಸುತ್ತಿದ್ದರಿಂದ ಸ್ಥಳೀಯರಿಗೆ ಈ ದಂಧೆಯಲ್ಲಿ ಆತ ಭಾಗಿಯಾಗಿರುವ ಬಗ್ಗೆ ಅನುಮಾನ ಮೂಡಿರಲಿಲ್ಲ. ಆದಾಗ್ಯೂ, COVID-19 ಸಾಂಕ್ರಾಮಿಕ ಸಮಯದಲ್ಲಿ ಆತ ದಿಢೀರ್ ಶ್ರೀಮಂತನಾಗಿದ್ದು ದೊಡ್ಡ ಮನೆಯನ್ನು ಕಟ್ಟಿದ ನಂತರ ಅನುಮಾನಗಳು ಹುಟ್ಟಿಕೊಂಡವು. ಹೆಚ್ಚಿನ ಪುರಾವೆಗಳಿಗಾಗಿ ತನಿಖಾಧಿಕಾರಿಗಳು ಈಗ ಅವರ ಫೋನ್ ಮತ್ತು ವಾಟ್ಸಾಪ್ ಚಾಟ್‌ಗಳನ್ನು ಪರಿಶೀಲಿಸುತ್ತಿದ್ದಾರೆ.
ಕೋಲ್ಕತ್ತಾದ ಪಾಸ್‌ಪೋರ್ಟ್ ಸೇವಾ ಕೇಂದ್ರಗಳ (ಪಿಎಸ್‌ಕೆ) 'ಪರಿಶೀಲನೆ ಮತ್ತು ಮಂಜೂರಾತಿ' ಅಧಿಕಾರಿಗಳು ಮತ್ತು ನಗರದ ವಿವಿಧ ಪೊಲೀಸ್ ಠಾಣೆಗಳ ಐವರು ಅಧಿಕಾರಿಗಳ ವಿರುದ್ಧವೂ ಆರೋಪಗಳು ಕೇಳಿಬಂದಿದ್ದು ಅವರು ಅಕ್ರಮ ಕಾರ್ಯಾಚರಣೆಗೆ ಸಹಾಯ ಮಾಡಿದ್ದಾರೆ ಎಂದು ಶಂಕಿಸಲಾಗಿದೆ. ಮಹತ್ವದ ಪ್ರಗತಿಯಲ್ಲಿ, ಕೋಲ್ಕತ್ತಾ ಪೊಲೀಸರು ಪಾಸ್‌ಪೋರ್ಟ್ ವಿಭಾಗದ 61 ವರ್ಷದ ನಿವೃತ್ತ ಸಬ್-ಇನ್‌ಸ್ಪೆಕ್ಟರ್ ಅಬ್ದುಲ್ ಹೈ ಎಂಬಾತನನ್ನು ಬಂಧಿಸಿದ್ದಾರೆ. ಅವರ ಬಂಧನದೊಂದಿಗೆ ಕಳೆದ ಮೂರು ತಿಂಗಳಲ್ಲಿ ಬಂಧಿತರಾದ ಒಟ್ಟು ವ್ಯಕ್ತಿಗಳ ಸಂಖ್ಯೆ ಒಂಬತ್ತಕ್ಕೆ ಏರಿಕೆಯಾಗಿದೆ.
ಟ್ರಾವೆಲ್ ಏಜೆನ್ಸಿ ಮೂಲಕ ಈ ದಂಧೆ ನಡೆಸಲಾಗುತ್ತಿದ್ದು ಬಾಂಗ್ಲಾದೇಶಿ ಪ್ರಜೆಗಳಿಗೆ ಕನಿಷ್ಠ 73 ನಕಲಿ ಭಾರತೀಯ ಪಾಸ್‌ಪೋರ್ಟ್‌ಗಳನ್ನು ನೀಡಿತ್ತು. ಇದು ಅವರು ಭಾರತಕ್ಕೆ ನುಸುಳಲು ಅನುಕೂಲ ಮಾಡಿಕೊಟ್ಟಿತ್ತು ಎಂದು ವರದಿಯಾಗಿದೆ.
Advertisement