ರಷ್ಯಾ-ಉಕ್ರೇನ್ ಯುದ್ಧ ನಿಲ್ಲಿಸಲು OPEC+ ರಾಷ್ಟ್ರಗಳು ತೈಲ ಬೆಲೆ ಇಳಿಸಬೇಕು: ಡೊನಾಲ್ಡ್ ಟ್ರಂಪ್
ವಾಷಿಂಗ್ಟನ್: ತೈಲ ಬೆಲೆಗಳನ್ನು ಕಡಿತಗೊಳಿಸುವಂತೆ ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆಯನ್ನು ಕೇಳಿಕೊಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದರಿಂದ ರಷ್ಯಾ-ಉಕ್ರೇನ್ ಯುದ್ಧ ನಿಲ್ಲಬಹುದು ಎಂದು ಹೇಳಿದ್ದಾರೆ.
ಡೊನಾಲ್ಡ್ ಟ್ರಂಪ್ ಅವರು ಈ ಹಿಂದೆಯೂ ಇದೇ ರೀತಿಯ ಹೇಳಿಕೆ ನೀಡಿದ್ದರು. ಸ್ವಿಟ್ಜರ್‌ಲ್ಯಾಂಡ್‌ನ ದಾವೋಸ್‌ನಲ್ಲಿ ನಡೆದ ವಾರ್ಷಿಕ ವಿಶ್ವ ಆರ್ಥಿಕ ವೇದಿಕೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಟ್ರಂಪ್, ಉಕ್ರೇನ್‌ನಲ್ಲಿ ಸುಮಾರು ಮೂರು ವರ್ಷಗಳ ಸಂಘರ್ಷಕ್ಕೆ ತೈಲ ರಫ್ತು ಮಾಡುವ ದೇಶಗಳ ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆ(OPEC+) ಮೈತ್ರಿಕೂಟ ಕಾರಣ ಎಂದು ಆರೋಪಿಸಿದ್ದಾರೆ.
ಪೆಟ್ರೋಲಿಯಂ ರಫ್ತು ಮಾಡುವ ದೇಶಗಳು ತೈಲ ಬೆಲೆಯನ್ನು ಕಡಿತಗೊಳಿಸಬೇಕು. ಇದರಿಂದ ಉಕ್ರೇನ್ ನಲ್ಲಿ ನಡೆಯುತ್ತಿರುವ ದುರಂತ ಅದರಷ್ಟಕ್ಕೆ ಸಹಜವಾಗಿ ನಿಲ್ಲುತ್ತದೆ. ಈ ಯುದ್ಧದಿಂದ ಎರಡೂ ಕಡೆಯವರಿಗೆ ಸಾಕಷ್ಟು ಹಾನಿಯಿದೆ ಎಂದು ನಿನ್ನೆ ಉತ್ತರ ಕೆರೊಲಿನಾದಲ್ಲಿ ವರದಿಗಾರರ ಜೊತೆ ಮಾತನಾಡುವಾಗಲೂ ಹೇಳಿದ್ದರು.
ಇಲ್ಲಿಯವರೆಗೆ ಸಂಘರ್ಷದಲ್ಲಿ ಅನೇಕ ರಷ್ಯಾ ಮತ್ತು ಉಕ್ರೇನ್ ಸೈನಿಕರು ಮೃತಪಟ್ಟಿದ್ದಾರೆ. ಇದೀಗ, ಮದ್ದುಗುಂಡುಗಳು ಜನರನ್ನು ಹೊಡೆದುಹಾಕುತ್ತಿವೆ. ಒಂದು ದಶಲಕ್ಷಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ವಾರವಾರ ಸಾವಿರಾರು ಜನರನ್ನು ಕಳೆದುಕೊಳ್ಳುತ್ತಿದ್ದಾರೆ.
ಇದು ಹುಚ್ಚುತನ. ಇದು ಹುಚ್ಚುತನದ ಯುದ್ಧ, ಆಗ ನಾನು ಅಧ್ಯಕ್ಷನಾಗಿರುತ್ತಿದ್ದರೆ ಖಂಡಿತಾ ಯುದ್ಧ ಆಗುತ್ತಿರಲಿಲ್ಲ. ಇದನ್ನು ನಾವು ನಿಲ್ಲಿಸಬೇಕಿದೆ ಎಂದರು.
ಯುದ್ಧವನ್ನು ತ್ವರಿತವಾಗಿ ನಿಲ್ಲಿಸಲು ಒಂದು ಮಾರ್ಗವೆಂದರೆ OPEC ಹಣ ಗಳಿಸುವುದನ್ನು ನಿಲ್ಲಿಸಬೇಕು, ತೈಲದ ಬೆಲೆಯನ್ನು ಇಳಿಸಬೇಕು. ಪೆಟ್ರೋಲಿಯಂ ಬೆಲೆ ಹೆಚ್ಚಾಗಿದ್ದರೆ, ಯುದ್ಧವು ಅಷ್ಟು ಸುಲಭವಾಗಿ ಕೊನೆಗೊಳ್ಳುವುದಿಲ್ಲ. ಆದ್ದರಿಂದ, ಒಪೆಕ್ ಅಂಗಳದಲ್ಲಿ ಚೆಂಡಿದ್ದು ತೈಲದ ಬೆಲೆಯನ್ನು ಇಳಿಸಬೇಕು ಆಗ ಯುದ್ಧವು ತಕ್ಷಣವೇ ನಿಲ್ಲುತ್ತದೆ ಎಂದು ಹೇಳಿದರು.
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್‌ನೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕು ಎಂದು ಟ್ರಂಪ್ ಈ ಹಿಂದೆ ಹೇಳಿದ್ದರು. ನಾವು ಸದ್ಯದಲ್ಲಿಯೇ ಭೇಟಿ ಮಾಡಿ ಮಾತುಕತೆ ನಡೆಸುತ್ತೇವೆ ಎಂದು ಹೇಳಿದ್ದರು.
ಉಕ್ರೇನ್‌ನಲ್ಲಿ ಯುದ್ಧವನ್ನು ಕೊನೆಗೊಳಿಸುವಂತೆ ಅವರು ರಷ್ಯಾಕ್ಕೆ ಅಧಿಕಾರ ವಹಿಸಿಕೊಂಡ ಕೂಡಲೇ ಎಚ್ಚರಿಕೆ ನೀಡಿದ್ದರು. ಇಲ್ಲದಿದ್ದರೆ ಹೆಚ್ಚಿನ ಸುಂಕಗಳು ಮತ್ತು ಹೆಚ್ಚಿನ ನಿರ್ಬಂಧಗಳನ್ನು ಎದುರಿಸಬೇಕಾಗುತ್ತದೆ. ಜನವರಿ 20 ರಂದು ಯುನೈಟೆಡ್ ಸ್ಟೇಟ್ಸ್‌ನ 47 ನೇ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ಟ್ರಂಪ್, ತಮ್ಮ ಒಡೆತನದ ಸಾಮಾಜಿಕ ಮಾಧ್ಯಮ ವೇದಿಕೆಯಾದ ಟ್ರುಥ್ ಸೋಷಿಯಲ್ ನಲ್ಲಿ ಹೀಗೆ ಹೇಳಿದ್ದರು.