
ಟೆಲ್ ಅವೀವ್: ಪಶ್ಚಿಮ ಏಷ್ಯಾದಲ್ಲಿ ಹಮಾಸ್ ಬಂಡುಕೋರ ಪ್ರಾಬಲ್ಯದ ರಾಷ್ಟ್ರಗಳು ಹಾಗೂ ಇಸ್ರೇಲ್ ನಡುವೆ ಕಳೆದ 15 ತಿಂಗಳಿನಿಂದ ನಡೆಯುತ್ತಿದ್ದ ಗಾಜಾ ಯುದ್ಧ ಅಂತ್ಯಗೊಳಿಸುವ ಗುರಿಯೊಂದಿಗೆ ಕದನ ವಿರಾಮ ಒಪ್ಪಂದಡಿ ಇಸ್ರೇಲ್ ನಲ್ಲಿ ಒತ್ತೆಯಾಳಾಗಿ ಇಟ್ಟುಕೊಂಡಿದ್ದ 200 ಪ್ಯಾಲೆಸ್ಟೇನಿಯನ್ನರ ಬಿಡುಗಡೆಗೆ ಬದಲಿಗೆ ನಾಲ್ವರು ಇಸ್ರೇಲಿ ಮಹಿಳಾ ಸೈನಿಕರನ್ನು ರೆಡ್ ಕ್ರಾಸ್ ಗೆ ಹಮಾಸ್ ಶನಿವಾರ ಬಿಡುಗಡೆ ಮಾಡಿದೆ.
ಕಳೆದ ವಾರಾಂತ್ಯದಲ್ಲಿ ಕದನ ವಿರಾಮ ಜಾರಿಗೆ ಬಂದ ನಂತರ ಇದು ಎರಡನೇ ವಿನಿಮಯವಾಗಿದೆ. ಕನಿಷ್ಠ ಆರು ವಾರಗಳವರೆಗೆ ಗಾಜಾದ ಮೇಲೆ ಇಸ್ರೇಲ್ ಯುದ್ಧವನ್ನು ಸ್ಥಗಿತಗೊಳಿಸಿದ್ದು, ಈ ಸಮಯದಲ್ಲಿ ಡಜನ್ ಗಟ್ಟಲೆ ಇಸ್ರೇಲ್ ಒತ್ತೆಯಾಳುಗಳು, ನೂರಾರು ಪ್ಯಾಲೇಸ್ಟಿನಿಯನ್ ಬಂಧಿಗಳನ್ನು ಬಿಡುಗಡೆ ಮಾಡಲಾಗುತ್ತದೆ. ಹಸಿವಿನಿಂದ ಬಳಲುತ್ತಿರುವವರ ಪ್ರದೇಶವನ್ನು ಪ್ರವೇಶಿಸಲು ಮಾನವೀಯ ಆಧಾರದ ಮೇಲೆ ಅನುಮತಿ ನೀಡಲಾಗುತ್ತದೆ.
ನಾಲ್ವರು ಸೈನಿಕರಾದ ಕರೀನಾ ಅರಿವ್, ಡೇನಿಯೆಲಾ ಗಿಲ್ಬೋವಾ, ನಾಮಾ ಲೆವಿ ಮತ್ತು ಲಿರಿ ಅಲ್ಬಾಗ್ ಅವರನ್ನು ಗಾಜಾದಲ್ಲಿ ರೆಡ್‌ಕ್ರಾಸ್‌ಗೆ ಹಸ್ತಾಂತರಿಸಲಾಗಿದೆ ಎಂದು ಎಎಫ್‌ಪಿ ವರದಿ ಮಾಡಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ಇಸ್ರೇಲ್ ರಕ್ಷಣಾ ಪಡೆಗಳು, ನಾಲ್ವರು ಇಸ್ರೇಲಿ ಒತ್ತೆಯಾಳುಗಳನ್ನು ವರ್ಗಾಯಿಸಲಾಗಿದೆ. ಗಾಜಾ ಪಟ್ಟಿಯಲ್ಲಿರುವ IDF ಮತ್ತು ISA ಪಡೆಗಳ ಕಡೆಗೆ ಅವರು ಹೋಗುತ್ತಿದ್ದಾರೆ ಎಂದು ರೆಡ್ ಕ್ರಾಸ್ ಮಾಹಿತಿ ನೀಡಿರುವುದಾಗಿ ತಿಳಿಸಿದೆ.
ಅಕ್ಟೋಬರ್ 7, 2023 ರಿಂದ ಒತ್ತೆಯಾಳಾಗಿದ್ದ ನಾಲ್ವರು ಇಸ್ರೇಲಿ ಮಹಿಳಾ ಸೈನಿಕರನ್ನು ಬಿಡುಗಡೆ ಮಾಡುವುದಾಗಿ ಹಮಾಸ್ ಶುಕ್ರವಾರ ಘೋಷಿಸಿತ್ತು. ಇಸ್ರೇಲ್ ಮತ್ತು ಗಾಜಾ ನಡುವಿನ ಕದನ ವಿರಾಮ ಒಪ್ಪಂದದ ಅಡಿಯಲ್ಲಿ ಇದು ಎರಡನೇ ವಿನಿಮಯವಾಗಿದೆ.
ಗಾಜಾ ಗಡಿಯಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿರುವ ನಹಾಲ್ ಓಜ್ ಸೇನಾ ನೆಲೆಯಿಂದ ಎಲ್ಲಾ ನಾಲ್ವರನ್ನು ಸೆರೆಹಿಡಿಯಲಾಯಿತು.
ಹಮಾಸ್ ನಿಂದ ಬಿಡುಗಡೆಯಾದ ಇಸ್ರೇಲಿನ ನಾಲ್ವರು ಮಹಿಳಾ ಸೈನಿಕರಾದ ಕರೀನಾ ಅರಿವ್, ಡೇನಿಯೆಲ್ಲಾ ಗಿಲ್ಬೋವಾ, ನಾಮಾ ಲೆವಿ ಮತ್ತು ಲಿರಿ ಅಲ್ಬಾಗ್ ಉತ್ತಮ ಸ್ಥಿತಿಯಲ್ಲಿ ಕಾಣಿಸಿಕೊಂಡರು. ಗಾಜಾ ನಗರದ ಪ್ಯಾಲೆಸ್ಟೈನ್ ಚೌಕದಲ್ಲಿ ಜನಸಮೂಹದತ್ತ ಕೈಬೀಸುತ್ತಾ ನಗುತ್ತಿದ್ದರು. ಅಲ್ಲಿ ಅವರನ್ನು ರೆಡ್‌ಕ್ರಾಸ್‌ಗೆ ಹಸ್ತಾಂತರಿಸಲಾಯಿತು. ಭಾನುವಾರ ಬಿಡುಗಡೆಯಾದ ಒತ್ತೆಯಾಳುಗಳಿಗೆ ಹಮಾಸ್ ಉಡುಗೊರೆಯಾಗಿ ನೀಡಿದಂತೆಯೇ, ಸೈನಿಕರು ತಲಾ ಒಂದು ಬ್ಯಾಗ್ ನ್ನು ತೆಗೆದುಕೊಂಡು ಹೋದರು.
ನಾಲ್ಕು ಸೈನಿಕರ ಬಿಡುಗಡೆ ಬದಲಾಗಿ ಇಸ್ರೇಲ್ ಜೈಲುಗಳಲ್ಲಿ ವಿವಿಧ ಶಿಕ್ಷೆ ಅನುಭವಿಸುತ್ತಿರುವ 200 ಪ್ಯಾಲೆಸ್ಟೀನಿಯನ್ನರನ್ನು ಇಸ್ರೇಲ್ ಬಿಡುಗಡೆ ಮಾಡಬೇಕಾಗಿದೆ. ಅವರಲ್ಲಿ ಕೆಲವರು ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಭಾನುವಾರ ಮೊದಲ ವಿನಿಮಯ ನಡೆದಿತ್ತು. ಮೂವರು ಇಸ್ರೇಲಿ ಒತ್ತೆಯಾಳುಗಳು ಮತ್ತು 90 ಪ್ಯಾಲೆಸ್ಟಿನಿಯನ್ನರನ್ನು ಬಿಡುಗಡೆ ಮಾಡಲಾಗಿತ್ತು.
ಇಸ್ರೇಲ್ ಬಿಡುಗಡೆ ಮಾಡಿದ ಪ್ಯಾಲೆಸ್ಟೀನಿಯಾದವರಲ್ಲಿ ಎಡಪಂಥೀಯ ಪಾಪ್ಯುಲರ್ ಫ್ರಂಟ್ ಫಾರ್ ದಿ ಲಿಬರೇಶನ್ ಆಫ್ ಪ್ಯಾಲೆಸ್ಟೈನ್ (ಪಿಎಫ್‌ಎಲ್‌ಪಿ) ನಾಯಕಿ ಮತ್ತು ಸ್ತ್ರೀವಾದಿ ಕಾರ್ಯಕರ್ತೆ ಖಾಲಿದಾ ಜರಾರ್ ಸೇರಿದ್ದಾರೆ. ಜರಾರ್ ಅವರನ್ನು 2015 ರಿಂದಲೂ ಇಸ್ರೇಲ್ ಆಗಾಗ್ಗೆ ಬಂಧಿಸುತ್ತಲೇ ಇದೆ. ಇತ್ತೀಚಿಗೆ 2023 ಡಿಸೆಂಬರ್ ನಲ್ಲಿ ಅವರನ್ನು ಬಂಧಿಸಲಾಗಿತ್ತು.
Advertisement