
ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಭೇಟಿಗಾಗಿ ಅರ್ಜೆಂಟೀನಾಕ್ಕೆ ಆಗಮಿಸಿದ್ದು, ದೇಶದ ಉನ್ನತ ನಾಯಕತ್ವದೊಂದಿಗೆ ಮಾತುಕತೆ ನಡೆಸಿ, ಎರಡೂ ದೇಶಗಳ ನಡುವೆ ಮುಂದುವರಿಯುತ್ತಿರುವ ಸಹಕಾರವನ್ನು ಪರಿಶೀಲಿಸಲಿದ್ದಾರೆ. ಪ್ರಮುಖ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಪಾಲುದಾರಿಕೆಯನ್ನು ಹೆಚ್ಚಿಸುವ ಮಾರ್ಗಗಳ ಕುರಿತು ಚರ್ಚಿಸಲಿದ್ದಾರೆ.
ಸ್ಥಳೀಯ ಕಾಲಮಾನ ನಿನ್ನೆ ಶುಕ್ರವಾರ ಸಂಜೆ ಬ್ಯೂನಸ್ ಐರಿಸ್ ತಲುಪಿದ ಮೋದಿಯವರು, ಎಜೀಜಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆಗಮಿಸಿದಾಗ ಅವರಿಗೆ ಔಪಚಾರಿಕ ಸ್ವಾಗತ ನೀಡಲಾಯಿತು.
ಅರ್ಜೆಂಟೀನಾ ಜೊತೆಗಿನ ಸಂಬಂಧಗಳನ್ನು ವೃದ್ಧಿಸುವತ್ತ ಗಮನಹರಿಸುವ ದ್ವಿಪಕ್ಷೀಯ ಭೇಟಿಗಾಗಿ ಬ್ಯೂನಸ್ ಐರಿಸ್‌ಗೆ ಬಂದಿಳಿದಿದ್ದೇನೆ. ಅಧ್ಯಕ್ಷ ಜೇವಿಯರ್ ಮಿಲಿ ಅವರನ್ನು ಭೇಟಿ ಮಾಡಲು ಮತ್ತು ಅವರೊಂದಿಗೆ ವಿವರವಾದ ಮಾತುಕತೆ ನಡೆಸಲು ನಾನು ಉತ್ಸುಕನಾಗಿದ್ದೇನೆ ಎಂದು ಆಗಮನಕ್ಕೆ ಮುನ್ನ ಪ್ರಧಾನಿ ಮೋದಿ ಬರೆದಿದ್ದರು.
ಕಳೆದ 57 ವರ್ಷಗಳಲ್ಲಿ ಅರ್ಜೆಂಟೀನಾಕ್ಕೆ ಪ್ರಧಾನಿ ಮಟ್ಟದಲ್ಲಿ ಭಾರತೀಯರು ನೀಡುವ ಮೊದಲ ದ್ವಿಪಕ್ಷೀಯ ಭೇಟಿ ಇದಾಗಿದೆ. ಪ್ರಧಾನಿಯಾಗಿ ಮೋದಿ ದೇಶಕ್ಕೆ ನೀಡುತ್ತಿರುವ ಎರಡನೇ ಭೇಟಿ ಇದಾಗಿದ್ದು, 2018 ರಲ್ಲಿ ಜಿ20 ಶೃಂಗಸಭೆಗೆ ಆಗಮಿಸಿದ್ದರು.
ಇದು ಪ್ರಧಾನ ಮಂತ್ರಿಯವರ ಐದು ರಾಷ್ಟ್ರಗಳ ಭೇಟಿಯ ಮೂರನೇ ಭೇಟಿಯ ದೇಶವಾಗಿದೆ. ಹೋಟೆಲ್‌ಗೆ ಆಗಮಿಸಿದ ಪ್ರಧಾನಿಯವರನ್ನು ಭಾರತೀಯ ಸಮುದಾಯದ ಸದಸ್ಯರು "ಮೋದಿ, ಮೋದಿ" ಮತ್ತು "ಭಾರತ್ ಮಾತಾ ಕಿ ಜೈ" ಘೋಷಣೆಗಳೊಂದಿಗೆ ಸ್ವಾಗತಿಸಿದರು, ಅವರೊಂದಿಗೆ ಪ್ರಧಾನಿ ಸಂಕ್ಷಿಪ್ತವಾಗಿ ಮಾತುಕತೆ ನಡೆಸಿದರು. ಮೋದಿಯವರನ್ನು ಸ್ವಾಗತಿಸಲು ಸಾಂಸ್ಕೃತಿಕ ನೃತ್ಯ ಪ್ರದರ್ಶನ ನಡೆಸಲಾಯಿತು.
ನಮ್ಮ ರಾಷ್ಟ್ರಗಳ ನಡುವಿನ ಶಾಶ್ವತ ಸ್ನೇಹವನ್ನು ಆಚರಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕೃತ ಭೇಟಿಗಾಗಿ ಅರ್ಜೆಂಟೀನಾದ ರೋಮಾಂಚಕ ನಗರವಾದ ಬ್ಯೂನಸ್ ಐರಿಸ್‌ಗೆ ಬಂದಿಳಿದಿದ್ದಾರೆ. ವಿಮಾನ ನಿಲ್ದಾಣದಲ್ಲಿ ಅವರಿಗೆ ಔಪಚಾರಿಕ ಸ್ವಾಗತ ನೀಡಲಾಯಿತು. 57 ವರ್ಷಗಳಲ್ಲಿ ಅರ್ಜೆಂಟೀನಾಕ್ಕೆ ಭಾರತೀಯ ಪ್ರಧಾನಿಯೊಬ್ಬರು ನೀಡುತ್ತಿರುವ ಮೊದಲ ದ್ವಿಪಕ್ಷೀಯ ಭೇಟಿ ಇದಾಗಿದ್ದು, ಇದು ಭಾರತ-ಅರ್ಜೆಂಟೀನಾ ಸಂಬಂಧಗಳಲ್ಲಿ ಹೊಸ ಅಧ್ಯಾಯವನ್ನು ಸೂಚಿಸುತ್ತದೆ" ಎಂದು ವಿದೇಶಾಂಗ ಸಚಿವಾಲಯದ (MEA) ವಕ್ತಾರ ರಣಧೀರ್ ಜೈಸ್ವಾಲ್ ಎಕ್ಸ್ ಖಾತೆಯಲ್ಲಿ ತಿಳಿಸಿದ್ದಾರೆ.
ಮೋದಿ ತಮ್ಮ ಭೇಟಿಯ ಸಮಯದಲ್ಲಿ, ರಕ್ಷಣೆ, ಕೃಷಿ, ಗಣಿಗಾರಿಕೆ, ತೈಲ ಮತ್ತು ಅನಿಲ, ನವೀಕರಿಸಬಹುದಾದ ಇಂಧನ, ವ್ಯಾಪಾರ ಮತ್ತು ಹೂಡಿಕೆ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಭಾರತ-ಅರ್ಜೆಂಟೀನಾ ಪಾಲುದಾರಿಕೆಯನ್ನು ಮತ್ತಷ್ಟು ಹೆಚ್ಚಿಸಲು ಅಧ್ಯಕ್ಷ ಮಿಲೀ ಅವರೊಂದಿಗೆ ವ್ಯಾಪಕ ಮಾತುಕತೆ ನಡೆಸಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆ ತಿಳಿಸಿದೆ.
ಭಾರತೀಯ ಸಂಸ್ಕೃತಿ, ನೃತ್ಯದ ಮೂಲಕ ಪ್ರಧಾನಿ ಸ್ವಾಗತ
ಅರ್ಜೆಂಟೀನಾದ ಬ್ಯೂನಸ್ ಐರಿಸ್‌ಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ ಸಂದರ್ಭದಲ್ಲಿ ಅಲ್ಲಿನ ಕಲಾವಿದರು ತಮ್ಮ ಸಂತೋಷ ಮತ್ತು ಗೌರವವನ್ನು ವ್ಯಕ್ತಪಡಿಸಿದರು. ಭಾರತದ ಸಾಂಪ್ರದಾಯಿಕ ಸಂಗೀತ ಮತ್ತು ನೃತ್ಯದಿಂದ ಸಮೃದ್ಧವಾದ ಸಾಂಸ್ಕೃತಿಕ ಪ್ರದರ್ಶನ ನೀಡಿ ಪ್ರಧಾನಿ ಮೋದಿಯವರನ್ನು ಸ್ವಾಗತಿಸಿದರು.
ಭಾರತ ಮತ್ತು ಅರ್ಜೆಂಟೀನಾ ನಡುವೆ ಬೆಳೆಯುತ್ತಿರುವ ಸಾಂಸ್ಕೃತಿಕ ಸಂಬಂಧಗಳನ್ನು ಎತ್ತಿ ತೋರಿಸುವ ಮೂಲಕ ಭಾರತೀಯ ನಾಯಕನ ಮುಂದೆ ತಮ್ಮ ಕಲೆಯನ್ನು ಪ್ರಸ್ತುತಪಡಿಸುವುದು ನಮ್ಮ ಸೌಭಾಗ್ಯ ಎಂದು ಇಲ್ಲಿನ ಕಲಾವಿದರು ಹರ್ಷ ವ್ಯಕ್ತಪಡಿಸಿದರು.
Advertisement