9 ISI ಏಜೆಂಟ್, 50ಕ್ಕೂ ಹೆಚ್ಚು Pak ಸೈನಿಕರ ಹತ್ಯೆ: 'Operation Baam' ಮೂಲಕ ಪಾಕ್‌ನಲ್ಲಿ ರಕ್ತದೋಕುಳಿ ಹರಿಸಿದ ಬಲೂಚ್!

ಪಾಕಿಸ್ತಾನ ಸೇನೆ ಮತ್ತು ಫ್ರಾಂಟಿಯರ್ ಕಾರ್ಪ್ಸ್‌ನ ಕನಿಷ್ಠ 50 ಸಿಬ್ಬಂದಿ ಸಾವನ್ನಪ್ಪಿದ್ದಾರೆ ಮತ್ತು 51 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಬಿಎಲ್‌ಎಫ್ ಹೇಳಿಕೊಂಡಿದೆ.
ಬಲೂಚ್ ಹೋರಾಟಗಾರರು
ಬಲೂಚ್ ಹೋರಾಟಗಾರರು
Updated on

ಕಳೆದ 5 ದಿನಗಳಲ್ಲಿ ಬಲೂಚಿಸ್ತಾನ್ ಮತ್ತು ಪಾಕಿಸ್ತಾನದ ಇತರ ಪ್ರಾಂತ್ಯಗಳಲ್ಲಿ ಸುಮಾರು 84 ದಾಳಿಗಳು ನಡೆದಿವೆ. ಈ ಎಲ್ಲಾ ದಾಳಿಗಳ ಜವಾಬ್ದಾರಿಯನ್ನು ಬಲೂಚಿಸ್ತಾನ್ ಲಿಬರೇಶನ್ ಫ್ರಂಟ್ (BLA) ವಹಿಸಿಕೊಂಡಿದೆ. ಇದನ್ನು 'ಆಪರೇಷನ್ ಬಾಮ್' ನ ಭಾಗವೆಂದು ಹೇಳಿದೆ. ಜುಲೈ 8ರಂದು ಬಿಎಲ್ಎಫ್ ಆಪರೇಷನ್ ಬಾಮ್ ಆರಂಭವನ್ನು ಘೋಷಿಸಿತ್ತು.

84 ಸಂಘಟಿತ ದಾಳಿಗಳನ್ನು ಒಳಗೊಂಡ ದೊಡ್ಡ ಪ್ರಮಾಣದ ಮಿಲಿಟರಿ ಕಾರ್ಯಾಚರಣೆಯಾದ ಆಪರೇಷನ್ ಬಾಮ್ ಅನ್ನು "ಯಶಸ್ವಿಯಾಗಿ ಪೂರ್ಣಗೊಳಿಸಿದ್ದೇವೆ" ಎಂದು BLA ಘೋಷಿಸಿದೆ. ಶುಕ್ರವಾರ ಸಂಜೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಬಿಎಲ್‌ಎಫ್ ವಕ್ತಾರ ಮೇಜರ್ ಗ್ವಾಹ್ರಾಮ್ ಬಲೋಚ್, ಜುಲೈ 9 ಮತ್ತು ಜುಲೈ 11ರ ನಡುವೆ ಪಾಕಿಸ್ತಾನಿ ಮಿಲಿಟರಿ ಸಿಬ್ಬಂದಿ, ಗುಪ್ತಚರ ಕಾರ್ಯಕರ್ತರು ಮತ್ತು ಪ್ರಮುಖ ರಾಜ್ಯ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ದಾಳಿಗಳು ನಡೆದಿವೆ ಎಂದು ಹೇಳಿದರು.

ಬಲೂಚಿಸ್ತಾನ್ ಪೋಸ್ಟ್ ಪ್ರಕಾರ, ಪಾಕಿಸ್ತಾನ ಸೇನೆ ಮತ್ತು ಫ್ರಾಂಟಿಯರ್ ಕಾರ್ಪ್ಸ್‌ನ ಕನಿಷ್ಠ 50 ಸಿಬ್ಬಂದಿ ಸಾವನ್ನಪ್ಪಿದ್ದಾರೆ ಮತ್ತು 51 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಬಿಎಲ್‌ಎಫ್ ಹೇಳಿಕೊಂಡಿದೆ. ಮುಸಾಖೇಲ್ ಪ್ರದೇಶದ ಚೆಕ್‌ಪಾಯಿಂಟ್‌ನಲ್ಲಿ ಒಂಬತ್ತು ಗುಪ್ತಚರ ಏಜೆಂಟ್‌ಗಳೆಂದು ಹೇಳಲಾದವರನ್ನು ಗಲ್ಲಿಗೇರಿಸಲಾಗಿದೆ ಎಂದು ಗುಂಪು ಪ್ರತಿಪಾದಿಸಿದೆ. ಬಿಎಲ್‌ಎಫ್ ತನ್ನ ಮಿಲಿಟರಿ ಕಾರ್ಯಾಚರಣೆ ಆಪರೇಷನ್ ಬಾಮ್‌ನ 80 ಪ್ರತಿಶತ ಗುರಿಗಳನ್ನು ಕೇವಲ 4 ದಿನಗಳಲ್ಲಿ ಪೂರ್ಣಗೊಳಿಸಿದೆ ಎಂದು ಹೇಳಲಾಗಿದೆ.

ಬಲೂಚ್ ಲಿಬರೇಶನ್ ಫ್ರಂಟ್ ಜುಲೈ 8 ರಂದು ಆಪರೇಷನ್ ಬಾಮ್ ಅನ್ನು ಪ್ರಾರಂಭಿಸಿದೆ. ಇದು ಪಾಕಿಸ್ತಾನ ಸರ್ಕಾರದ ವಿರುದ್ಧ ಘೋಷಿಸಲಾದ ಅಭಿಯಾನವಾಗಿದ್ದು, ಇದನ್ನು ಬಲೂಚ್ ರಾಷ್ಟ್ರೀಯ ವಿಮೋಚನಾ ಹೋರಾಟದ ಹೊಸ ಉದಯ ಎಂದು ವಿವರಿಸಲಾಗುತ್ತಿದೆ. ಈ ಕಾರ್ಯಾಚರಣೆಯ ಅಡಿಯಲ್ಲಿ, ಮಕ್ರಾನ್ ಕರಾವಳಿ ಪ್ರದೇಶದಿಂದ ಕೊಹ್-ಎ-ಸುಲೈಮಾನ್ ಪರ್ವತದವರೆಗೆ ನಿರಂತರ ಮತ್ತು ಮಾರಕ ದಾಳಿಗಳನ್ನು ನಡೆಸುವುದಾಗಿ ಬಿಎಲ್‌ಎಫ್ ಪ್ರತಿಜ್ಞೆ ಮಾಡಿದೆ. ಬಿಎಲ್‌ಎಫ್ ವಕ್ತಾರ ಗ್ವಾಹರಾಮ್ ಬಲೂಚ್ ಅನ್ನು ಉಲ್ಲೇಖಿಸಿ ಪ್ರಕಟವಾದ ವರದಿಯ ಪ್ರಕಾರ, ಬಲೂಚ್ ಹೋರಾಟಗಾರರು ದೊಡ್ಡ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಲು ಸಮರ್ಥರಾಗಿದ್ದಾರೆ ಎಂದು ತೋರಿಸುವುದು ಕಾರ್ಯಾಚರಣೆಯ ಉದ್ದೇಶವಾಗಿದೆ.

ಬಲೂಚ್ ಹೋರಾಟಗಾರರು
Pakistan: ಮತ್ತೆ Balochistan ಬಂಡುಕೋರರ ದಾಳಿ; 9 ಪ್ರಯಾಣಿಕರ ಸಾವು; ಹೊಣೆ ಹೊತ್ತ BLF!

5 ದಿನಗಳಲ್ಲಿ ಕ್ಷಿಪ್ರ ದಾಳಿಗಳು

ಆಪರೇಷನ್ ಬಾಮ್ ಪ್ರಾರಂಭವಾದ ಕೆಲವೇ ಗಂಟೆಗಳಲ್ಲಿ, ಪಂಜ್‌ಪುರ, ಸುರ್ಬ್, ಕೆಚ್ ಮತ್ತು ಖರನ್‌ಗಳಲ್ಲಿ 17 ದಾಳಿಗಳ ಜವಾಬ್ದಾರಿಯನ್ನು ಬಲೂಚ್ ಲಿಬರೇಶನ್ ಫ್ರಂಟ್ ವಹಿಸಿಕೊಂಡಿದೆ. ಮೇಜರ್ ಗ್ವಾಹರಾಮ್ ಅವರು ಇಲ್ಲಿಯವರೆಗೆ 84ಕ್ಕೂ ಹೆಚ್ಚು ದಾಳಿಗಳನ್ನು ನಡೆಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಬಲೂಚ್‌ಗಳು ಭದ್ರತಾ ಪಡೆಗಳು ಮತ್ತು ಪಾಕಿಸ್ತಾನದ ಆರ್ಥಿಕ ಹಿತಾಸಕ್ತಿಗಳನ್ನು ಗುರಿಯಾಗಿಸಿಕೊಂಡಿದ್ದಾರೆ. ಈ ದಾಳಿಗಳು ಸಂಪರ್ಕ ಮತ್ತು ರೈಲು ಸೇವೆಗಳನ್ನು ಅಡ್ಡಿಪಡಿಸಿವೆ. ಇದರ ಜೊತೆಗೆ, ಚೀನಾ ಪಾಕಿಸ್ತಾನ ಆರ್ಥಿಕ ಕಾರಿಡಾರ್‌ನ ಪ್ರಮುಖ ವಿಭಾಗಗಳನ್ನು ಸಹ ನಿರ್ಬಂಧಿಸಲಾಗಿದೆ.

ಬಲೂಚ್ ಲಿಬರೇಶನ್ ಫ್ರಂಟ್ ಬಲೂಚಿಸ್ತಾನಕ್ಕೆ ಸ್ವಾತಂತ್ರ್ಯವನ್ನು ಬಯಸುತ್ತದೆ. ಈ ಗುಂಪು 1964ರಿಂದ ಪಾಕಿಸ್ತಾನವು ಈ ಪ್ರದೇಶದ ಸಂಪನ್ಮೂಲಗಳನ್ನು ಆಕ್ರಮಿಸಿಕೊಳ್ಳುವ ಮೂಲಕ ಇಲ್ಲಿನ ಜನರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತಿದೆ ಎಂದು ಆರೋಪಿಸುತ್ತಿದೆ. ವಾಸ್ತವವಾಗಿ, ಬ್ರಿಟಿಷ್ ಭಾರತದಿಂದ ಸ್ವಾತಂತ್ರ್ಯ ಪಡೆದ ನಂತರ ಬಲೂಚಿಸ್ತಾನವನ್ನು ಸ್ವತಂತ್ರ ರಾಜ್ಯವೆಂದು ಘೋಷಿಸಲಾಯಿತು, ಆದರೂ 1948 ರ ನಂತರ ಅದನ್ನು ಪಾಕಿಸ್ತಾನದಲ್ಲಿ ಸೇರಿಸಲಾಯಿತು. ಹಲವು ದಶಕಗಳಿಂದ, ಇಲ್ಲಿನ ಜನರು ಸ್ವಾತಂತ್ರ್ಯವನ್ನು ಕೋರುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com