
ವಾಷಿಂಗ್ಟನ್: ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಪ್ರಮುಖ ಕಾರ್ಯತಂತ್ರದ ಪಾಲುದಾರಿಕೆಯಲ್ಲಿ ಭಾರತದ ಪ್ರಾಮುಖ್ಯತೆಯನ್ನು ಪುನರುಚ್ಚರಿಸಿರುವ ಶ್ವೇತ ಭವನ, ಬಹು ನಿರೀಕ್ಷಿತ ಭಾರತ ಹಾಗೂ ಅಮೆರಿಕ ನಡುವಿನ ವ್ಯಾಪಾರ ಒಪ್ಪಂದ ಶೀಘ್ರದಲ್ಲಿಯೇ ಘೋಷಣೆಯಾಗಲಿದೆ ಎಂದು ಹೇಳಿದೆ.
ಇಂಡೋ ಪೆಸಿಫಿಕ್ ಪ್ರದೇಶದಲ್ಲಿ ಚೀನಾದ ಪಾತ್ರ ಹೆಚ್ಚಳ ಕುರಿತ ಸುದ್ದಿಸಂಸ್ಥೆ ಎಎನ್ಐ ಸಂಸ್ಥೆಗೆ ಪ್ರತಿಕ್ರಿಯಿಸಿದ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೊಲಿನ್ ಲೀವಿಟ್ , ಏಷ್ಯಾ ಪೆಸಿಫಿಕ್‌ನಲ್ಲಿ ಭಾರತವು ಅತ್ಯಂತ ಕಾರ್ಯತಂತ್ರದ ಮೈತ್ರಿ ರಾಷ್ಟ್ರವಾಗಿ ಉಳಿದಿದೆ. ಅಧ್ಯಕ್ಷರು ಪ್ರಧಾನಿ ಮೋದಿ ಅವರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದು, ಅದನ್ನುಅವರು ಮುಂದುವರಿಸುತ್ತಾರೆ ಎಂದು ಹೇಳಿದರು.
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡಾ ಕಳೆದ ವಾರ ಯುಎಸ್- ಭಾರತ ಒಪ್ಪಂದ ಬಹಳ ಹತ್ತಿರದಲ್ಲಿದೆ ಎಂದು ಹೇಳಿದ್ದರು.
ಇದು ನಿಜವಾಗಿದೆ. ಅದರ ಬಗ್ಗೆ ನಮ್ಮ ವಾಣಿಜ್ಯ ಕಾರ್ಯದರ್ಶಿಯೊಂದಿಗೆ ಮಾತನಾಡಿದ್ದೇನೆ. ಅವರು ಅಧ್ಯಕ್ಷರೊಂದಿಗೆ ಓವಲ್ ಕಚೇರಿಯಲ್ಲಿದ್ದರು. ಅವರು ಈ ಒಪ್ಪಂದಗಳನ್ನು ಅಂತಿಮಗೊಳಿಸಲಿದ್ದು, ಶೀಘ್ರದಲ್ಲಿಯೇ ಅಧ್ಯಕ್ಷರು ಹಾಗೂ ಅವರ ತಂಡದಿಂದ ಒಪ್ಪಂದ ಘೋಷಣೆಯಾಗಲಿದೆ ಎಂದು ತಿಳಿಸಿದರು.
QUAD ವಿದೇಶಾಂಗ ಸಚಿವರ ಸಭೆಗಾಗಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಅಮೆರಿಕಕ್ಕೆ ಭೇಟಿ ನೀಡಿರುವ ಸಂದರ್ಭದಲ್ಲಿಯೇ ಯುಎಸ್ ಪತ್ರಿಕಾ ಕಾರ್ಯದರ್ಶಿ ಹೇಳಿಕೆ ನೀಡಿದ್ದಾರೆ.
ವ್ಯಾಪಾರ ಒಪ್ಪಂದಕ್ಕೆ ಎದುರಾಗಿರುವ ಅಡೆತಡೆಗಳನ್ನು ಸಂಪೂರ್ಣವಾಗಿ ತೊಡೆದುಹಾಕಿ ಶೀಘ್ರದಲ್ಲಿ ಭಾರತ ಜೊತೆಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದು ಕಳೆದ ತಿಂಗಳು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದರು.
Advertisement