
ಸೌದಿ ಅರೇಬಿಯಾದ ಪಶ್ಚಿಮ ಪ್ರದೇಶದ ಜೆಡ್ಡಾ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ 9 ಭಾರತೀಯ ನಾಗರಿಕರು ಸೇರಿದಂತೆ 15 ಜನರು ದುರಂತ ಸಾವನ್ನಪ್ಪಿದ್ದಾರೆ. ಈ ಅಪಘಾತದಲ್ಲಿ ನೇಪಾಳ ಮತ್ತು ಘಾನಾದ ತಲಾ ಮೂವರು ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ. ಇಂದು ಭಾರತೀಯ ರಾಯಭಾರ ಕಚೇರಿ ಅಪಘಾತವನ್ನು ದೃಢಪಡಿಸಿದ್ದು, ಮೃತರ ಕುಟುಂಬಗಳಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುವುದಾಗಿ ಭರವಸೆ ನೀಡಿದೆ. ಈ ಅಪಘಾತದ ನಂತರ, ಮೃತರ ಕುಟುಂಬಗಳಲ್ಲಿ ಶೋಕ ಮಡುಗಟ್ಟಿದೆ.
ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಕೂಡ ಈ ಅಪಘಾತದ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಜೆಡ್ಡಾದಲ್ಲಿ ನಡೆದ ಈ ಭೀಕರ ರಸ್ತೆ ಅಪಘಾತದ ಬಗ್ಗೆ ಕೇಳಿ ದುಃಖಿತನಾಗಿದ್ದೇನೆ ಎಂದು ಅವರು ಇನ್ಸ್ಟಾಗ್ರಾಮ್ ನಲ್ಲಿ ಬರೆದಿದ್ದಾರೆ. ನಾನು ಜೆಡ್ಡಾದ ನಮ್ಮ ಕಾನ್ಸುಲ್ ಜನರಲ್ ಅವರೊಂದಿಗೆ ಮಾತನಾಡಿದ್ದೇನೆ. ಅವರು ಸಂತ್ರಸ್ತ ಕುಟುಂಬಗಳೊಂದಿಗೆ ಸಂಪರ್ಕದಲ್ಲಿದ್ದು ಅವರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ತೆಲಂಗಾಣದ ಒಬ್ಬ ಕಾರ್ಮಿಕ ಸಾವು
ಭಾರತೀಯ ಸಮುದಾಯದ ಪ್ರಕಾರ, ಈ ಎಲ್ಲಾ ಕಾರ್ಮಿಕರು ದಕ್ಷಿಣ ಬಂದರು ನಗರವಾದ ಜಿಜಾನ್‌ನಲ್ಲಿರುವ ತಮ್ಮ ಕೆಲಸದ ಸ್ಥಳದ ಕಡೆಗೆ ಹೋಗುತ್ತಿದ್ದರು. ಈ ಸಮಯದಲ್ಲಿ ಅವರ ಬಸ್ ಟ್ರೇಲರ್‌ಗೆ ಡಿಕ್ಕಿ ಹೊಡೆದಿದೆ. ಬಸ್ಸಿನಲ್ಲಿ ಒಟ್ಟು 26 ಜನರಿದ್ದು ಸ್ಥಳದಲ್ಲೇ 15 ಮಂದಿ ಸಾವನ್ನಪ್ಪಿದ್ದಾರೆ. ಇನ್ನುಳಿದ ಪ್ರಯಾಣಿಕರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಮೃತರಲ್ಲಿ ತೆಲಂಗಾಣದ ಜಗತ್ಯಾಲ್ ಜಿಲ್ಲೆಯ ಮೆಟ್ಪಲಿ ಮಂಡಲದ ನಿವಾಸಿ ಕಪೇಲಿ ರಮೇಶ್ (32) ಎಂಬ ಭಾರತೀಯ ಪ್ರಜೆಯೂ ಸೇರಿದ್ದಾರೆ. ರಮೇಶ್ ಅವರ ಸಾವಿನ ಸುದ್ದಿ ಅವರ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ.
ಈ ಅಪಘಾತದ ಬಗ್ಗೆ ಭಾರತೀಯ ರಾಯಭಾರ ಕಚೇರಿ ತೀವ್ರ ಸಂತಾಪ ವ್ಯಕ್ತಪಡಿಸಿದೆ. "ಜೆಡ್ಡಾದ ಬಳಿ ನಡೆದ ರಸ್ತೆ ಅಪಘಾತದಲ್ಲಿ 9 ಭಾರತೀಯರು ಸಾವನ್ನಪ್ಪಿದ್ದಕ್ಕೆ ತೀವ್ರ ಸಂತಾಪ ಸೂಚಿಸುತ್ತೇವೆ" ಎಂದು ರಾಯಭಾರ ಕಚೇರಿ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದೆ. ಮೃತರ ಕುಟುಂಬಗಳಿಗೆ ನಮ್ಮ ಸಂತಾಪಗಳು. ಭಾರತೀಯ ದೂತಾವಾಸವು ಸ್ಥಳೀಯ ಆಡಳಿತ ಮತ್ತು ಸಂತ್ರಸ್ತ ಕುಟುಂಬಗಳೊಂದಿಗೆ ಸಂಪರ್ಕದಲ್ಲಿದೆ ಮತ್ತು ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸುತ್ತಿದೆ.
ಈ ಅಪಘಾತದಲ್ಲಿ ಗಾಯಗೊಂಡವರ ಚಿಕಿತ್ಸೆಗೆ ಸಂಪೂರ್ಣ ವ್ಯವಸ್ಥೆ ಮಾಡಲಾಗುತ್ತಿದೆ. ಸಂತ್ರಸ್ತ ಕುಟುಂಬಗಳಿಗೆ ಸಹಾಯ ಮಾಡಲು ಭಾರತೀಯ ಹೈಮಿಷನ್ ವಿಶೇಷ ಸಹಾಯವಾಣಿ ಸಂಖ್ಯೆಯನ್ನು ಸಹ ಬಿಡುಗಡೆ ಮಾಡಿದೆ. ಸರ್ಕಾರವು ಮೃತರ ಶವಗಳನ್ನು ಆದಷ್ಟು ಬೇಗ ಅವರ ಕುಟುಂಬಗಳಿಗೆ ತಲುಪಿಸುವ ಪ್ರಕ್ರಿಯೆಯಲ್ಲಿ ನಿರತವಾಗಿದೆ. ಈ ಘಟನೆಯು ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ಕಾರ್ಮಿಕರ ಸುರಕ್ಷತೆಯ ಬಗ್ಗೆ ಗಂಭೀರ ಕಳವಳವನ್ನು ಹುಟ್ಟುಹಾಕಿದೆ. ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ಒದಗಿಸಲು ಸರ್ಕಾರ ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.
Advertisement