
ವಾಷಿಂಗ್ಟನ್: ಬ್ರಿಕ್ಸ್ ದೇಶಗಳು ಅಮೆರಿಕ ಡಾಲರ್ ನ್ನು ಪರ್ಯಾಯ ಕರೆನ್ಸಿಯೊಂದಿಗೆ ಬದಲಾಯಿಸಲು ಪ್ರಯತ್ನಿಸಿದರೆ ಶೇಕಡಾ 100ರಷ್ಟು ಸುಂಕ ವಿಧಿಸುವುದಾಗಿ ಭಾರತ ಸೇರಿದಂತೆ ಬ್ರಿಕ್ಸ್ ಬಣಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಠಿಣ ಎಚ್ಚರಿಕೆ ನೀಡಿದ್ದಾರೆ.
ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅವರು ಈ ಎಚ್ಚರಿಕೆ ನೀಡಿದ್ದು, ಬ್ರಿಕ್ಸ್ ದೇಶಗಳು ಡಾಲರ್‌ನಿಂದ ದೂರ ಸರಿಯಲು ಪ್ರಯತ್ನಿಸುವ ಕಲ್ಪನೆ ಇಲ್ಲಿಗೆ ಮುಕ್ತಾಯವಾಗಲಿದೆ, ಈ ಪ್ರತಿಕೂಲ ದೇಶಗಳಿಂದ ನಾವು ಹೊಸ ಬ್ರಿಕ್ಸ್ ಕರೆನ್ಸಿಯನ್ನು ರಚಿಸುವುದಿಲ್ಲ ಅಥವಾ ಪ್ರಬಲ ಯುಎಸ್ ಡಾಲರ್ ನ್ನು ಬದಲಿಸಲು ಬೇರೆ ಯಾವುದೇ ಕರೆನ್ಸಿಯನ್ನು ಬೆಂಬಲಿಸುವುದಿಲ್ಲ ಎಂಬ ಬದ್ಧತೆಯನ್ನು ಬಯಸುತ್ತೇವೆ. ಹಾಗೆ ಮಾಡಿದರೆ ಶೇಕಡಾ 100ರಷ್ಟು ಸುಂಕ ಕಟ್ಟಬೇಕಾಗುತ್ತದೆ ಮತ್ತು ಯುಎಸ್ ಆರ್ಥಿಕತೆಗೆ ಮಾರಾಟ ಮಾಡುವುದಕ್ಕೆ ವಿದಾಯ ಹೇಳಬೇಕಾಗುತ್ತದೆ ಎಂದು ಬರೆದಿದ್ದಾರೆ.
ಅಂತಾರಾಷ್ಟ್ರೀಯ ವ್ಯಾಪಾರದಲ್ಲಿ ಅಥವಾ ಬೇರೆಲ್ಲಿಯಾದರೂ ಬ್ರಿಕ್ಸ್ ಯುಎಸ್ ಡಾಲರ್ ನ್ನು ಬದಲಿಸುವ ಸಾಧ್ಯತೆಯಿಲ್ಲ. ಪ್ರಯತ್ನಿಸುವ ಯಾವುದೇ ದೇಶವು ಸುಂಕಗಳಿಗೆ ಹಲೋ ಹೇಳಿ ಅಮೆರಿಕಕ್ಕೆ ವಿದಾಯ ಹೇಳಬೇಕು" ಎಂದು ತಮ್ಮದೇ ಶೈಲಿಯಲ್ಲಿ ಟ್ರಂಪ್ ಎಚ್ಚರಿಸಿದ್ದಾರೆ.
ಸಂಭಾವ್ಯ ಆರ್ಥಿಕ ಪರಿಣಾಮಗಳನ್ನು ತಪ್ಪಿಸಲು ಬ್ರಿಕ್ಸ್ ರಾಷ್ಟ್ರಗಳು ಜಾಗತಿಕ ವ್ಯಾಪಾರದಲ್ಲಿ ಯುಎಸ್ ಡಾಲರ್ ಪ್ರಾಬಲ್ಯವನ್ನು ಎತ್ತಿಹಿಡಿಯಬೇಕು ಎಂದು ಎಚ್ಚರಿಸುತ್ತಾ ಟ್ರಂಪ್ ಪದೇ ಪದೇ ಡಾಲರ್ ಅಪನಗದೀಕರಣಕ್ಕೆ ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ.
ಬ್ರೆಜಿಲ್, ರಷ್ಯಾ, ಭಾರತ, ಚೀನಾ, ದಕ್ಷಿಣ ಆಫ್ರಿಕಾ, ಹಾಗೆಯೇ ಈಜಿಪ್ಟ್, ಇಥಿಯೋಪಿಯಾ, ಇಂಡೋನೇಷ್ಯಾ, ಇರಾನ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ನ್ನು ಒಳಗೊಂಡಿರುವ ಬ್ರಿಕ್ಸ್ ಬ್ಲಾಕ್ ದೇಶಗಳು, ಅಂತಾರಾಷ್ಟ್ರೀಯ ವ್ಯಾಪಾರಕ್ಕಾಗಿ ಯುಎಸ್ ಡಾಲರ್‌ಗೆ ಪರ್ಯಾಯಗಳನ್ನು ಚರ್ಚಿಸುತ್ತಿದೆ. ನಿರ್ದಿಷ್ಟವಾಗಿ ರಷ್ಯಾ ಮತ್ತು ಚೀನಾ, ಯುಎಸ್ ಡಾಲರ್‌ಗೆ ಪರ್ಯಾಯವನ್ನು ಹುಡುಕುತ್ತಿವೆ ಅಥವಾ ತಮ್ಮದೇ ಆದ ಬ್ರಿಕ್ಸ್ ಕರೆನ್ಸಿಯನ್ನು ರಚಿಸುತ್ತಿವೆ ಎಂದು ಸುದ್ದಿ ಬರುತ್ತಿರುವ ಹೊತ್ತಿನಲ್ಲಿ ಅಮೆರಿಕಾ ಈ ಎಚ್ಚರಿಕೆ ನೀಡಿದೆ.
Advertisement